ADVERTISEMENT

ಕೋಲಾರ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 15:37 IST
Last Updated 29 ಸೆಪ್ಟೆಂಬರ್ 2020, 15:37 IST

ಕೋಲಾರ: ‘ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನವನ್ನು ಕುರುಬ ಸಮುದಾಯಕ್ಕೆ ನೀಡಬೇಕು’ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮುನಿಯಪ್ಪ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುರುಬ ಸಮುದಾಯದ ಜನಸಂಖ್ಯೆ ಸುಮಾರು 3 ಲಕ್ಷವಿದೆ. ಈವರೆಗೂ ಇತರೆ ಸಮುದಾಯದವರಿಗೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮುಂದೆ ಕುರುಬ ಸಮಾಜಕ್ಕೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಕುರುಬ ಸಮಾಜವು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಹೆಚ್ಚಿನ ಶಕ್ತಿ ನೀಡಿದೆ. ಜಿಲ್ಲೆಯಲ್ಲಿ ಕುರುಬ ಸಮುದಾಯವನ್ನು ಪರಿಗಣಿಸಿ ಹಿಂದುಳಿದ ಸಮಾಜಕ್ಕೆ ಬಲ ತುಂಬಬೇಕು. ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಹಾಗೂ ಜನಪ್ರತಿನಿಧಿಗಳು ಕುರುಬ ಸಮಾಜದವರನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ವರಿಷ್ಠರನ್ನು ಒತ್ತಾಯಿಸಬೇಕು’ ಎಂದು ಕೋರಿದರು.

ADVERTISEMENT

ಹೋರಾಟ: ‘ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಬೆಂಗಳೂರಿನಲ್ಲಿ ಅಕ್ಟೋಬರ್‌ನಲ್ಲಿ ರಾಜ್ಯ ಮಟ್ಟದ ಹೋರಾಟ ನಡೆಸುವ ಸಂಬಂಧ ಸಂಘದ ವತಿಯಿಂದ ಜಿಲ್ಲೆಯಲ್ಲಿ ಅ.5ರಂದು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಸಮುದಾಯದ ಜಿ.ಪಂ, ತಾ.ಪಂ ಸದಸ್ಯರು ಹಾಗೂ ಮುಖಂಡರನ್ನು ಒಳಗೊಂಡಂತೆ, ಪ್ರತಿಯೊಬ್ಬರ ಸಲಹೆ ಪಡೆಯಲಾಗುತ್ತದೆ. ಜಿಲ್ಲೆಯಿಂದ ರಾಜ್ಯ ಮಟ್ಟದ ಹೋರಾಟಕ್ಕೆ 2 ಸಾವಿರಕ್ಕೂ ಹೆಚ್ಚು ಜನರನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಸೋಮಣ್ಣ, ಸರಸ್ವತಮ್ಮ, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಸೋಮಶೇಖರ್, ಕಾರ್ಯಾಧ್ಯಕ್ಷ ಜೆ.ಕೆ.ಜಯರಾಮ್, ಸದಸ್ಯರಾದ ವೆಂಕಟೇಶ್‌ಮೂರ್ತಿ, ಜನಾರ್ದನ್‌, ಚಂದ್ರಶೇಖರ್, ಗಂಗಾಧರ್, ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.