ADVERTISEMENT

ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಚುರುಕು: ಗುತ್ತಿಗೆದಾರರಿಗೆ ಶಾಸಕಿ ರೂಪಕಲಾ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 3:22 IST
Last Updated 5 ನವೆಂಬರ್ 2020, 3:22 IST
ಕೆಜಿಎಫ್‌ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆ ಸಂಕೀರ್ಣವನ್ನು ಶಾಸಕಿ ಎಂ.ರೂಪಕಲಾ ವೀಕ್ಷಿಸಿದರು
ಕೆಜಿಎಫ್‌ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆ ಸಂಕೀರ್ಣವನ್ನು ಶಾಸಕಿ ಎಂ.ರೂಪಕಲಾ ವೀಕ್ಷಿಸಿದರು   

ಕೆಜಿಎಫ್‌: ಸರ್ಕಾರ ನಿಗದಿ ಮಾಡಿರುವ ಅವಧಿಗಿಂತ ಮೊದಲೇ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಮುಗಿಸಿಕೊಡಬೇಕು ಎಂದು ಶಾಸಕಿ ಎಂ.ರೂಪಕಲಾ ಗುತ್ತಿಗೆದಾರರಿಗೆ ಸೂಚಿಸಿದರು.

ರಾಬರ್ಟ್‌ಸನ್‌ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ₹8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಆಸ್ಪತ್ರೆ ಸಂಕೀರ್ಣದ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

ಗುತ್ತಿಗೆಯಲ್ಲಿ ಹನ್ನೊಂದು ತಿಂಗಳ ಅವಧಿ ನೀಡಲಾಗಿದೆ. ಈಗಾಗಲೇ ಎರಡು ತಿಂಗಳು ಪೂರ್ಣಗೊಂಡಿದೆ. ಉಳಿದ 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಅದಕ್ಕಿಂತ ಮೊದಲೇ ಆದರೆ ರೋಗಿಗಳಿಗೆ ಅನುಕೂಲ. ಕಾಮಗಾರಿ ನಡೆಸುವಾಗ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಆಸ್ಪತ್ರೆಯ ಒಂದು ಭಾಗದ ಗೇಟ್‌ನ್ನು ಕಾಮಗಾರಿಗೆ ಬಳಸಿಕೊಳ್ಳಬೇಕು. ಕಾಮಗಾರಿಯಿಂದಾಗಿ ಆಸ್ಪತ್ರೆಯ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣವಾದ ಕೋವಿಡ್‌ ಆಸ್ಪತ್ರೆಯನ್ನು ವೀಕ್ಷಿಸಿದರು. ಕೋವಿಡ್‌ ಆಸ್ಪತ್ರೆ ತಕ್ಷಣದಿಂದಲೇ ಕಾರ್ಯಾರಂಭ ಮಾಡಲಿದೆ. ರೋಗಿಗಳಿಗೆ ಬೇಕಾದ ಆಮ್ಲಜನಕ ವ್ಯವಸ್ಥೆ ಮಾಡಲಾಗಿದೆ. 35 ಆಮ್ಲಜನಕ ಸಿಲಿಂಡರ್‌ಗಳು ರೋಗಿಯ ಸೇವೆಗೆ ಇರುತ್ತದೆ. ಏಕಕಾಲದಲ್ಲಿ 70 ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆಯಬಹುದು. ನಿರಂತರ ವಿದ್ಯುತ್ ಪೂರೈಕೆಗಾಗಿ 100 ವೋಲ್ಟ್‌ನ ನೂತನ ಜನರೇಟರ್‌ ಚಾಲನೆಯಾಗಲಿದೆ ಎಂದು ತಿಳಿಸಿದರು.

ನಂತರ ನಗರಸಭೆಯ ನೂತನ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಮತ್ತು ಉಪಾಧ್ಯಕ್ಷೆ ದೇವಿ ಅವರ ಅಧಿಕೃತ ಕಚೇರಿಯ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸುನಿಲ್‌, ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.