ADVERTISEMENT

ತ್ಯಾಜ್ಯ ವಿಲೇವಾರಿ ಘಟಕ ಕಡ್ಡಾಯ

ತಾಲ್ಲೂಕು ಪಂಚಾಯಿತಿಯ ಮೊದಲ ಸಭೆಯಲ್ಲಿ ರೂಪಕಲಾ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 5:49 IST
Last Updated 25 ಜೂನ್ 2020, 5:49 IST
ಕೆಜಿಎಫ್ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಶಾಸಕಿ ಎಂ.ರೂಪಕಲಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಹಾಜರಿದ್ದರು
ಕೆಜಿಎಫ್ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಶಾಸಕಿ ಎಂ.ರೂಪಕಲಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಹಾಜರಿದ್ದರು   

ಕೆಜಿಎಫ್: ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ₹20 ಲಕ್ಷ ವೆಚ್ಚದಲ್ಲಿ ಕಡ್ಡಾಯವಾಗಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಬೇಕು. ಇದಕ್ಕಾಗಿ ಸೂಕ್ತ ಸ್ಥಳ ಪರಿಶೀಲನೆ ಮಾಡಲು ತಾಲ್ಲೂಕು ಪಂಚಾಯಿತಿ ಸದಸ್ಯರು ಶ್ರಮಿಸಬೇಕು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ಕೆಜಿಎಫ್ ತಾಲ್ಲೂಕು ರಚನೆಯಾದ ನಂತರ ನಡೆದ ತಾಲ್ಲೂಕು ಪಂಚಾಯಿತಿಯ ಮೊದಲ ಸಭೆಯಲ್ಲಿ ಮಾತನಾಡಿ, ತ್ಯಾಜ್ಯ ಘಟಕಕ್ಕೆ ಅನುದಾನ ಕೂಡ ಬಿಡುಗಡೆಯಾಗಿದೆ. ಈ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಬೇಕು ಎಂದು ಹೇಳಿದರು.

ಶಾಲೆಗಳಲ್ಲಿ ಕೊರೆಯಿಸಲಾಗಿರುವ ಕೊಳವೆಬಾವಿಗಳಿಗೆ ಮೋಟರ್ ಅಳವಡಿಸಿ, ಕುಡಿಯುವ ಮತ್ತು ಶೌಚಾಲಯಕ್ಕೆ ನೀರು ವ್ಯವಸ್ಥೆ ಮಾಡಬೇಕು. ಹೆಣ್ಣು ಮಕ್ಕಳ ಶೌಚಾಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಬಯಲು ಶೌಚಾಲಯದಂತಹ ಅನಿಷ್ಟ ಪದ್ದತಿ ನಿಲ್ಲಿಸಬೇಕು ಎಂದು ಹೇಳಿದರು.

ADVERTISEMENT

ಕೃಷಿ ಹೊಂಡಗಳಿಗೆ ಬೇಲಿ ಹಾಕದ ಪ್ರಯುಕ್ತ ಪದೇ ಪದೇ ಅದರೊಳಗೆ ಬಿದ್ದು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೊಂಡಗಳಿಗೆ ಬೇಲಿ ಹಾಕಬೇಕೆಂದು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದು ಪಾಲನೆಯಾಗದಿದ್ದಲ್ಲಿ ವಿವರ ನೀಡಬೇಕು ಎಂದು ಶಾಸಕಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಕಾರ್ಯ ನಿರ್ವಾಹಕ ಅಧಿಕಾರಿ ರವೀಂದ್ರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶೇಷಾದ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.