ಕೆಜಿಎಫ್: ಹಳ್ಳಿಗಳಲ್ಲಿ ಅನಧಿಕೃತ ಮದ್ಯ ಮಾರಾಟದ ಹಾವಳಿಯಿಂದಾಗಿ ಶಾಸಕಿ ರೂಪಕಲಾ ಸ್ವತಃ ಮುಜುಗರಕ್ಕೆ ಈಡಾದ ಘಟನೆ ಶನಿವಾರ ನಡೆದಿದೆ.
ತಾಲ್ಲೂಕಿನ ಜೇಡಮಾಕನಹಳ್ಳಿಯಲ್ಲಿ ಶಾಸಕರ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮದ ಅಂಗವಾಗಿ ಅಧಿಕಾರಿಗಳ ಜೊತೆ ಗ್ರಾಮಕ್ಕೆ ತೆರಳಿ ಕಾರ್ಯಕ್ರಮ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಕುಡುಕರು ಕಾರ್ಯಕ್ರಮಕ್ಕೆ ಪದೇ ಪದೇ ಅಡ್ಡಿ ಉಂಟು ಮಾಡುತ್ತಿದ್ದರು. ಸ್ಥಳದಲ್ಲಿ ಇದ್ದ ಪೊಲೀಸರು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಕುಡಕನೊಬ್ಬ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಕೈಯಿಂದ ತಳ್ಳಿದ ಘಟನೆ ಕೂಡ ನಡೆಯಿತು.
ತಾಲ್ಲೂಕು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಮದ್ಯದ ಬೆಲೆ ಕಡಿಮೆ ಎಂದು ಆಂಧ್ರಪ್ರದೇಶದವರು ಕರ್ನಾಟಕದ ಗಡಿ ಭಾಗಕ್ಕೆ ಬಂದು ಮದ್ಯ ಸೇವನೆ ಮಾಡುವುದು ದಿನನಿತ್ಯದ ಸಂಗತಿಯಾಗಿದೆ. ಇದರ ಜೊತೆಗೆ ಹಳ್ಳಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಗ್ರಾಮಗಳಲ್ಲಿರುವ ಕೆಲ ಅಂಗಡಿಗಳಲ್ಲಿ ಮದ್ಯವನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿದರೂ, ಅಬಕಾರಿ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂಘ ಸಂಸ್ಥೆಗಳು ಮತ್ತು ಮಹಿಳೆಯರ ದೂರಾಗಿದೆ.
ಜನಸ್ಪಂದನ, ಜನಸಂಪರ್ಕ ಸಭೆ, ಅಟ್ರಾಸಿಟಿ ಸಭೆಯಲ್ಲಿ ಅನಧಿಕೃತ ಮದ್ಯ ಮಾರಾಟದ ಬಗ್ಗೆ ದೂರುಗಳು ಪದೇ ಪದೇ ಕೇಳಿ ಬರುತ್ತಿವೆ. ಆದರೂ ಕೂಡ ಗ್ರಾಮೀಣ ಭಾಗದಲ್ಲಿ ಅನಧಿಕೃತ ಮದ್ಯದ ಮಾರಾಟಕ್ಕೆ ಕಡಿವಾಣ ಹಾಕಲು ಸಂಬಂಧಿಸಿದ ಇಲಾಖೆಗಳಿಗೆ ಸಾಧ್ಯವಾಗಲಿಲ್ಲ. ಶಾಸಕಿ ನಡೆಸುತ್ತಿದ್ದ ಸಭೆಯಲ್ಲಿ ಇಬ್ಬರು ಕುಡುಕರು ಅನುಚಿತವಾಗಿ ವರ್ತಿಸಿದ್ದಾರೆ. ಪ್ರತಿನಿತ್ಯ ಗ್ರಾಮದಲ್ಲಿ ಇಂತಹ ಹಾವಳಿ ತಡೆಯುವುದು ಹೇಗೆ. ದುಡಿದ ಕೂಲಿಯೆಲ್ಲಾ ಕುಡಿತದ ಪಾಲಾಗುತ್ತಿದ್ದು, ಸಂಸಾರ ನಡೆಸುವುದು ಕಷ್ಟವಾಗುತ್ತಿದೆ ಎಂದು ಗ್ರಾಮೀಣ ಮಹಿಳೆಯರು ಅಹವಾಲು ತೋಡಿಕೊಂಡರು.
ಅನಧಿಕೃತ ಮದ್ಯ ಮಾರಾಟದ ವಿಷಯದ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ವ್ಯಾಪ್ತಿಯ ಅಧಿಕಾರಿಗಳಿಗೆ ಸೂಚಿಸಲಾಗುವುದು.ಶಂಕರ್ ಉಪ ಅಧೀಕ್ಷಕ ಅಬಕಾರಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.