ADVERTISEMENT

ಮಾವಿಗೆ ಬೊಬ್ಬೆ ರೋಗ ಬಾಧೆ

ಶ್ರೀನಿವಾಸಪುರ ತಾಲ್ಲೂಕಿನ ಬೆಳೆಗಾರರ ಆತಂಕ

ಆರ್.ಚೌಡರೆಡ್ಡಿ
Published 31 ಮಾರ್ಚ್ 2022, 4:10 IST
Last Updated 31 ಮಾರ್ಚ್ 2022, 4:10 IST
ಶ್ರೀನಿವಾಸಪುರ ತಾಲ್ಲೂಕಿನ ಪೆದ್ದಪಲ್ಲಿ ಗ್ರಾಮದ ಸಮೀಪ ತೋಟವೊಂದರಲ್ಲಿ ಬೊಬ್ಬೆ ರೋಗ ಬಂದಿರುವ ತೋತಾಪುರಿ ಜಾತಿಯ ಮಾವಿನ ಕಾಯಿ
ಶ್ರೀನಿವಾಸಪುರ ತಾಲ್ಲೂಕಿನ ಪೆದ್ದಪಲ್ಲಿ ಗ್ರಾಮದ ಸಮೀಪ ತೋಟವೊಂದರಲ್ಲಿ ಬೊಬ್ಬೆ ರೋಗ ಬಂದಿರುವ ತೋತಾಪುರಿ ಜಾತಿಯ ಮಾವಿನ ಕಾಯಿ   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಹೀಚಿಗೆ ರೋಗ ಹಾಗೂ ಕೀಟ ಬಾಧೆ ಹೆಚ್ಚಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಮಾವಿನ ಮರಗಳಲ್ಲಿ ಕಾಣಿಸಿಕೊಂಡ ದಟ್ಟವಾದ ಚಿಗುರಿನಿಂದ ಹೀಚು ಕಟ್ಟಲಿಲ್ಲ. ಈಗ ಮರಗಳಲ್ಲಿ ಶೇ 20ಕ್ಕಿಂತ ಕಡಿಮೆ ಪ್ರಮಾಣದ ಫಸಲು ಮಾತ್ರ ಉಳಿದುಕೊಂಡಿದೆ. ಅದರಲ್ಲೂ ತೋತಾಪುರಿ ಜಾತಿಯ ಮಾವನ್ನು ಹೊರತುಪಡಿಸಿದರೆ ಉಳಿದ ಜಾತಿಯ ಮರಗಳು ಖಾಲಿ ಬಿದ್ದಿವೆ.

ಇರುವ ಫಸಲಾದರೂ ಉಳಿದರೆ ಸುಗ್ಗಿ ಕಾಲದಲ್ಲಿ ನಾಲ್ಕು ಕಾಸು ಸಿಗಬಹುದು ಎಂಬ ಬೆಳೆಗಾರರ ಭರವಸೆ ಹುಸಿಯಾಗತೊಡಗಿದೆ. ಇದೇ ಮೊದಲ ಸಲ ಅಳಿದುಳಿದ ತೋತಾಪುರಿ ಮಾವಿನ ಕಾಯಿಗೆ ಬೊಬ್ಬೆ ರೋಗ ಬಂದಿದೆ.

ADVERTISEMENT

‘ತೋಟದಲ್ಲಿ ತೋತಾಪುರಿ ಮಾವಿನ ಹೀಚು ಬೆಳವಣಿಗೆ ಹಂತದಲ್ಲಿದೆ. ಹಚ್ಚಗೆ ನಳನಳಿಸುತ್ತಿದ್ದ ಪಿಂದೆಗಳ ಮೇಲೆ ಬೊಬ್ಬೆಯಂಥ ಆಕೃತಿ ಕಾಣಿಸಿಕೊಂಡಿದೆ. ಅಲ್ಲಲ್ಲಿ ಗಂಟುಗಳು ಕಂಡುಬರುತ್ತಿವೆ. ಇದರಿಂದ ಕಾಯಿಯ ಬೆಳವಣಿಗೆ ಕುಂಠಿತವಾಗುತ್ತಿದೆ. ಇಂಥ ರೋಗಪೀಡಿತ ಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದಿಲ್ಲ’ ಎಂದು ತಾಲ್ಲೂಕು ಮಾವು ಬೆಳೆಗಾರರ ಸಂಘದ ಅಧ್ಯಕ್ಷ ರಾಜಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಅಂಟುನೊಣ ಬಾಧೆ ನಿವಾರಣೆಗೆ ಔಷಧಿ ಸಿಂಪಡಣೆ ಮಾಡಲು ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಈಗ ಬೊಬ್ಬೆ ರೋಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ತೋಟಗಾರಿಕೆ ಇಲಾಖೆ ಮೂಲಕ ರೋಗ ನಿವಾರಣೆಗೆ ಮಾರ್ಗದರ್ಶನ ಮಾಡಿಸಬೇಕು. ರೋಗ ಹಾಗೂ ಕೀಟ ಬಾಧೆ ನಿವಾರಣೆಗೆ ಅಗತ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಬೇಕು’ ಎಂದು ಮನವಿ ಮಾಡಿದರು.

