ADVERTISEMENT

ಆರ್ಥಿಕ ಸೌಲಭ್ಯಕ್ಕೆ ಒತ್ತಾಯಿಸಿ ಧರಣಿ

ಲಾಕ್‌ಡೌನ್‌ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ: ಸಿಪಿಎಂ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮೇ 2020, 12:03 IST
Last Updated 20 ಮೇ 2020, 12:03 IST
ಲಾಕ್‌ಡೌನ್‌ನಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬದುಕು ಕಟ್ಟಿಕೊಳ್ಳಲು ಆರ್ಥಿಕ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಸಿಪಿಎಂ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ಲಾಕ್‌ಡೌನ್‌ನಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬದುಕು ಕಟ್ಟಿಕೊಳ್ಳಲು ಆರ್ಥಿಕ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಸಿಪಿಎಂ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.   

ಕೋಲಾರ: ಲಾಕ್‌ಡೌನ್‌ನಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬದುಕು ಕಟ್ಟಿಕೊಳ್ಳಲು ಆರ್ಥಿಕ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಸಿಪಿಎಂ ಸದಸ್ಯರು ಇಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ರಾಜ್ಯವು ಮೊದಲೇ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿತ್ತು. ಕೊರೊನಾ ಸೋಂಕಿನ ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾದ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರಿಂದ ಕೃಷಿಕರು, ಕಾರ್ಮಿಕರು, ಬಡವರು, ದಲಿತರ ಬದುಕು ಬರ್ಬರವಾಗಿದೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಬಡ ಜನರ ಬದುಕು ಸುಧಾರಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳಿಗೆ ಸಾರ್ವಜನಿಕರ ಸಂಪನ್ಮೂಲಗಳ ನೆರವು ನೀಡುತ್ತಿದೆ. ಕೋವಿಡ್‌–19ನ ಸಂದರ್ಭ ಬಳಸಿಕೊಂಡು ತೆರೆಮರೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜನವಿರೋಧಿ ಕಾನೂನು ಜಾರಿಗೊಳಿಸುತ್ತಿದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ನಾರಾಯಣಸ್ವಾಮಿ ದೂರಿದರು.

ADVERTISEMENT

‘ಸರ್ಕಾರವು ರೈತರನ್ನು ಲೂಟಿ ಮಾಡಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಎಪಿಎಂಸಿಗಳನ್ನು ನಿಯಂತ್ರಣದಿಂದ ಮುಕ್ತಗೊಳಿಸಿ ಕಾರ್ಪೊರೇಟ್‌ ಕಂಪನಿಗಳ ಲೂಟಿಗೆ ಅವಕಾಶ ನೀಡಿದೆ. ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಿಸಿ ರಾಜಕೀಯ ಲಾಭ ಪಡೆಯಲು ಮುಂದಾಗಿದೆ. ಜನರ ತಲಾ ಆದಾಯ ಹೆಚ್ಚಿಸುವ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ರಾಜ್ಯವನ್ನು ಪಾರು ಮಾಡುವ ನೀತಿ ಜಾರಿಗೆ ತಂದಿಲ್ಲ’ ಎಂದು ಕಿಡಿಕಾರಿದರು.

ಆಹಾರಧಾನ್ಯ ನೀಡಿ: ‘ವಿದ್ಯುತ್ ರಂಗ ಖಾಸಗೀಕರಣ ಮಾಡಬಾರದು. ಗ್ರಾ.ಪಂಗಳಿಗೆ ಆಡಳಿತ ಸಮಿತಿ ನೇಮಿಸುವ ಆದೇಶ ಹಿಂಪಡೆಯಬೇಕು. ಹಾಲಿ ಚುನಾಯಿತ ಸದಸ್ಯರ ಸಮಿತಿಯನ್ನೇ ಚುನಾವಣೆ ನಡೆಯುವವರೆಗೂ ಉಸ್ತುವಾರಿಯಾಗಿ ಪರಿಗಣಿಸಬೇಕು. ದಿನನಿತ್ಯದ ದುಡಿಮೆ ಆಧರಿಸಿದವರಿಗೆ 3 ತಿಂಗಳು ಸಮಗ್ರ ಆಹಾರಧಾನ್ಯಗಳ ಕಿಟ್ ಒದಗಿಸಬೇಕು. ಜತೆಗೆ ತಿಂಗಳಿಗೆ ತಲಾ ₹ 7,500 ನೆರವು ನೀಡಬೇಕು’ ಎಂದು ಧರಣಿನಿರತರು ಒತ್ತಾಯಿಸಿದರು.

ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾದ ಎಂ.ವಿಜಿಕೃಷ್ಣ, ಎನ್.ಎನ್‌.ಶ್ರೀರಾಮ್, ಸುಶೀಲಾ, ಆಶಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.