ADVERTISEMENT

ಕೋಮುಲ್‌ ಸಭೆಯಲ್ಲಿ ಕಾನೂನು ಬಾಹಿರ ನಡೆ: ಶಾಸಕ ಎಸ್.ಎನ್.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 7:47 IST
Last Updated 31 ಆಗಸ್ಟ್ 2025, 7:47 IST
ಎಸ್‌.ಎನ್‌.ನಾರಾಯಣಸ್ವಾಮಿ
ಎಸ್‌.ಎನ್‌.ನಾರಾಯಣಸ್ವಾಮಿ   

ಕೋಲಾರ: ‘ಕೋಮುಲ್‌ನಲ್ಲಿ ಉಪವಿಭಾಗಾಧಿಕಾರಿ ಡಾ.ಮೈತ್ರಿ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ನಡೆದಿರುವ ಹಾಗೂ ಅದಕ್ಕೂ ಮುಂಚಿನ ಕೋಟ್ಯಂತರ ರೂಪಾಯಿ ಖರ್ಚು ವೆಚ್ಚದ ಬಿಲ್‌ಗಳಿಗೆ ತುರ್ತುಸಭೆ ಹೆಸರಿನಲ್ಲಿ ಅನುಮೋದನೆ ಪಡೆದು ಸಾಚಾ ಇದ್ದೇವೆ ಎಂಬುದನ್ನು ಬಿಂಬಿಸಿಕೊಳ್ಳಲು ಹೊರಟಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದೇನೆ’ ಎಂದು ಶಾಸಕ ಹಾಗೂ ಹಾಲು ಒಕ್ಕೂಟದ ನಿರ್ದೇಶಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಣಕಾಸಿನ ಬಗ್ಗೆ ಅನುಮೋದನೆ ಪಡೆಯಲು ಬಹಳ ಜಾಣತನದಿಂದ ಎಬಿಸಿಡಿ ಎಂದು ಹಾಕಿ 26 ವಿಷಯಗಳ ಬಗ್ಗೆ ಅಜೆಂಡಾ ತಯಾರಿಸಿ ತುರ್ತುಸಭೆ ನಡೆಸಿದ್ದಾರೆ. ಇದು ಸಂಪೂರ್ಣ ನಿಯಮ ಬಾಹಿರ ಹಾಗೂ ಕಾನೂನು ವಿರೋಧಿ ನಡೆಯಾಗಿದೆ’ ಎಂದು ಆರೋಪಿಸಿದರು.

‘ತುರ್ತುಸಭೆ ನೆಪದಲ್ಲಿ ಕೋಮುಲ್‍ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಕೋಟ್ಯಂತರ ರೂಪಾಯಿ ಖರ್ಚು ವೆಚ್ಚಗಳ ಅನುಮೋದನೆ ಪಡೆಯಲು ಹುನ್ನಾರ ನಡೆಸಿದ್ದರು. ಜೊತೆಗೆ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಹುತ್ತೂರು ಹೋಬಳಿಯ ಬೆಳಗಾನಹಳ್ಳಿ ಗ್ರಾಮದ ಸರ್ಕಾರಿ ರಸ್ತೆ ಸ್ಥಳಾಂತರ ಮಾಡಲು ಸಹ ಅಜೆಂಡಾ ತಂದಿದ್ದರು. ಈ ಸಂಬಂಧ ಕೋಮುಲ್‌ಗೆ ಯಾವ ಅಧಿಕಾರವಿದೆ? ಈಗಾಗಲೇ ಗ್ರಾಮಸ್ಥರು ಈ ರಸ್ತೆ ಸ್ಥಳಾಂತರ ಮಾಡಬಾರದೆಂದು ಆಕ್ಷೇಪ ಸಲ್ಲಿಸಿದ್ದಾರೆ. ಅದೇ ರೀತಿ ನಾನು ಹಾಗೂ ಡಿ.ವಿ.ಹರೀಶ್‌ ಆಕ್ಷೇಪ ಸಲ್ಲಿಸಿದೆವು. ಆದ್ದರಿಂದ ಆ ರಸ್ತೆಯ ಸ್ಥಳಾಂತರ ಕೈ ಬಿಡಲಾಗಿದೆ’ ಎಂದರು.

