ಕೆಜಿಎಫ್: ಬಹಳ ವರ್ಷಗಳ ಹಿಂದೆ ಸರ್ಕಾರಿ ನಿವೇಶನದಲ್ಲಿ ನಿರ್ಮಾಣ ಮಾಡಲಾಗಿದ್ದ ಅಕ್ರಮ ಕಟ್ಟಡವನ್ನು ನಗರಸಭೆ ಸಿಬ್ಬಂದಿ ಬುಧವಾರ ತೆರವುಗೊಳಿಸಿದರು.
ರಾಬರ್ಟ್‌ಸನ್‌ಪೇಟೆಯ ನ್ಯಾಯಾಲಯದ ಪಕ್ಕದಲ್ಲಿರುವ ನಿವೇಶನವು ಸೊಸೈಟಿಗೆ ಸೇರಿದ್ದು ಎಂದು ಹೇಳಿಕೊಂಡು ಖಾಸಗಿ ವ್ಯಕ್ತಿಗಳು ಅದರಲ್ಲಿ ಕಟ್ಟಡ ಕಟ್ಟಿಕೊಂಡಿದ್ದರು. ಅಲ್ಲದೆ, ಈ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ನೀಡುವಂತೆ ಖಾಸಗಿ ವ್ಯಕ್ತಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಆದರೆ ಜಿಲ್ಲಾಧಿಕಾರಿ ಇದಕ್ಕೆ ಸ್ಪಂದಿಸಿರಲಿಲ್ಲ. ಖಾಸಗಿ ವ್ಯಕ್ತಿಗಳು ಸರ್ಕಾರಿ ಜಮೀನಿನಲ್ಲಿ ಅಂಗಡಿಗಳನ್ನು ಕಟ್ಟಿ ಅದರ ಬಾಡಿಗೆ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಈಚೆಗೆ ನಗರಸಭೆಯಿಂದ ಕೆಲ ಅಂಗಡಿಗಳಿಗೆ ಬೀಗ ಹಾಕಲಾಗಿತ್ತು.
ಬೀಗ ಹಾಕಿದ್ದ ಅಂಗಡಿ ಮಾಲೀಕರಿಗೆ ಅವರ ಸ್ವತ್ತು ತೆಗೆದುಕೊಂಡು ಹೋಗಲು ನಗರಸಭೆ ಅವಕಾಶ ನೀಡಿತ್ತು. ಮಾನವೀಯತೆ ನೆಲೆಯಲ್ಲಿ ಕಟ್ಟಡದಲ್ಲಿದ್ದ ವಸ್ತುಗಳನ್ನು ತೆಗೆಯಲು ಸಮಯಾವಕಾಶ ನೀಡಲಾಗುತ್ತದೆ. ಅಷ್ಟರೊಳಗೆ ಅಂಗಡಿಗಳಲ್ಲಿರುವ ವಸ್ತುಗಳನ್ನು ತೆರವು ಮಾಡಬೇಕು ಎಂದು ನಗರಸಭೆ ಸಿಬ್ಬಂದಿ ಮೊದಲು ಬೀಗ ಹಾಕಿದ್ದ ಅಂಗಡಿಗಳ ಮಾಲೀಕರಿಗೆ ತಿಳಿಸಿದ್ದರು. ಆದರೆ, ಕಟ್ಟಡದ ಉಪಯೋಗ ಪಡೆಯುತ್ತಿದ್ದ ಕೆಲವರು ನಗರಸಭೆ ಸಿಬ್ಬಂದಿ ವಿರುದ್ಧವೇ ರಾಬರ್ಟ್‌ಸನ್‌ಪೇಟೆ ಪೊಲೀಸರಿಗೆ ದೂರು ನೀಡಿದರು. ನಗರಸಭೆ ಆಯುಕ್ತ ಆಂಜನೇಯಲು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡಿದರು.
ಇಪ್ಪತ್ತು ದಿನ ಅವಕಾಶ ನೀಡಿದ್ದರೂ ಅಂಗಡಿ ಮಾಲೀಕರು ತಮ್ಮ ಸ್ವತ್ತುಗಳನ್ನು ತೆಗೆದುಕೊಂಡು ಹೋಗಿರಲಿಲ್ಲ. ಆದರೆ, ಸಾಮಗ್ರಿ ತೆಗೆದುಕೊಂಡು ಹೋಗಲು ಹಿಂಜರಿಯುತ್ತಿದ್ದಾರೆ. ಈ ಜಾಗದಲ್ಲಿ ಹೊಸದಾಗಿ ನಗರಸಭೆ ಕಟ್ಟಡ ಕಟ್ಟಬೇಕಾಗಿದೆ. ಸರ್ಕಾರದಿಂದ ₹15 ಕೋಟಿ ಮಂಜೂರು ಆಗಿದೆ. ಪಕ್ಕದಲ್ಲಿ ಕೆಜಿಎಫ್ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡವೂ ಬರಲಿದೆ. ಸುಮಾರು 1.14 ಎಕರೆ ಜಮೀನು ಇದ್ದು, ಇಲ್ಲಿ ಉತ್ತಮ ನಗರಸಭೆ ಕಟ್ಟಡ ಕಟ್ಟಲಾಗುವುದು. ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ತಿಳಿಸಿದರು.
ನಂತರ ಆಯುಕ್ತ ಆಂಜನೇಯಲು ಅವರ ನೇತೃತ್ವದಲ್ಲಿ ಕಟ್ಟಡ ತೆರವುಗೊಳಿಸುವ ಕಾರ್ಯ ಮುಂದುವರೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.