ADVERTISEMENT

ರಾಹುಲ್ ಅಲ್ಲ; ತಾತ, ಅಜ್ಜಿ, ಅಮ್ಮ ಬಂದರೂ ಹೆದರಲ್ಲ: ಸಂಸದ ಎಸ್.ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 13:32 IST
Last Updated 17 ಏಪ್ರಿಲ್ 2024, 13:32 IST
ಎಸ್‌.ಮುನಿಸ್ವಾಮಿ
ಎಸ್‌.ಮುನಿಸ್ವಾಮಿ   

ಕೋಲಾರ: ‘ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ರಾಹುಲ್ ಗಾಂಧಿ ಮಾತ್ರವಲ್ಲ; ಅವರ ತಾತ, ಅಜ್ಜಿ, ಅಮ್ಮ ಬಂದರೂ ಹೆದರಲ್ಲ. ಕ್ಷೇತ್ರದಲ್ಲಿ ನರೇಂದ್ರ ಮೋದಿಯ ಜನಪ್ರಿಯತೆ, ಅಭಿವೃದ್ದಿ ಕೆಲಸಗಳಿಂದ ಜೆಡಿಎಸ್‌ ಅಭ್ಯರ್ಥಿ ಗೆಲುವು ಖಚಿತವಾಗಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಹುಲ್ ಬಂದರೆಂದರೆ ಕಾಂಗ್ರೆಸ್ ಸೋಲು ಖಚಿತ ಎಂದರ್ಥ. ಇದಕ್ಕೆ ಉತ್ತರ ಭಾರತದ ರಾಜ್ಯಗಳೇ ಸಾಕ್ಷಿ. ಅವರು ಇಲ್ಲೇ ಮೊಕ್ಕಾಂ ಹೂಡಿದರೂ ಮೈತ್ರಿ ಅಭ್ಯರ್ಥಿ ಮಲ್ಲೇಶ್‌ ಬಾಬು ಗೆಲುವು ತಡೆಯಲು ಸಾಧ್ಯವಿಲ್ಲ’ ಎಂದರು.

‘ದೇಶಕ್ಕೆ ನರೇಂದ್ರ ಮೋದಿ ಬೇಕೆಂದು ದೇವೇಗೌಡರು ತೀರ್ಮಾನ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಾಲಿನಲ್ಲಿ ಜೇನು ತುಪ್ಪ ಸೇರಿದಂತೆ ಆಗಿದೆ. ಈ ಹಿಂದೆ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಹಾಲಿನಲ್ಲಿ ಹುಳಿ ಹಿಡಿದಂತೆ ಇತ್ತು., ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಎಷ್ಟು ಚಿತ್ರಹಿಂಸೆ ಕೊಟ್ಟು ಅವರನ್ನು ಇಳಿಸಿದ್ದಾರೆ ಎಂಬುದು ಜನರಿಗೆ ಗೊತ್ತಿದೆ’ ಎಂದು ಹೇಳಿದರು.

ADVERTISEMENT

‘ಈ ಬಾರಿ ಚುನಾವಣೆಯಲ್ಲಿ ಲೀಡ್ ಕೊಡಲಿಲ್ಲವೆಂದರೆ ಸಚಿವರನ್ನು ಆ ಸ್ಥಾನದಿಂದ ತೆಗೆಯಲಾಗುವುದೆಂದು ಈಗಾಗಲೇ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಹೇಳಿದ್ದಾರೆ’ ಎಂದರು.

‘ಲೀಡ್ ಬಂದಿಲ್ಲ ಎಂದರೆ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ವಾಪಸ್ ಪಡೆಯುತ್ತಾರೆ ಎಂಬ ಹೇಳಿಕೆ ಬಂದಿದೆ. ಡಿ.ಕೆ.ಶಿವಕುಮಾರ್‌ ಅವರು ಪೆನ್ನು ಪೇಪರ್ ಕೊಡಿ ಮುಖ್ಯಮಂತ್ರಿ ಆಗುತ್ತೇನೆ ಎಂದಿದ್ದಾರೆ. ಅವರಿಗೆ ಲೋಡ್ ಲೋಡ್ ಪೆನ್ನು ಪೇಪರ್ ಕೊಟ್ಟರೂ ಮುಖ್ಯಮಂತ್ರಿ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ಮಹಿಳೆಯರ ಬಗ್ಗೆ ಗೌರವ ಇರುವುದರಿಂದಲೇ ಜೆಡಿಎಸ್‍ಗೆ ತೆನೆ ಹೊತ್ತ ಮಹಿಳೆ ಚಿಹ್ನೆ ಇರಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯರ ಸರ್ಟಿಫಿಕೇಟ್ ಬೇಕಾಗಿಲ್ಲ’ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ.ಎಂ.ಕೃಷ್ಣಮೂರ್ತಿ,ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಹನುಮಂತಪ್ಪ, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಬಾಲಾಜಿ, ಚಲಪತಿ, ಶಿವಮೂರ್ತಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಮಂಜುನಾಥ್, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.