ADVERTISEMENT

ಸಂಘಕ್ಕೆ ಚೈತನ್ಯ ತುಂಬಲು ಸಹಕರಿಸಿ: ಸುರೇಶ್‌ಬಾಬು ಮನವಿ

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 15:23 IST
Last Updated 17 ಆಗಸ್ಟ್ 2021, 15:23 IST
ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ನಾಮನಿರ್ದೇಶಕ ಸದಸ್ಯರನ್ನು ಕೋಲಾರದಲ್ಲಿ ಮಂಗಳವಾರ ಸನ್ಮಾನಿಸಲಾಯಿತು
ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ನಾಮನಿರ್ದೇಶಕ ಸದಸ್ಯರನ್ನು ಕೋಲಾರದಲ್ಲಿ ಮಂಗಳವಾರ ಸನ್ಮಾನಿಸಲಾಯಿತು   

ಕೋಲಾರ: ‘ಸಂಘಟನೆ ಬಲಗೊಳಿಸುವ ದೃಷ್ಟಿಯಿಂದ ಹಾಗೂ ಸಂಘಕ್ಕೆ ಚೈತನ್ಯ ತುಂಬಲು 2ನೇ ಹಂತದಲ್ಲಿ ಕೆಲವರನ್ನು ನಾಮನಿರ್ದೇಶನ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು.

ಇಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿ, ‘ಹೊಸ ಪದಾಧಿಕಾರಿಗಳು ಸಂಘವನ್ನು ಮತ್ತಷ್ಟು ಬಲಗೊಳಿಸುವ ಹಾದಿಯಲ್ಲಿ ಕೈಜೋಡಿಸಿ ಮುನ್ನಡೆಯಬೇಕು. ಸಂಘಕ್ಕೆ 5 ಎಕರೆ ಜಾಗ ಪಡೆಯಲು ಪ್ರಸ್ತಾವ ಸಲ್ಲಿಸಿದ್ದು, ಶೀಘ್ರವೇ ಜಮೀನು ಮಂಜೂರಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸದ್ಯ ಇರುವ ಸಂಘದ ಕಟ್ಟಡದಲ್ಲಿ ₹ 1.75 ಕೋಟಿ ವೆಚ್ಚದಲ್ಲಿ 3 ಮಹಡಿ ನಿರ್ಮಿಸುವ ಉದ್ದೇಶವಿದೆ. ಹೊಸದಾಗಿ ಅಂಗಡಿ ಮಳಿಗೆಗಳು, ಸಭಾಂಗಣ, ಆಡಳಿತ ಕಚೇರಿ ನಿರ್ಮಿಸಲಾಗುತ್ತದೆ. ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಸದಸ್ಯರಿಗೆ ಆಕ್ಷೇಪವಿದ್ದರೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಲು ಅವಕಾಶವಿದೆ. ನೌಕರರ ಹಿತ ಕಾಯುವಷ್ಟು ದಿನ ಇಲ್ಲಿ ಕೆಲಸ ಮಾಡಬಹುದು. ಸಾಮಾಜಿಕ ಕಾಳಜಿಯಿದ್ದರೆ ಉತ್ತಮ ಕೆಲಸ ಸಾಧ್ಯ. ರಾಜ್ಯ ಸಂಘದ ನಿರ್ದೇಶನದಂತೆ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ’ ಎಂದರು.

ADVERTISEMENT

‘ರಾಜ್ಯ ಸಂಘವೂ ಜಿಲ್ಲೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕ್ರೀಡಾಕೂಟ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದೇವೆ’ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ತಿಳಿಸಿದರು.

ಕೆಲಸ ವಿಳಂಬ: ‘ಕೆಜಿಐಡಿಯಲ್ಲಿ ಶಿಕ್ಷಕರ ಕೆಲಸಗಳು ವಿಳಂಬವಾಗುತ್ತಿವೆ. ಶಿಕ್ಷಕರು ಕೋವಿಡ್ ಸಂದರ್ಭದಲ್ಲೂ ಕಾರ್ಯ ನಿರ್ವಹಿಸುತ್ತಿದ್ದು, ಅವರ ಕೆಲಸಗಳನ್ನು ಇಲಾಖೆಗಳಲ್ಲಿ ಶೀಘ್ರವಾಗಿ ಮಾಡಿ ಕೊಡಬೇಕು’ ಎಂದು ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ ಮನವಿ ಮಾಡಿದರು.

‘ಕೋವಿಡ್ ಆತಂಕದ ನಡುವೆಯೂ ಸಂಘ ಉತ್ತಮವಾಗಿ ಕೆಲಸ ಮಾಡಿದೆ. ಜಂಟಿ ಸಮಾಲೋಚನಾ ಸಮಿತಿ ರಚಿಸಲಾಗಿದೆ. ನೌಕರರ ಸಮಸ್ಯೆಗಳಿದ್ದರೆ ಗಮನಕ್ಕೆ ತರಬೇಕು’ ಎಂದು ಸಂಘದ ಖಜಾಂಚಿ ವಿಜಯ್ ಕೋರಿದರು.

ಸಂಘಕ್ಕೆ 2ನೇ ಹಂತದಲ್ಲಿ ನಾಮನಿರ್ದೇಶನಗೊಂಡ ವಿಜಯಮ್ಮ, ವೆಂಕಟಶಿವಪ್ಪ, ಚಂದ್ರಪ್ಪ, ಎನ್.ಎಸ್.ಭಾಗ್ಯ, ಪ್ರೇಮಾ, ಕಲಾವತಿ, ಎ.ಬಿ.ನವೀನಾ, ಮಂಜುನಾಥ್, ವೆಂಕಟಾಚಲಪತಿಗೌಡ, ಎಂ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಗೌರವಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಗೌತಮ್, ಜಂಟಿ ಕಾರ್ಯದರ್ಶಿಗಳಾದ ಕದಿರಪ್ಪ, ಮಂಜುನಾಥ್, ರವಿ, ಸಂಘಟನಾ ಕಾರ್ಯದರ್ಶಿ ಅನಿಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.