ಕೋಲಾರ: ‘ನಮ್ಮಲ್ಲಿ ಯಾವುದೇ ಅಧಿಕಾರ ಹಂಚಿಕೆ ಒಪ್ಪಂದ, ಸಂಧಾನ ಸೂತ್ರ ನಡೆದಿಲ್ಲ. ನಾನೂ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಕೆಎಂಎಫ್ ಡೆಲಿಗೇಟ್ ಆಗಿ ನಾನೇ ಹೋಗುತ್ತೇನೆ’ ಎಂದು ಕೋಮುಲ್ ನೂತನ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಒಕ್ಕೂಟದ ಮುಖ್ಯ ಕಚೇರಿಯಲ್ಲಿ ಶನಿವಾರ ಚುನಾವಣೆ ಪ್ರಕ್ರಿಯೆ ಬಳಿಕ ಮಾತನಾಡಿದ ಅವರು, ‘ನಿರ್ದೇಶಕ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಚುನಾವಣಾ ಪ್ರಕ್ರಿಯೆಯಲ್ಲಿ ಏಕೆ ಪಾಲ್ಗೊಂಡಿಲ್ಲ ಎಂಬುದು ನನಗೆ ಗೊತ್ತಿಲ್ಲ. ನನಗೆ ಬಹುಮತ ಇರುವುದೂ ಅವರ ಗೈರಿಗೆ ಕಾರಣ ಇರಬಹುದು. ಕೆಎಂಎಫ್‌ಗೆ ಡೆಲಿಗೇಟ್ ನಿಯೋಜನೆ ಸಂಬಂಧ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದರು.
‘ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಮೂರನೇ ಬಾರಿ ಕೋಮುಲ್ ಆಡಳಿತ ಮಂಡಳಿಯ ಚುಕ್ಕಾಣಿ ಸಿಕ್ಕಿದೆ. ಮೂರನೇ ಬಾರಿ ಅಧ್ಯಕ್ಷನಾಗಲು ಅವಕಾಶ ಮಾಡಿಕೊಟ್ಟ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹೇಳಿದರು.
‘ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಹೆಮ್ಮೆ ಇದೆ. ಒಳ್ಳೆಯ ಆಡಳಿತ ನೀಡುತ್ತೇನೆ. ಹೈನುಗಾರರಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಒಕ್ಕೂಟದಲ್ಲಿ ನಿತ್ಯ 8 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಮುಂದಿನ ದಿನಗಳಲ್ಲಿ 10 ಲಕ್ಷ ಲೀಟರ್ ಉತ್ಪಾದನೆ ಮಾಡುವ ಗುರಿ ಹೊಂದಿದ್ದೇನೆ. ಉತ್ಪಾದಕರಿಗೆ ಹೆಚ್ಚಿಗೆ ದರ ನೀಡಿ ಹೈನುಗಾರಿಕೆಯನ್ನು ಉತ್ತೇಜಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಒಕ್ಕೂಟದಲ್ಲಿ ಉತ್ಪಾದನೆಯಾಗುತ್ತಿರುವ ಹಾಲನ್ನು ಹೊರ ರಾಜ್ಯಗಳಿಗೆ ಸರಬರಾಜು ಮಾಡುವ ಉದ್ದೇಶ ಹೊಂದಿದ್ದೇನೆ’ ಎಂದು ವಿವರಿಸಿದರು.
ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರನ್ನು ನಂಜೇಗೌಡ ಸನ್ಮಾನಿಸಿದರು.
ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ನಿರ್ದೇಶಕರಾದ ಚಂಜಿಮಲೆ ಬಿ.ರಮೇಶ್, ಹನುಮೇಶ್, ಕೆ.ಕೆ.ಮಂಜುನಾಥ್, ಜಯಸಿಂಹ ಕೃಷ್ಣಪ್ಪ, ಕಾಂತಮ್ಮ ಸೋಮಣ್ಣ, ಶ್ರೀನಿವಾಸ್, ನಾಮನಿರ್ದೇಶಿತ ಸದಸ್ಯ ಯೂನಷ್ ಶರೀಫ್, ಮುಖಂಡರಾದ ಸೀಸಂದ್ರ ಗೋಪಾಲ್ ಗೌಡ, ಸುನಿಲ್, ಮಾಲೂರು ಅಶ್ವಥ್ ರೆಡ್ಡಿ, ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಅಧಿಕಾರಿ ಎನ್.ನಾಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.