ADVERTISEMENT

ರಾಸುಗಳಿಗೆ ಚಿಕಿತ್ಸೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 11:27 IST
Last Updated 3 ಅಕ್ಟೋಬರ್ 2020, 11:27 IST

ಕೋಲಾರ: ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, ಪಶು ವೈದ್ಯಾಧಿಕಾರಿಗಳು ಹಳ್ಳಿಗಳಿಗೆ ತೆರಳಿ ರಾಸುಗಳಿಗೆ ಚಿಕಿತ್ಸೆ ನೀಡಬೇಕು ಎಂದು ಕರ್ನಾಟಕ ರೈತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ ಒತ್ತಾಯಿಸಿದ್ದಾರೆ.

ಹೈನುಗಾರಿಕೆಯು ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಜಿಲ್ಲೆಯ ಬಹುಪಾಲು ರೈತರು ಕೃಷಿಯ ಜತೆಗೆ ರಾಸುಗಳನ್ನು ಸಾಕಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿರುವುದರಿಂದ ರೈತರು ಆತಂಕಗೊಂಡಿದ್ದಾರೆ ಎಂದು ಗಣೇಶ್‌ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚರ್ಮ ಗಂಟು ಕಾಯಿಲೆ ಬಗ್ಗೆ ರೈತರಿಗೆ ಸರಿಯಾದ ಮಾಹಿತಿಯಿಲ್ಲ. ರೋಗಕ್ಕೆ ತುತ್ತಾಗಿರುವ ಜಾನುವಾರುಗಳ ಮೈ ಮೇಲೆ ದೊಡ್ಡ ಗಂಟುಗಳಾಗಿದ್ದು, ಇದಕ್ಕೆ ಔಷಧ ಏನೆಂದು ಗೊತ್ತಿಲ್ಲ. ರೋಗಪೀಡಿತ ರಾಸುಗಳು ಮೃತಪಡುವ ಸಾಧ್ಯತೆ ಇರುವುದರಿಂದ ರೈತರಲ್ಲಿ ಭಯ ಹೆಚ್ಚಿದೆ. ಪಶು ವೈದಾಧಿಕಾರಿಗಳು ತಡ ಮಾಡದೆ ರಾಸುಗಳಿಗೆ ಚಿಕಿತ್ಸೆ ನೀಡಿ ರೈತರ ಆತಂಕ ದೂರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಚರ್ಮ ಗಂಟು ರೋಗ ಲಕ್ಷಣ ಮತ್ತು ಕಾಯಿಲೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗ್ರಾಮೀಣ ಭಾಗದ ರೈತರಿಗೆ ಜಾಗೃತಿ ಮೂಡಿಸಬೇಕು. ರಾಸುಗಳಿಗೆ ಲಸಿಕೆ ಹಾಕಲು ಗ್ರಾಮಗಳಲ್ಲಿ ಶಿಬಿರ ನಡೆಸಬೇಕು. ರೋಗ ಹತೋಟಿಗೆ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಮೂಲಕ ಉಚಿತವಾಗಿ ಔಷಧ ಮತ್ತು ಲಸಿಕೆ ನೀಡಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.