ADVERTISEMENT

‘ಕೋಮುಲ್‌ ಕಚೇರಿಯಲ್ಲಿ ಅಧ್ಯಕ್ಷ ಕೆ.ವೈ.ನಂಜೇಗೌಡರ ಅಧ್ಯಕ್ಷತೆಯಲ್ಲಿ ಶನಿವಾರ ತುರ್ತುಸಭೆ ಎಂದು ಗೋಪಾಲಮೂರ್ತಿ ಎರಡು ದಿನಗಳ ಮುಂಚೆ ನೋಟಿಸ್ ಕಳಿಸಿದ್ದರು. ತುರ್ತು ಸಭೆಯಲ್ಲಿ ಕೇವಲ ತುರ್ತು ಸಂದರ್ಭಕ್ಕೆ ಅನುಗುಣವಾಗುವ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಾಗಿತ್ತು, ಅದನ್ನು ಬಿಟ್ಟು ಬೇರೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ’ ಎಂದು ಹರಿಹಾಯ್ದರು.

‘ಆಡಳಿತಕ್ಕೆ ತೊಂದರೆ ಆದಾಗ ತುರ್ತು ಕ್ರಮಗಳನ್ನು ಕೈಗೊಳ್ಳಲು ಅನಿವಾರ್ಯವಾಗಿ ತುರ್ತುಸಭೆ ಕರೆಯಬೇಕಾಗುತ್ತದೆ. ಸಭೆಯಲ್ಲಿ ಮೂರು ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ಮೂವತ್ತು ವಿಷಯ ತಂದಿರುವುದಕ್ಕೆ ಆಕ್ಷೇಪ ಮಂಡಿಸಿದ್ದೇನೆ’ ಎಂದರು.

‘ಕೋಟ್ಯಂತರ ರೂಪಾಯಿ ಹಣಕಾಸಿನ ಚರ್ಚೆಯ ಬಗ್ಗೆ ತುರ್ತುಸಭೆಯಲ್ಲಿ ಇಟ್ಟರು. ಈ ಸಭೆ ಹಣಕಾಸಿನ ವಿಚಾರವಾಗಿ ಪ್ರಸ್ತಾವ ಸಲ್ಲಿಸುವ ಸಭೆಯಲ್ಲ ಎಂದು ಆಕ್ಷೇಪಣೆ ಮಂಡಿಸಿದೆ. ತುರ್ತುಸಭೆಗೆ ಸಂಬಂಧಪಟ್ಟ ಹಾಗೆ ಪ್ರಸ್ತಾವ ಮಾಡಿ ಎಂದು ಅಧ್ಯಕ್ಷರನ್ನು ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಒತ್ತಾಯ ಮಾಡಿದಾಗ ಅವರ ಉತ್ತರ ಸಮಂಜಸವಾಗಿರಲಿಲ್ಲ’ ಎಂದರು.

ಕೋಮುಲ್‌ ತುರ್ತುಸಭೆಯಲ್ಲಿ ಹಣಕಾಸಿನ ವ್ಯವಹಾರದ ಬಗ್ಗೆ ನಡೆಸಿದ ಚರ್ಚೆ ಎಲ್ಲವೂ ಕಾನೂನಿಗೆ ವಿರುದ್ಧವಾಗಿದೆ. ಇದಕ್ಕೆ ನನ್ನ ಆಕ್ಷೇಪಣೆ ಸಲ್ಲಿಸಿದ್ದು ತನಿಖಾ ವರದಿಯಲ್ಲೂ ಬಹಿರಂಗಪಡಿಸುತ್ತೇನೆ
ಎಸ್‌.ಎನ್‌.ನಾರಾಯಣಸ್ವಾಮಿ ಕೋಮುಲ್‌ ನಿರ್ದೇಶಕ ಶಾಸಕ
ಕೋಮುಲ್‌ ಎಂ.ಡಿ ಮೋಸ ಮಾಡುತ್ತಿದ್ದಾರೆ
‘ಕೋಮುಲ್‌ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಒಕ್ಕೂಟದ ನಿರ್ದೇಶಕರನ್ನು ಮೋಸ ಮಾಡುತ್ತಿದ್ದಾರೆ ಎಂಬುದಕ್ಕೆ ಒಕ್ಕೂಟದ ತುರ್ತು ಸಭೆಯಲ್ಲಿದ್ದ ಕೆಲ ಅಜೆಂಡಾಗಳೇ ಸಾಕ್ಷಿ. ತುರ್ತು ಸಭೆಯಲ್ಲಿ ಕೇವಲ ಮೂರು ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಸಬೇಕು. ಆದರೆ ಇವರು ಮೂರನೇ ವಿಷಯದಲ್ಲಿ ಎಬಿಸಿಡಿ ಎಂದು 26 ವಿಷಯ ಸೇರಿಸಿದ್ದಾರೆ ಎಂದರೆ ಅವರ ಜಾಣತನಕ್ಕೆ ನಾವು ಮೆಚ್ಚಲೇಬೇಕು’ ಎಂದು ಎಸ್‌.ಎನ್‌.ನಾರಾಯಣಸ್ವಾಮಿ ಲೇವಡಿ ಮಾಡಿದರು. ‘ಕೋಮುಲ್‌ನಲ್ಲಿ ಅನೇಕ ನಿಯಮಗಳನ್ನು ಗಾಳಿಗೆ ತೂರಿ ಅನೇಕ ರೀತಿಯಲ್ಲಿ ದುಂದು ವೆಚ್ಚ ಮಾಡುವ ಪರಿಪಾಟು ಬಹಳ ವರ್ಷಗಳಿಂದ ಬಂದಿದೆ’ ಎಂದು ದೂರಿದರು.

