ADVERTISEMENT

ಕೋಲಾರ: ವೇತನ ಪಾವತಿ ಸೋಗಿನಲ್ಲಿ ಗೋಲ್‌ಮಾಲ್‌

ಕೃಷಿ ಇಲಾಖೆಯಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ: ಡಿಎಸ್‌ಇ ಬಳಸಿ ವಂಚನೆ

ಜೆ.ಆರ್.ಗಿರೀಶ್
Published 13 ಅಕ್ಟೋಬರ್ 2020, 19:30 IST
Last Updated 13 ಅಕ್ಟೋಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ಕೃಷಿ ಇಲಾಖೆಗೆ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಿಕೊಂಡಿರುವುದಾಗಿ ಇಲಾಖೆಯ ನಿಕಟಪೂರ್ವ ಜಂಟಿ ನಿರ್ದೇಶಕರ ಡಿಜಿಟಲ್‌ ಸಹಿಯ ಕೀ (ಡಿಎಸ್‌ಇ) ದುರ್ಬಳಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಗೋಲ್‌ಮಾಲ್‌ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ನಿಕಟಪೂರ್ವ ಜಂಟಿ ನಿರ್ದೇಶಕ ಎಚ್‌.ಕೆ.ಶಿವಕುಮಾರ್‌ ಅವರು ನಗರದ ಗಲ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಇಲಾಖೆಯ ನಿವೃತ್ತ ನೌಕರ ಸತ್ಯನಾರಾಯಣ ಪ್ರಸಾದ್‌ ಮತ್ತು ಹೊರ ಗುತ್ತಿಗೆ ನೌಕರ ನಯಾಜ್‌ ಅಹಮ್ಮದ್‌ ಎಂಬುವರನ್ನು ಬಂಧಿಸಿದ್ದಾರೆ.

ಈ ಹಿಂದೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್‌ ಅವರಿಗೆ ಅನುದಾನ ಬಳಕೆ, ದೈನಂದಿನ ಕಾರ್ಯ ನಿರ್ವಹಣೆ ಉದ್ದೇಶಕ್ಕಾಗಿ ಇಲಾಖೆಯಿಂದ ಡಿಜಿಟಲ್‌ ಸಿಗ್ನೇಚರ್‌ ಸರ್ಟಿಫಿಕೇಟ್‌ ಕೀ (ಡಿಎಸ್‌ಇ) ನೀಡಲಾಗಿತ್ತು. ಅವರು ಆ ಡಿಜಿಟಲ್‌ ಉಪಕರಣವನ್ನು ಸಿಬ್ಬಂದಿ ವೇತನ ಪಾವತಿ ಸೇರಿದಂತೆ ಕಚೇರಿಯ ದೈನಂದಿನ ಕೆಲಸಗಳ ನಿರ್ವಹಣೆಗಾಗಿ ಆಗಾಗ್ಗೆ ಸತ್ಯನಾರಾಯಣ ಪ್ರಸಾದ್‌ ಅವರಿಗೆ ಕೊಡುತ್ತಿದ್ದರು.

ADVERTISEMENT

ಕಚೇರಿಯಲ್ಲಿ ಸೂಪರಿಂಟೆಂಡೆಂಟ್‌ ಆಗಿದ್ದ ಸತ್ಯನಾರಾಯಣ ಪ್ರಸಾದ್‌ ಮತ್ತು ಕಂಪ್ಯೂಟರ್ ಆಪರೇಟರ್‌ ಆಗಿದ್ದ ನಯಾಜ್‌ ಅಹಮ್ಮದ್‌ ಒಟ್ಟಾಗಿ ಸಂಚು ರೂಪಿಸಿ ಶಿವಕುಮಾರ್‌ರ ಗಮನಕ್ಕೆ ಬಾರದಂತೆ ಅವರ ಡಿಜಿಟಲ್‌ ಕೀ ಬಳಸಿ ಎಂ.ಎ ಎಂಟರ್‌ಪ್ರೈಸಸ್‌ ಎಂಬ ಕಂಪನಿಯ ಬ್ಯಾಂಕ್‌ ಖಾತೆಗೆ ಕಳೆದೊಂದು ವರ್ಷದಿಂದ ಇಲಾಖೆಯ ಲಕ್ಷಾಂತರ ರೂಪಾಯಿ ಹಣ ಪಾವತಿ ಆಗುವಂತೆ ಮಾಡಿದ್ದಾರೆ.

ನಿಯಮದ ಪ್ರಕಾರ ಇಲಾಖೆಯ ಜಿಲ್ಲಾ ಕೇಂದ್ರದ ಕಚೇರಿಗೆ ಮಾತ್ರ ಹೊರ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಆದರೆ, ಸತ್ಯನಾರಾಯಣ ಪ್ರಸಾದ್‌ ಜಿಲ್ಲೆಯ 5 ತಾಲ್ಲೂಕು ಕಚೇರಿಗಳಿಗೂ ಎಂ.ಎ ಎಂಟರ್‌ಪ್ರೈಸಸ್‌ ಕಂಪನಿಯಿಂದ ಹೊರ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಂಡಿರುವುದಾಗಿ ನಕಲಿ ದಾಖಲೆಪತ್ರ ಸೃಷ್ಟಿಸಿದ್ದಾರೆ.

