ADVERTISEMENT

ಅಕ್ರಮ ಮದ್ಯ ಮಾರಾಟ ದಂದೆ: 15 ದಿನದ ಗಡುವು

ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಂಸದ ಮುನಿಸ್ವಾಮಿ ಖಡಕ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 14:35 IST
Last Updated 6 ಜನವರಿ 2022, 14:35 IST
ಸಂಸದ ಎಸ್‌.ಮುನಿಸ್ವಾಮಿ ಕೋಲಾರದಲ್ಲಿ ಗುರುವಾರ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು
ಸಂಸದ ಎಸ್‌.ಮುನಿಸ್ವಾಮಿ ಕೋಲಾರದಲ್ಲಿ ಗುರುವಾರ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು   

ಕೋಲಾರ: ‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ದಂದೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇದಕ್ಕೆ 15 ದಿನದೊಳಗೆ ಕಡಿವಾಣ ಹಾಕಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಗುರುವಾರ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಂಸದರು, ‘ಅಕ್ರಮ ಮದ್ಯ ಹಾಗೂ ಗಾಂಜಾ ಮಾರಾಟದ ಸಂಬಂಧ ಜನರಿಂದ ದೂರು ಬಂದಿವೆ. ಗ್ರಾಮೀಣ ಭಾಗದಲ್ಲಿ ಅಧಿಕೃತ ಮದ್ಯ ಮಾರಾಟ ಅಂಗಡಿಗಳಿಗಿಂತ ಅನಧಿಕೃತ ಅಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಳ್ಳಿಗಳಲ್ಲಿ ರಾಜಾರೋಷವಾಗಿ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಜನರು ಹಾಗೂ ಯುವಕರು ಮದ್ಯ ವ್ಯಸನಿಗಳಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದೈನಂದಿನ ಸಂಪಾದನೆಯ ಹಣವನ್ನೆಲ್ಲಾ ಮದ್ಯಕ್ಕೆ ಖರ್ಚು ಮಾಡುತ್ತಿದ್ದಾರೆ. ಕುಡಿತಕ್ಕೆ ಒಳಗಾದವರ ಕುಟುಂಬಗಳು ಬೀದಿ ಪಾಲಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಹಳ್ಳಿಗಳಲ್ಲಿ ಯುವಕರು ಹೆಚ್ಚಾಗಿ ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಬದುಕಿ ಬಾಳುವ ವಯಸ್ಸಿನಲ್ಲೇ ಯುವಕರು ಕುಡಿತದ ಚಟದಿಂದ ಸಾಯುತ್ತಿದ್ದಾರೆ. ಪಡಿತರ ಮಾರಿ, ಚಿನ್ನಾಭರಣ ಅಡವಿಟ್ಟು ಮದ್ಯ ಖರೀದಿಸಿ ಕುಡಿಯುತ್ತಿದ್ದಾರೆ. ಹಳ್ಳಿಗಳಲ್ಲಿ ಎಲ್ಲೆಲ್ಲೂ ಸತ್ತ ಯುವಕರ ಫೋಟೊ ಫ್ಲೆಕ್ಸ್‌ಗಳಲ್ಲಿ ಕಾಣುತ್ತಿವೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಅಕ್ರಮ ಮದ್ಯ ಮಾರಾಟದ ಸಂಗತಿ ನಿಮಗೆ ಗೊತ್ತಿಲ್ಲವೆ?’ ಎಂದು ಪ್ರಶ್ನಿಸಿದರು.

ರಾಜಿ ಪ್ರಶ್ನೆಯಿಲ್ಲ: ‘ಜಿಲ್ಲೆಯಲ್ಲಿ ಇಲಾಖೆಯ ಪರವಾನಗಿ ಪಡೆದ 208 ಮದ್ಯದಂಗಡಿಗಳಿವೆ. ಆದರೆ, ಈ ಸಂಖ್ಯೆಯನ್ನು ಮೀರಿಸುವಷ್ಟು ಅನಧಿಕೃತ ಮದ್ಯದಂಗಡಿಗಳಿವೆ. ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಹಿಳೆಯರು ದೂರು ಕೊಟ್ಟಿದ್ದಾರೆ. ಅಕ್ರಮ ಮದ್ಯ ಮಾರಾಟ ದಂದೆ ಸಂಪೂರ್ಣ ಬಂದ್‌ ಆಗಬೇಕು. ಈ ವಿಚಾರದಲ್ಲಿ ರಾಜಿ ಪ್ರಶ್ನೆಯಿಲ್ಲ’ ಎಂದು ಸೂಚಿಸಿದರು.

