ADVERTISEMENT

ವೇಮಗಲ್: ಮಡಿಕೆ ನೀರು... ವ್ಯಾಪಾರ ಜೋರು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 8:09 IST
Last Updated 27 ಏಪ್ರಿಲ್ 2025, 8:09 IST
   

ವೇಮಗಲ್: ದಿನೇದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ನೆತ್ತಿ ಸುಡುವ ಬಿಸಿಲಿನಿಂದ ಕಂಗೆಟ್ಟ ಬಡವರು ತಂಪಾದ ನೀರು ಕುಡಿಯಲು ಮಣ್ಣಿನ ಮಡಿಕೆಯ ಮೊರೆ ಹೋಗಿದ್ದಾರೆ. ವೇಮಗಲ್ ಪಟ್ಟಣದಲ್ಲಿ ಬಡವರ ಪಾಲಿನ ರೆಫ್ರಿಜಿರೇಟರ್‌, ನೈಸರ್ಗಿಕ ಫ್ರಿಡ್ಜ್‌ ಎಂದೇ ಕರೆಸಿಕೊಳ್ಳುವ ಮಣ್ಣಿನ ಮಡಿಕೆಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ.

ಕಳೆದ ಎರಡು ವಾರಗಳ ಹಿಂದೆ ಮಳೆಬಿದ್ದು ಸ್ವಲ್ಪ ತಂಪಾಗಿದ್ದ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಸಿಲು ಮತ್ತೆ ಹೆಚ್ಚಿದೆ. ಇಂತಹ ಬಿಸಿಲಿಗೆ ಬಾಯಾರಿಕೆಯನ್ನು ನೀಗಿಸಲು ನೀರು ಸ್ವಲ್ಪ ತಣ್ಣಗಿದ್ದರೆ ಹೆಚ್ಚು ಸಮಾಧಾನ. ಆದರೆ, ಮನೆಯ ಪಾತ್ರೆಗಳಲ್ಲಿಟ್ಟ ನೀರು ಕುಡಿಯಲು ಹೋದರೆ ನೀರೂ ಸಹ ಬಿಸಿಯಾಗಿರುತ್ತದೆ. ಆದ್ದರಿಂದ  ಕಡಿಮೆ ಖರ್ಚಿನಲ್ಲಿ ನೀರನ್ನು ತಂಪಾಗಿಡುವ ಮಡಿಕೆಯತ್ತ ತಾಲ್ಲೂಕಿನ ಜನ ಧಾವಿಸುತ್ತಿದ್ದಾರೆ.

ಕಳೆದ ಎರಡು ವಾರಗಳಿಂದ ಹತ್ತು ಗಂಟೆಯಾದರೆ ಸಾಕು ನೆತ್ತಿ ಸುಡುವ ಬಿಸಿಲು. ಚತ್ರಿ, ಟವಲ್, ಕರ್ಚಿಪ್ ಸಹಾಯದಿಂದ ಜನರು ನೆತ್ತಿ ಸುಡುವುದನ್ನು ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಹೊರಗೂ ಬಿಸಿಲು, ಮನೆಯೊಳಗೆ ಧಗೆ ತಾಳಲಾಗುತ್ತಿಲ್ಲ. 

ADVERTISEMENT

ಉಳ್ಳವರಿಗೆ ಫ್ಯಾನ್, ಏಸಿ, ಫ್ರಿಡ್ಜ್‌ ಇದ್ದರೆ, ಬಡವರು ಬಿಸಣಿಕೆಯ ಗಾಳಿ, ಮಡಿಕೆ ನೀರನ್ನೇ ಆಶ್ರಯಿಸಿದ್ದಾರೆ. ಕೆಂಪು ಮಣ್ಣಿನಲ್ಲಿ ತಯಾರಾಗುವ ಮಡಿಕೆಯಲ್ಲಿ ನೀರು ಹಾಕಿಟ್ಟರೆ ತಂಪಾಗಿರುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳೆಯದು.

10 ಲೀಟರ್‌ ಸಾಮರ್ಥ್ಯದ ಕೆಂಪು ಮಣ್ಣಿನ ಹರಿವೆಯ ದರ ₹400ರಿಂದ ಆರಂಭವಾಗುತ್ತದೆ. ಇದು ಮಾಮೂಲಿಗಿಂತ ಸ್ವಲ್ಪ ದಪ್ಪಗಾಗಿರುತ್ತದೆ. ಹೀಗಾಗಿ ಕೆಂಪು ಬಣ್ಣದ ಮಡಿಕೆಯ ಗಾತ್ರ ಹೆಚ್ಚಾದಷ್ಟು ದರ ಹೆಚ್ಚಾಗಿರುತ್ತದೆ. ಇದರಲ್ಲೇ ತೆಳ್ಳಗಿರುವ ಮಡಿಕೆಗಳ ದರ ಅರ್ಧದಷ್ಟು ಕಡಿಮೆ. ಕಪ್ಪು ಮಡಿಕೆಗಳ ದರ ಕೂಡ ಕಡಿಮೆಯೇ ಇದೆ. ಕಳೆದ ವರ್ಷದಲ್ಲಿದ್ದ ದರಕ್ಕೆ ಹೋಲಿಸಿದರೆ ಈ ವರ್ಷ ದರಗಳು ಸ್ವಲ್ಪ ಏರಿಕೆಯಾಗಿವೆ.

ಪಟ್ಟಣದಲ್ಲಿ ಮಧ್ಯಾಹ್ನದ ವೇಳೆಗೆ 36 ರಿಂದ 38 ಡಿಗ್ರಿ ವರೆಗೆ ತಾಪಮಾನ ಹೆಚ್ಚಾಗುತ್ತದೆ. ಇದರಿಂದ ಪಟ್ಟಣದ ಕೋಲಾರ ರಸ್ತೆಯಲ್ಲಿ, ಹಾಗೂ ಕುಂಬಾರ ಓಣಿಯಲ್ಲಿ ಮಣ್ಣಿನ ಮಡಿಕೆಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಮನೆಯಲ್ಲಿ ಫ್ರಿಡ್ಜ್‌ ಇದ್ದವರೂ ಮಡಿಕೆಗಳ ಮೊರೆ ಹೋಗುತ್ತಿರುವುದರಿಂದ ಬೇಡಿಕೆ ಹಾಗೂ ದರ ಎರಡೂ ಈ ವರ್ಷ ಹೆಚ್ಚಿವೆ ಎನ್ನುತ್ತಾರೆ ವ್ಯಾಪಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.