ADVERTISEMENT

ಆಶ್ರಯ ಯೋಜನೆಯಲ್ಲಿ ಅಕ್ರಮ: ದೂರು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 13:03 IST
Last Updated 11 ಏಪ್ರಿಲ್ 2019, 13:03 IST
ಕೋಲಾರದಲ್ಲಿ ಗುರುವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಸಾರ್ವಜನಿಕರ ಕರೆ ಸ್ವೀಕರಿಸಿ ಸಮಸ್ಯೆ ಆಲಿಸಿದರು.
ಕೋಲಾರದಲ್ಲಿ ಗುರುವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಸಾರ್ವಜನಿಕರ ಕರೆ ಸ್ವೀಕರಿಸಿ ಸಮಸ್ಯೆ ಆಲಿಸಿದರು.   

ಕೋಲಾರ: ಸಾರ್ವಜನಿಕರ ಕುಂದು ಕೊರತೆ ಸಂಬಂಧ ನಗರದಲ್ಲಿ ಗುರುವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 19 ಕರೆಗಳು ಬಂದಿದ್ದು, ಆಶ್ರಯ ಸಮಿತಿ ಹಾಗೂ ನರೇಗಾ ಯೋಜನೆಗೆ ಸಂಬಂಧಿಸಿದ ದೂರುಗಳೇ ಹೆಚ್ಚಾಗಿದ್ದವು.

ವಿವಿಧ ತಾಲ್ಲೂಕುಗಳ ಗ್ರಾಮಸ್ಥರು ಮಾಡಿದ ದೂರವಾಣಿ ಕರೆ ಸ್ವೀಕರಿಸಿದ ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಸಾರ್ವಜನಿಕರ ಸಮಸ್ಯೆ ಆಲಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಬಂಗಾರಪೇಟೆ ತಾಲ್ಲೂಕಿನ ಹುದುಕುಳ, ಅಂಗೊಂಡಹಳ್ಳಿ, ಕೆಜಿಎಫ್ ತಾಲ್ಲೂಕಿನ ಕಾಮಸಮುದ್ರ, ಡಿ.ಕೆ.ಹಳ್ಳಿ, ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು, ಲಕ್ಷ್ಮೀಸಾಗರ, ಮಾಲೂರು ತಾಲ್ಲೂಕಿನ ಶಿವಾರಪಟ್ಟಣ ಗ್ರಾಮಸ್ಥರು ಕರೆ ಮಾಡಿ ಆಶ್ರಯ ಸಮಿತಿ ಯೋಜನೆಯಲ್ಲಿ ಅಕ್ರಮವಾಗಿದೆ. ಶೌಚಾಲಯ ನಿರ್ಮಾಣದ ಬಿಲ್ ಬಾಕಿಯಿದೆ ಎಂದು ಅಳಲು ತೋಡಿಕೊಂಡರು.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀನಾರಾಯಣ, ‘ಫೋನ್‌ ಇನ್ ಕಾರ್ಯಕ್ರಮದಲ್ಲಿ ಒಟ್ಟು 19 ಕರೆ ಬಂದಿದ್ದು, ಈ ಪೈಕಿ ಹೆಚ್ಚು ಮಂದಿ ಆಶ್ರಯ ಸಮಿತಿ ಯೋಜನೆಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿವಾರು ಪರಿಶೀಲನೆ ನಡೆಸಲಾಗುವುದು. ಯಾರಿಗೆ ಸಮಸ್ಯೆ ಆಗಿದೆಯೋ ಅವರಿಗೆ ಕೂಡಲೇ ಸಹಾಯ ಮಾಡುತ್ತೇವೆ’ ಎಂದು ಹೇಳಿದರು.

‘ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚಿನ ಕರೆ ಬರಬಹುದೆಂಬ ನಿರೀಕ್ಷೆಯಿತ್ತು. ಇತ್ತೀಚೆಗೆ ವಾಟರ್‌ಮನ್‌ಗಳ ಸಭೆ ನಡೆಸಿದ ಬಳಿಕ ಬಹುತೇಕ ಕಡೆ ನೀರಿನ ಸಮಸ್ಯೆ ಬಗೆಹರಿದಿದೆ. ಅಂಗೊಂಡಹಳ್ಳಿಯಲ್ಲಿ ಶೌಚಾಲಯ ನಿರ್ಮಾಣದ ಬಿಲ್‌ನ ಮೊತ್ತವನ್ನು ಪಿಡಿಒ ತನ್ನ ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ. ಶೌಚಾಲಯದ ಫಲಾನುಭವಿಗಳಿಗೆ ಬಿಲ್ ಪಾವತಿಸಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ತಂತ್ರಾಂಶದ ಸಮಸ್ಯೆ ಎಂದು ಪಿಡಿಒ ಕಾರಣ ಹೇಳುತ್ತಾರೆ. ಚುನಾವಣೆ ನಂತರ ಅವರನ್ನು ವರ್ಗಾವಣೆ ಮಾಡುತ್ತೇವೆ’ ಎಂದರು.

‘ನರೇಗಾ ಯೋಜನೆ ಫಲಾನುಭವಿಗಳ ಉದ್ಯೋಗ ಚೀಟಿಗಳನ್ನು ಸ್ಥಳೀಯ ಗುತ್ತಿಗೆದಾರರು, ಗ್ರಾಮ ಪಂಚಾಯಿತಿ ಸದಸ್ಯರು ಪಡೆದುಕೊಂಡು ತಮ್ಮ ಆಪ್ತರ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡು ಅರ್ಹರಿಗೆ ವಂಚಿಸುತ್ತಿದ್ದಾರೆ. ಈ ಬಗ್ಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.