ಈ ಮಧ್ಯೆ ತೋತಾಪುರಿ ಜಾತಿ ಮಾವಿಗೆ ಒಳ್ಳೆ ಬೆಲೆ ಬಂದಿದೆ. ನಗರ ಹಾಗೂ ಪಟ್ಟಣದಲ್ಲಿ ಹಸಿ ಕಾಯಿಗೆ ಮಸಾಲೆ ಹಾಕಿ ಮಾರಾಟ ಮಾಡಲಾಗುತ್ತಿದೆ. ಮಾವು ಪ್ರಿಯರು ಬೆಲೆ ಹೆಚ್ಚಳವನ್ನು ಬದಿಗಿಟ್ಟು ಖರೀದಿಸಿ ತಿನ್ನುತ್ತಿದ್ದಾರೆ. ಇದರಿಂದ ತೋಟಗಳಲ್ಲಿ ಕಾಯಿ ಕಳುವಿನ ಪ್ರಕರಣಗಳು ಹೆಚ್ಚಿವೆ. ಬೆಳೆಗಾರರಿಗೆ ಹಗಲಿರುಳು ತೋಟಗಳನ್ನು ಕಾಯಬೇಕಾದ ಅನಿವಾರ್ಯತೆ ಉಂಟಾಗಿದೆ.

‘ತೋತಾಪುರಿ ಹಸಿ ಮಾವಿನ ಕಾಯಿ ಕೆ.ಜಿಯೊಂದಕ್ಕೆ ₹ 70 ರಂತೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ದೊಡ್ಡ ಗಾತ್ರದ ಕಾಯಿ ಇದ್ದಲ್ಲಿ ಹೊರಗಿನ ವ್ಯಾಪಾರಿಗಳು ಟನ್‌ವೊಂದಕ್ಕೆ ₹ 1 ಲಕ್ಷದ ವರೆಗೆ ಕೇಳುತ್ತಿದ್ದಾರೆ. ಆದರೆ, ಹೀಚು ಕೀಳಲು ಇಷ್ಟಪಡದ ಬೆಳೆಗಾರರು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ನೀಲಟೂರು ಗ್ರಾಮದ ಪ್ರಗತಿಪರ ಮಾವು ಬೆಳೆಗಾರ ಚಂದ್ರಶೇಖರ್ ಹೇಳಿದರು.

ಈ ಬಾರಿ ಬೇನಿಷಾ ಮರಗಳಲ್ಲಿ ಹೂ ಬಂದಿರಲಿಲ್ಲ. ಆದರೆ, ಈಗ ಹೂ ಕಾಣಿಸಿಕೊಳ್ಳುತ್ತಿದೆ. ಈ ಜಾತಿಯ ಮರಗಳು ಎಂದೂ ಇಷ್ಟು ತಡವಾಗಿ ಹೂ ಬಿಟ್ಟಿರಲಿಲ್ಲ. ಸುಮಾರು ಕಾಯಿ ಕಟಾವಿಗೆ ಬರುವ ಕಾಲದಲ್ಲಿ ಹೂ ಬರುತ್ತಿದೆ. ಇದು ಎಷ್ಟರಮಟ್ಟಿಗೆ ಕಾಯಿ ಕಟ್ಟುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.

ನಿಜ ಹೇಳಬೇಕೆಂದರೆ ಈ ಬಾರಿ ಮಾವಿನ ಬೆಳೆ ತಾಳ ತಪ್ಪಿದೆ. ಹೂ ಬಿಡುವ ಹಂತದಲ್ಲೇ ಸಾಲು ಸಾಲು ಸಮಸ್ಯೆಗಳು ಸುತ್ತುವರಿದ ಪರಿಣಾಮವಾಗಿ ದೊಡ್ಡ ಪ್ರಮಾಣದಲ್ಲಿ ಹೂ ನೆಲಕಚ್ಚಿತು. ಈಗ ಇರುವ ಫಸಲಿಗೆ ರೋಗ ಹಾಗೂ ಕೀಟ ಬಾಧೆ ಮುಳುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.