ಕೆಲವರ ಕಪಿಮುಷ್ಟಿಯಲ್ಲಿ ಉಸ್ತುವಾರಿ

‘ಉಸ್ತುವಾರಿ ಸಚಿವ ಬೈರತಿ ಸುರೇಶ್ ಕೆಲವರ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ. ತಮಗೆ ಎರಡೂವರೆ ಸಾವಿರ ಕೋಟಿ ಅನುದಾನ ನೀಡಿದ್ದಾರೆ ಎಂಬುದಾಗಿ ನಂಜೇಗೌಡರು ಹೇಳುತ್ತಿದ್ದಾರೆ. ಆದರೆ ಉಸ್ತುವಾರಿ ಸಚಿವರು ನನಗೆ ₹100 ಕೂಡ ಅನುದಾನ ನೀಡಿಲ್ಲ’ ಎಂದು ಎಸ್‌.ಎನ್‌.ನಾರಾಯಣಸ್ವಾಮಿ ನುಡಿದರು. ‘ಅನುದಾನ ಪಡೆದಿರುವ ನಂಜೇಗೌಡ ಸ್ವಾಮಿನಿಷ್ಠೆ ಸಹಜ. ನಾನು ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗಿನವರು) ಶಾಸಕ. ನನಗೆ ಅನುದಾನ ನೀಡಿದರೆ ನಾನೂ ಉಸ್ತುವಾರಿ ಕಾಲಿಗೆ ಎರಗುತ್ತೇನೆ. ನಂಜೇಗೌಡರಿಗಿಂತ ಹೆಚ್ಚು ಹೊಗಳುತ್ತೇನೆ’ ಎಂದರು. ‘ರಾಮಲಿಂಗಾರೆಡ್ಡಿ ಅವರು ಉಸ್ತುವಾರಿಯಾಗಿ ಕೋಲಾರಕ್ಕೆ ಬರುವುದಾದರೆ ಸ್ವಾಗತ ಎಂದಷ್ಟೇ ಸಭೆಯಲ್ಲಿ ಹೇಳಿದ್ದೆ. ಅವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದರು’ ಎಂದು ತಿಳಿಸಿದರು.

ಕಾರ್ಮಿಕರಿಗೆ ಹೆಚ್ಚುವರಿ ವೇತನ ನೀಡಿ

ಕೋಮುಲ್‌ನಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಹೆಚ್ಚುವರಿ ವೇತನವನ್ನು ಒಕ್ಕೂಟದಿಂದ ಭರಿಸಬೇಕು ಎಂದು ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಸುಮಾರು 800 ಕಾರ್ಮಿಕರು ಹಲವಾರು ವರ್ಷಗಳಿಂದ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ನಿವೃತ್ತಿಯಂಚಿನಲ್ಲಿದ್ದಾರೆ. ಹೀಗಾಗಿ ಒಕ್ಕೂಟಕ್ಕೆ ಬರುವ ಹೆಚ್ಚುವರಿ ಲಾಭಾಂಶದಲ್ಲಿ ವಿಶೇಷ ಪ್ರಕರಣವೆಂದು ಭಾವಿಸಿ ಹೆಚ್ಚುವರಿ ವೇತನ ನೀಡಬೇಕು. ಈ ಹಿಂದೆ ಚರ್ಚಿಸಿದಂತೆ ಎಲ್ಲಾ ಕಾರ್ಮಿಕರಿಗೆ ಜೀವವಿಮೆ ವೈದ್ಯಕೀಯ ಸೌಲಭ್ಯ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.