ADVERTISEMENT

ಹುಳು ಬಾಧೆ ಹೆಚ್ಚಳ: ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:24 IST
Last Updated 11 ಅಕ್ಟೋಬರ್ 2021, 2:24 IST
ಅವರೆ ಗಿಡಕ್ಕೆ ಬಿದ್ದಿರುವ ಹೇನು
ಅವರೆ ಗಿಡಕ್ಕೆ ಬಿದ್ದಿರುವ ಹೇನು   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬೆಳೆಯಲಾಗಿರುವ ಮಾವು, ಅವರೆ ಹಾಗೂ ತರಕಾರಿ ಬೆಳೆಗಳಲ್ಲಿ ಹುಳು ಬಾಧೆ ಹೆಚ್ಚಿದೆ. ಇದು ರೈತರನ್ನು ಚಿಂತೆಗೀಡು
ಮಾಡಿದೆ.

ಮಳೆ ಪ್ರಮಾಣ ಹೆಚ್ಚಿದಂತೆ ಎಲ್ಲ ಬೆಳೆಗಳಿಗೂ ಹುಳು ಬಾಧೆ ಹೆಚ್ಚಿದೆ. ತಾಲ್ಲೂಕಿನಾದ್ಯಂತ ಬಸವನ ಹುಳು ಹಾಗೂ ಜೊಲ್ಲು ಹುಳುಗಳ ಓಡಾಟ ಮಿತಿ ಮೀರಿದೆ. ಬಯಲಿನ ಮೇಲೆ ಓಡಾಡುವವರಿಗೆ ಹಿಂದೆ ದಟ್ಟವಾಗಿ ಅಂಟು ಸ್ರವಿಸುತ್ತ ನಿಧಾನವಾಗಿ ಓಡಾಡುವ ಇವುಗಳ ದರ್ಶನವಾಗುತ್ತದೆ.

ರಾತ್ರಿ ಹೊತ್ತಿನಲ್ಲಿ ರಸ್ತೆ ದಾಟುವಾಗ ವಾಹನಗಳ ಚಕ್ರಗಳಿಗೆ ಸಿಕ್ಕಿ ಅಪ್ಪಚ್ಚಿಯಾದ ಹುಳುಗಳಿಗೆ
ಲೆಕ್ಕವಿಲ್ಲ.

ADVERTISEMENT

‘ಇವು ಈ ಹಿಂದೆ ಅಪರೂಪಕ್ಕೆ ಕಂಡು ಬರುತ್ತಿದ್ದವು. ಬೆಳೆಗಳಿಗೆ ಹಾನಿ ಮಾಡುತ್ತಿರಲಿಲ್ಲ. ಮಾಡಿದರೂ ಗಮನಾರ್ಹವಾಗಿ ಇರಲಿಲ್ಲ. ಆದರೆ ಈಗ ಬೆಂಡೆ, ಮೆಣಸಿನಕಾಯಿ, ಸೊಪ್ಪು ಮತ್ತಿತರ ತರಕಾರಿ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ.

ಹಿಂಡು ಹಿಂಡಾಗಿ ಬರುವ ಈ ಹುಳುಗಳು ಕಷ್ಟಪಟ್ಟು ಬೆಳೆದ ಬೆಳೆಯನ್ನು ತಿಂದು ಹಾಳು ಮಾಡುತ್ತಿವೆ’ ಎಂಬುದು ರೈತರ ಅಳಲು.

‘ತಾಲ್ಲೂಕಿನಲ್ಲಿ ಮಳೆ ಯಾಗುತ್ತಿರುವುದರಿಂದ ಮಾವಿನ ಮರಗಳು ಚಿಗುರುತ್ತಿವೆ. ಆದರೆ, ಚಿಗುರನ್ನು ಹಸಿರು ಹುಳುಗಳು ತಿಂದು ಹಾಳುಗೆಡುವುತ್ತಿವೆ. ಬಂದ ಚಿಗುರೆಲ್ಲ ಹುಳುಗಳ ಹೊಟ್ಟೆ ಸೇರುತ್ತಿದೆ. ಇದರಿಂದ ಗಿಡ ಮರಗಳ ಬೆಳವಣಿಗೆ ಕುಂಠಿತಗೊಂಡಿದೆ’ ಎಂದು ಮಾವು ಬೆಳೆಗಾರ ಮಂಜುನಾಥ ರೆಡ್ಡಿ ‘ಪ್ರಜಾವಾಣಿ’ಗೆ
ತಿಳಿಸಿದರು.

ಇಷ್ಟು ಮಾತ್ರವಲ್ಲದೆ ಅವರೆ ಗಿಡಗಳಿಗೆ ಸ್ಥಳೀಯವಾಗಿ ‘ಗೊಲ್ಲಪುಲುಗು’ ಎಂದು ಕರೆಯಲ್ಪಡುವ ಗಟ್ಟಿ ದೇಹದ ಬಿಳಿ ಹುಳುಗಳು ಹಾಗೂ ಸೇನುಕುಕ್ಕ ಎಂದು ಕರೆಯಲ್ಪಡುವ ದೊಡ್ಡ ಗಾತ್ರದ ಹುಳುಗಳು ಮತ್ತು ದೇಹದ ಮೇಲೆ ಕೂದಲು ಹೊಂದಿರುವ ಬಂತೆ ಹುಳುಗಳು ಮಾರಕವಾಗಿ ಪರಿಣಮಿಸಿವೆ.

‘ಈ ಎಲ್ಲ ಹುಳುಗಳ ನಿಯಂತ್ರಣಕ್ಕೆ ಇಮ್ಡಾ ಔಷಧಿಯನ್ನು 1 ಲೀ. ನೀರಿಗೆ ಒಂದು ಮಿಲಿ ಲೀಟರ್‌ನಂತೆ ಸೇರಿಸಿ ಗಿಡದ ಎಲ್ಲ ಭಾಗಕ್ಕೆ ಬೀಳುವಂತೆ ಸಿಂಪಡಣೆ ಮಾಡಬೇಕು. ರೈತರು ಹುಳು ನಿಯಂತ್ರಣವನ್ನು ಸಾಂಘಿಕವಾಗಿ ಕೈಗೊಂಡಲ್ಲಿ ನಿಯಂತ್ರಣ ಸಾಧ್ಯವಾಗುತ್ತದೆ’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎ. ಬೈರಾರೆಡ್ಡಿ
ತಿಳಿಸಿದರು.

ಊಜಿ ನೊಣ ತರಕಾರಿ ಬೆಳೆಗಳನ್ನು ಬಲಿ ಪಡೆಯುತ್ತಿದೆ. ಊಜಿ ನೊಣದ ಹಾವಳಿ ನಡುವೆ ಟೊಮೆಟೊ ಬೆಳೆಯುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಬಳ್ಳಿ ಬೆಳೆಗಳಾದ ಸೌತೆ, ಹೀರೆ, ಹಾಗಲ ಮುಂತಾದವು ಊಜಿ ನೊಣದ ಹಾವಳಿಯಿಂದ ನಲುಗಿವೆ. ಯಾವುದೇ ಔಷಧಿ ಸಿಂಪಡಣೆ ಮಾಡಿದರೂ ನೊಣ ನಿಯಂತ್ರಣಕ್ಕೆ ಬರುತ್ತಿಲ್ಲ’ ಎಂಬುದು ಬಹುತೇಕ ರೈತರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.