
ಕೆಜಿಎಫ್ ತಾಲ್ಲೂಕು ಕ್ಯಾಸಂಬಳ್ಳಿಯಲ್ಲಿ ಬುಧವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು
ಕೆಜಿಎಫ್: ಹಿಂದೂಗಳು ಎಂದು ಗುರುತಿಸಿಕೊಂಡರೆ ದೇಶದಲ್ಲಿ ನೂರು ಕೋಟಿ ಜನ ಆಗುತ್ತಾರೆ. ಅದೇ ಜನ ಜಾತಿಯಿಂದ ಗುರುತಿಸಿದರೆ ಅಲ್ಪಸಂಖ್ಯಾತರಾಗುತ್ತೇವೆ. ನಾವು ಯಾವಾಗಲೂ ಬಹುಸಂಖ್ಯಾತರೆಂದೇ ಗುರುತಿಸಿಕೊಳ್ಳಬೇಕೆಂದು ಆರ್‌ಎಸ್‌ಎಸ್ ಪ್ರಚಾರಕ ಜಗದೀಶ್ ಹೇಳಿದರು.
ಕ್ಯಾಸಂಬಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಮನೆಯೊಳಗೆ ನಾಯಿಗಳನ್ನು ಒಳಗೆ ಕರೆದುಕೊಂಡು ಹೋಗುತ್ತೇವೆ. ಆದರೆ, ಮನುಷ್ಯನನ್ನು ಜಾತಿ ಹೆಸರಿನಿಂದ ಮನೆಯಿಂದ ಹೊರಗಿಟ್ಟಿದ್ದೇವೆ. ಅಸ್ಪಶೃತೆ ಕೇರಿಯಲ್ಲಿಲ್ಲ. ಅದು ನಮ್ಮ ಮನಸ್ಸಿನಲ್ಲಿದೆ. ಮನುಷ್ಯ ಗುಣದಿಂದ ಶ್ರೇಷ್ಠನಾಗುತ್ತಾನೆ. ಅಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮುಖಂಡೆ ಗೀತಾರೆಡ್ಡಿ ಮಾತನಾಡಿ, ಭಾರತವು ಅನೇಕ ಆಕ್ರಮಣಗಳಿಗೆ ತುತ್ತಾಗಿದ್ದರೂ, ಇನ್ನೂ ಗಟ್ಟಿಯಾಗಿ ನಿಂತಿವೆ. ಮತಾಂತರವಾಗದೆ ಇನ್ನೂ ಮೂಲ ಹಾಗೆಯೇ ಇದೆ. ಅದು ದೇಶದ ಜನರ ಮನೋಧರ್ಮ ಎಂದರು.
ಮಾಲೂರಿನ ತಾಲ್ಲೂಕಿನ ಬೆಳ್ಳಾವಿ ಮಠದ ಮಹಾಂತೇಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ಅದನ್ನು ಉಳಿಸುವ ಪ್ರಯತ್ನ ಮತ್ತು ಜವಾಬ್ದಾರಿ ಇಂದಿನ ಯುವಕರ ಮೇಲಿದೆ. 12 ಮತ್ತು 16ನೇ ಶತಮಾನದ ಕಾಲಘಟ್ಟದಲ್ಲಿ ಶರಣರು ಹಿಂದೂ ಧರ್ಮದ ಬಗ್ಗೆ ಹೇಳಿದ್ದಾರೆ. ಎಲ್ಲಾ ಮತಗಳು ಸೇರಿ ಒಂದು ಧರ್ಮವಾಗಿದೆ. ಜಾತಿಯನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಹಿಂದೂ ಎಂದು ಹೇಳಿಕೊಳ್ಳಬೇಕು. ನಾವು ಎಚ್ಚೆತ್ತುಕೊಳ್ಳುವುದಕ್ಕೆ ಹಿಂದೂ ಸಮಾಜೋತ್ಸವ ಎಲ್ಲಾ ಕಡೆಗಳಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಿಂದೂ ಸಮಾಜೋತ್ಸವದ ಅಂಗವಾಗಿ ಇಡೀ ಕ್ಯಾಸಂಬಳ್ಳಿ ಗ್ರಾಮ ಕೇಸರಿಮಯವಾಗಿತ್ತು. ನೂರಾರು ಮಹಿಳೆಯರು ಕಳಸಹೊತ್ತು ಶೋಭಾಯಾತ್ರೆ ನಡೆಸಿದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ, ಡಾ.ನಾಗಪ್ಪ, ನವೀನ್ ರಾಮ, ಜಯಪ್ರಕಾಶ್ ನಾಯ್ಡು, ವೈ.ಸಂಪಂಗಿ, ಮೋಹನಕೃಷ್ಣ, ರವಿರೆಡ್ಡಿ , ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.