‘ಅಕ್ರಮ ತಡೆಗೆ ಅಧಿಕಾರಿಗಳು ಸಂಪೂರ್ಣ ಸ್ವತಂತ್ರರು. ಈ ವಿಚಾರದಲ್ಲಿ ನಾನು ಅಧಿಕಾರಿಗಳ ಮೇಲೆ ಒತ್ತಡ ಹೇರುವುದಿಲ್ಲ. ಗ್ರಾಮೀಣ ಭಾಗದಲ್ಲಿ ವೈನ್‌ ಸ್ಟೋರ್‌ ಮತ್ತು ಬಾರ್ ಮಾಲೀಕರ ಸಭೆ ನಡೆಸಿ ಅಕ್ರಮವಾಗಿ ಮದ್ಯೆ ಮಾರಾಟ ಮಾಡದಂತೆ ಸೂಚಿಸಿ’ ಎಂದು ತಿಳಿಸಿದರು.

‘ಹಲವೆಡೆ ಶಾಲೆ ಕಾಲೇಜಿನ ಅಕ್ಕಪಕ್ಕ ಬಾರ್‌ಗಳು ಆರಂಭವಾಗಿವೆ. ಈ ಬಾರ್‌ಗಳ ಮಾಲೀಕರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ತೆರವುಗೊಳಿಸಿ. ಜ.21ಕ್ಕೆ ಮತ್ತೆ ಸಭೆ ಮಾಡುತ್ತೇನೆ. ಅಷ್ಟರಲ್ಲಿ ಸುಧಾರಣೆ ಆಗಿರಬೇಕು. ವಿಶೇಷ ತಂಡ ರಚಿಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿ’ ಎಂದು ಸೂಚನೆ ನೀಡಿದರು.

‘ಜನರಿಂದ ಮತ ಹಾಕಿಸಿಕೊಳ್ಳಕ್ಕೆ ಜೋತು ಬಿದ್ದು ಈ ಕೆಲಸಕ್ಕೆ ಮುಂದಾಗಿಲ್ಲ. ಯಾರೊಬ್ಬರೂ ಕುಡಿತದಿಂದ ಮೃತಪಟ್ಟರೆ ಅದರಿಂದ ಆಗುವ ನೋವು ಜೀವನಪರ್ಯಂತ ಕಾಡುತ್ತದೆ. ಗಾಂಜಾ ಸಾಗಣೆ ಮತ್ತು ಮಾರಾಟಕ್ಕೂ ಕಡಿವಾಣ ಹಾಕಿ’ ಎಂದು ತಿಳಿಸಿದರು.

204 ಪ್ರಕರಣ: ‘ಗ್ರಾಹಕರಿಗೆ ಗುಣಮಟ್ಟದ ಮದ್ಯ ಪೂರೈಸುವುದು ಮತ್ತು ಅನಧಿಕೃತ ಮದ್ಯ ಮಾರಾಟ ತಡೆಯುವುದು ಇಲಾಖೆಯ ಕರ್ತವ್ಯ. 1992ರ ನಂತರ ಹೊಸದಾಗಿ ಪರವಾನಗಿ ನೀಡಿಲ್ಲ. ಕೆಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಾರ್‌ ಇಲ್ಲದಿರುವ ಕಾರಣಕ್ಕೆ ಚಿಲ್ಲರೆ ಅಂಗಡಿಗಳಲ್ಲಿ ಮದ್ಯದ ಸರಕು ಇಟ್ಟುಕೊಂಡು ಅಕ್ರಮವಾಗಿ ಮಾರಲಾಗುತ್ತಿದೆ. ಅಂತಹ ಅಂಗಡಿ ಮಾಲೀಕರ ವಿರುದ್ಧ 204 ಪ್ರಕರಣ ದಾಖಲಿಸಲಾಗಿದೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ರವಿಶಂಕರ್ ಮಾಹಿತಿ ನೀಡಿದರು.

ಅಬಕಾರಿ ಇಲಾಖೆ ಇನ್‌ಸ್ಪೆಕ್ಟರ್‌ಗಳಾದ ಎಂ.ಆರ್.ಸುಮಾ, ಕೃಷ್ಣಮೂರ್ತಿ, ಸಂದೀಪ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.