ADVERTISEMENT

ಅಕ್ರಮ ಭೂ ಮಂಜೂರಾತಿ: ತನಿಖೆಗೆ ಒತ್ತಾಯ

ನಕಲಿ ದಾಖಲೆಪತ್ರ ಸೃಷ್ಟಿ: ಕರವೇ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 20:30 IST
Last Updated 3 ಡಿಸೆಂಬರ್ 2019, 20:30 IST

ಕೋಲಾರ: ‘ಜಿಲ್ಲೆಯಲ್ಲಿ ಅಕ್ರಮವಾಗಿ ಸರ್ಕಾರಿ ಜಮೀನು ಮಂಜೂರು ಮಾಡಿರುವ ಬಗ್ಗೆ ತನಿಖೆ ನಡೆಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ ಒತ್ತಾಯಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿನ 34 ಗ್ರಾಮಗಳಲ್ಲಿ 90 ಎಕರೆ ಸರ್ಕಾರಿ ಜಮೀನಿಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಮೀನುಗಳಲ್ಲಿ ನಿರ್ಮಾಣ ಆಗಿರುವ ಅಕ್ರಮ ಬಡಾವಣೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಬಡಾವಣೆಗಳಿಗೆ ಅಕ್ರಮವಾಗಿ ನಕ್ಷೆ ಮಂಜೂರಾತಿ ಹಾಗೂ ಸರ್ವೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಕೋರಿದರು.

ADVERTISEMENT

‘ವೇದಿಕೆ ಹೋರಾಟದ ಫಲವಾಗಿ ಉಪ ವಿಭಾಗಾಧಿಕಾರಿಯು ತನಿಖೆ ನಡೆಸಿ ಸರ್ಕಾರಿ ಜಮೀನಿನ ೫ ನಕಲಿ ದಾಖಲೆಪತ್ರ ಪತ್ತೆಹಚ್ಚಿ ಖಾತೆ ರದ್ದುಪಡಿಸಿದ್ದಾರೆ. ಅಕ್ರಮ ಭೂ ಮಂಜೂರಾತಿ ಕಾರಣಕ್ಕೆ ಮಾಲೂರು ತಹಶೀಲ್ದಾರ್‌ ಅಮಾನತುಗೊಂಡಿದ್ದಾರೆ. ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತು ಅಕ್ರಮ ಭೂ ಮಂಜೂರಾತಿ ಪ್ರಕರಣ ಪತ್ತೆ ಮಾಡಿ ತಪ್ಪಿತಸ್ಥರಿಗೆ ಶಿಸ್ತುಕ್ರಮದ ಬಿಸಿ ಮುಟ್ಟಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲಾಡಳಿತವು ಅಕ್ರಮ ಭೂ ಮಂಜೂರಾತಿ ಸಂಬಂಧ ಒಂದು ತಿಂಗಳೊಳಗೆ ತನಿಖೆ ನಡೆಸದಿದ್ದರೆ ಭೂಮಾಪನ ಇಲಾಖೆ ಆಯುಕ್ತ ಮೋನಿಷ್‌ ಮೌದ್ಗಲ್‌ ಅವರಿಗೆ ಅಕ್ರಮಗಳ ಸಂಬಂಧ ದೂರು ಕೊಟ್ಟು ತನಿಖೆಗೆ ಒತ್ತಾಯಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮೌನಕ್ಕೆ ಶರಣು: ‘ಕೋಲಾರ ತಾಲ್ಲೂಕಿನ ನಂದಿಕಾಮನಹಳ್ಳಿಯ ಸರ್ವೆ ನಂಬರ್ 15ರಲ್ಲಿನ ಸರ್ಕಾರಿ ಜಮೀನಿಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸಲಾಗಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಪರ್ಯಾವೇಕ್ಷಕ ಕೆ.ಆರ್.ಜಗದೀಶ್‌ ಅವರನ್ನು ಅಮಾನತು ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹಿಂದಿನ ಜಿಲ್ಲಾಧಿಕಾರಿ ಸತ್ಯವತಿ ಆದೇಶಿಸಿದ್ದರು. ಆದರೆ, ಅಧಿಕಾರಿಗಳು ಒತ್ತಡಕ್ಕೆ ಮಣಿದು ಮೌನಕ್ಕೆ ಶರಣಾಗಿದ್ದಾರೆ’ ಎಂದು ಆರೋಪಿಸಿದರು.

‘ಭೂಮಾಪಕ ಜಿ.ಸುರೇಶ್‌ಬಾಬು ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿಯ ಪ್ರಮುಖ ಆರೋಪಿಯಾಗಿದ್ದು, ಅವರ ವಿರುದ್ಧ ತನಿಖೆ ನಡೆಸಬೇಕು. ಆರೋಪ ಸಾಬೀತಾದರೆ ಅವರನ್ನು ಅಮಾನತು ಮಾಡುವುದರ ಜತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ವೇದಿಕೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾಬಾಯಿ ಮಾಡಿಕ್, ಪದಾಧಿಕಾರಿಗಳಾದ ವಿ.ಮುನಿರಾಜು, ನಾಗರಾಜ, ಷರೀಫ್, ಮೆಹಬೂಬ್ ಖಾನ್, ಲೋಕೇಶ್, ಸಿ.ಎಂ.ಚಂದ್ರಶೇಖರ್, ಎಂ.ಎಸ್.ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.