ಅಲ್ಲದೇ, ವೇತನ ಪಾವತಿ ನೆಪದಲ್ಲಿ ಬಿಲ್‌, ಓಚರ್‌ಗಳನ್ನು ಸೃಷ್ಟಿಸಿ ಜಿಲ್ಲಾ ಖಜಾನೆಗೆ ಕಳುಹಿಸಿದ್ದಾರೆ. ಜಂಟಿ ನಿರ್ದೇಶಕರ ಸಹಿಯನ್ನು ಕಲರ್‌ ಸ್ಕ್ಯಾನ್‌ ಮಾಡಿ ಬಿಲ್‌ ಮತ್ತು ಓಚರ್‌ಗಳಲ್ಲಿ ಸೇರಿಸಲಾಗಿದೆ. ಕೆಲ ಬಿಲ್‌ಗಳಲ್ಲಿ ಸಹಿ ತಿದ್ದಲಾಗಿದೆ. ಈ ಬಿಲ್‌ ಮತ್ತು ಓಚರ್‌ಗಳ ನೈಜತೆ ಪರಿಶೀಲಿಸದ ಖಜಾನೆ ಅಧಿಕಾರಿಗಳು ಕೃಷಿ ಇಲಾಖೆ ಖಾತೆಯಿಂದ ಎಂ.ಎ ಎಂಟರ್‌ಪ್ರೈಸಸ್‌ ಕಂಪನಿ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ.

ಪತ್ತೆಯಾಗಿದ್ದು ಹೇಗೆ?: ಶಿವಕುಮಾರ್‌ ಅವರು ಬೆಂಗಳೂರಿನಲ್ಲಿರುವ ಇಲಾಖೆಯ ಜಾಗೃತ ಕೋಶದ ಜಂಟಿ ನಿರ್ದೇಶಕರ ಹುದ್ದೆಗೆ ಆ.3ರಂದು ವರ್ಗಾವಣೆಯಾಗಿ ಹೋಗಿದ್ದರು. ನಂತರ ಅವರ ಹುದ್ದೆಗೆ ಬಂದ ರೂಪಾದೇವಿ ಅವರು ಇಲಾಖೆಯ ಖರ್ಚು ವೆಚ್ಚ ಪರಿಶೀಲಿಸಿದಾಗ ವಾರದ ಹಿಂದೆ ಅಕ್ರಮ ಬೆಳಕಿಗೆ ಬಂದಿದೆ.

2020ರ ಜೂನ್‌ ಒಂದೇ ತಿಂಗಳಲ್ಲಿ ಹೊರ ಗುತ್ತಿಗೆ ನೌಕರರ ವೇತನಕ್ಕಾಗಿ ಇಲಾಖೆಯಿಂದ ₹ 15.99 ಲಕ್ಷ ಪಾವತಿಸಿರುವುದು ಗೊತ್ತಾಗಿದೆ. ಆದರೆ, ಅದಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳು ಕಚೇರಿಯಲ್ಲಿ ಲಭ್ಯವಾಗಿಲ್ಲ. ಇದರಿಂದ ಅನುಮಾನಗೊಂಡ ಅವರು ಅಕ್ರಮದ ಸಂಗತಿಯನ್ನು ಇಲಾಖೆ ನಿರ್ದೇಶಕರು ಮತ್ತು ಶಿವಕುಮಾರ್‌ರ ಗಮನಕ್ಕೆ ತಂದಿದ್ದಾರೆ.

ಬಳಿಕ ಶಿವಕುಮಾರ್‌ ಅವರು ಸತ್ಯನಾರಾಯಣ ಪ್ರಸಾದ್‌, ನಯಾಜ್‌ ಅಹಮ್ಮದ್‌ ಮತ್ತು ಎಂ.ಎ ಎಂಟರ್‌ಪ್ರೈಸಸ್‌ ಮಾಲೀಕರಾದ ಮುಹಿಬ್‌ ಅಜ್ಮಿ ವಿರುದ್ಧ ಗಲ್‌ಪೇಟೆ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ವಂಚನೆ ಉದ್ದೇಶಕ್ಕೆ ನಕಲಿ ದಾಖಲೆಪತ್ರ ಸೃಷ್ಟಿ, ಡಿಜಿಟಲ್ ಉಪಕರಣದ ದುರ್ಬಳಕೆ ಮತ್ತು ವಂಚನೆ ಆರೋಪದ ಮೇಲೆ 3 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೆಲಸಕ್ಕೆ ಗೈರು: ನಯಾಜ್‌ ಅಹಮ್ಮದ್‌, ಅ.9ರಂದು ಕಡೆಯ ಬಾರಿಗೆ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅಕ್ರಮ ಬಯಲಾದ ನಂತರ ಅವರು ಕೆಲಸಕ್ಕೆ ಗೈರಾಗಿ ತಲೆಮರೆಸಿಕೊಂಡಿದ್ದರು. ಮುಹಿಬ್‌ ಅಜ್ಮಿ ಅವರು ನಯಾಜ್‌ರ ಸಂಬಂಧಿ ಎಂದು ಗೊತ್ತಾಗಿದೆ. ಅಕ್ರಮಕ್ಕೆ ಸಂಬಂಧಪಟ್ಟ ಬಿಲ್‌ ಮತ್ತು ಓಚರ್‌ ಪ್ರತಿಗಳು ಜಿಲ್ಲಾ ಪಂಚಾಯಿತಿಯ ಲೆಕ್ಕ ವಿಭಾಗದಲ್ಲಿ ಸಿಕ್ಕಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.