ADVERTISEMENT

ಪರೀಕ್ಷೆ ರದ್ದುಪಡಿಸಲು ಒತ್ತಾಯ: ಧರಣಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 12:05 IST
Last Updated 21 ಆಗಸ್ಟ್ 2020, 12:05 IST
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.   

ಕೋಲಾರ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಸದಸ್ಯರು ಇಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಕೋವಿಡ್‌–19 ಸಂಕಷ್ಟದಲ್ಲೂ ವಿಶ್ವವಿದ್ಯಾಲಯವು ಸರ್ಕಾರದ ನಿರ್ದೇಶನ ಧಿಕ್ಕರಿಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿದೆ. ವಿ.ವಿಗೆ ವಿದ್ಯಾರ್ಥಿಗಳ ಸುರಕ್ಷತೆಗಿಂತ ಪರೀಕ್ಷೆ ನಡೆಸುವುದೇ ಮುಖ್ಯವಾಗಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ದಿನೇದಿನೇ ಕೊರೊನಾ ಸೋಂಕಿತರು ಹಾಗೂ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕಾನೂನು ವಿ.ವಿಯು ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ. ವಿ.ವಿಯು ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ವಾಸುದೇವರೆಡ್ಡಿ ದೂರಿದರು.

ADVERTISEMENT

‘ಕೋವಿಡ್‌–19 ಹಾಗೂ ಲಾಕ್‌ಡೌನ್‌ ಕ್ರಮದಿಂದಾಗಿ ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ. ವಿ.ವಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಬಲವಂತವಾಗಿ ದುಬಾರಿ ಪರೀಕ್ಷಾ ಶುಲ್ಕ ವಸೂಲಿ ಮಾಡಲು ಮುಂದಾಗಿದೆ. ಪರೀಕ್ಷಾ ಶುಲ್ಕ ಪಾವತಿಗೆ ದಿನಾಂಕ ನಿಗದಿಪಡಿಸಿ ವಿದ್ಯಾರ್ಥಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿ ವಿರೋಧಿ ನಡೆ: ‘ವಿದ್ಯಾರ್ಥಿಗಳಿಗೆ ಪ್ರಥಮ ಮೌಲ್ಯಮಾಪನದಲ್ಲಿ ಉತ್ತಮ ಫಲಿತಾಂಶ ನೀಡದೆ ಕಡಿಮೆ ಅಂಕಗಳ ಅಂತರದಲ್ಲಿ ಅನುತ್ತೀರ್ಣಗೊಳಿಸಲಾಗುತ್ತಿದೆ. ನಂತರ ಮರುಮೌಲ್ಯಮಾಪನದ ಸೋಗಿನಲ್ಲಿ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ಪಡೆದು ಸುಲಿಗೆ ಮಾಡಲಾಗುತ್ತಿದೆ. ವಿ.ವಿಯು ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದೆ’ ಎಂದು ಧರಣಿನಿರತರು ಆರೋಪಿಸಿದರು.

‘ಪರೀಕ್ಷೆ ನಡೆಸಬಾರದು. ಪರೀಕ್ಷಾ ಶುಲ್ಕ ಪಾವತಿ ಆದೇಶ ಹಿಂಪಡೆಯಬೇಕು. ಕಾನೂನು ವಿದ್ಯಾರ್ಥಿಗಳ ಬಾಕಿ ವೇತನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು. ಮರು ಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿಗಳು ಕಟ್ಟಿರುವ ಹೆಸರಿನಲ್ಲಿ ಹಿಂದಿರುಗಿಸಬೇಕು’ ಎಂದು ಒತ್ತಾಯಿಸಿದರು.

ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ಪ, ತಾಲ್ಲೂಕು ಘಟಕದ ಕಾರ್ಯದರ್ಶಿ ಅಂಕಿತಾ, ವಿ.ವಿ ವಿದ್ಯಾರ್ಥಿಗಳಾದ ವಿಜಯಕುಮಾರಿ, ಉಮಾ, ಮುರಳಿ, ಶ್ರೀಹರಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.