ADVERTISEMENT

ಬೆಟ್ಟಕ್ಕೆ ರಸ್ತೆ ಕಾಮಗಾರಿ ಪರಿಶೀಲನೆ

ಸಂಸದ ಮುನಿಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೇವರಾಜ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 5:12 IST
Last Updated 21 ಸೆಪ್ಟೆಂಬರ್ 2022, 5:12 IST
ಕೋಲಾರ ತಾಲ್ಲೂಕಿನ ವಕ್ಕಲೇರಿಯ ಮಾರ್ಕಂಡೇಶ್ವರ ಬೆಟ್ಟದ ರಸ್ತೆಯನ್ನು ಮಂಗಳವಾರ ಸಂಸದ ಎಸ್‌.ಮುನಿಸ್ವಾಮಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಪರಿಶೀಲಿಸಿದರು
ಕೋಲಾರ ತಾಲ್ಲೂಕಿನ ವಕ್ಕಲೇರಿಯ ಮಾರ್ಕಂಡೇಶ್ವರ ಬೆಟ್ಟದ ರಸ್ತೆಯನ್ನು ಮಂಗಳವಾರ ಸಂಸದ ಎಸ್‌.ಮುನಿಸ್ವಾಮಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಪರಿಶೀಲಿಸಿದರು   

ವಕಲ್ಲೇರಿ (ಕೋಲಾರ): ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟದ ರಸ್ತೆಯನ್ನು ಶ್ರಮದಾನದ ಮೂಲಕ ಅಭಿವೃದ್ಧಿಪಡಿಸಲು ಸಂಸದ ಎಸ್. ಮುನಿಸ್ವಾಮಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್ ಪಣ ತೊಟ್ಟಿದ್ದು, ಮಂಗಳವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಬೆಟ್ಟದ ರಸ್ತೆಯ ವಿಸ್ತರಣೆ ಕಾಮ ಗಾರಿ ವೀಕ್ಷಿಸಿ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಸ್ತೆ ಅಭಿವೃದ್ಧಿ ಜತೆಗೆ ಗೋಪುರವನ್ನು ಈ ಮೊದಲು ಇದ್ದ ಹಾಗೆ ಆಕರ್ಷಕ ರೀತಿಯಲ್ಲಿ ಕಾಣುವಂತೆ ಸರಿಪಡಿಸಬೇಕೆಂದು ಸೂಚನೆ‌ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಸ್ವಾಮಿ, ‘ಜಿಲ್ಲೆಯಲ್ಲಿ ಇಂತಹ ಹಲವಾರು ಪುರಾತನ ದೇವಾಲಯಗಳಿದ್ದು, ಅವುಗಳನ್ನು ಶಾಶ್ವತವಾಗಿ ಉಳಿಸಿ ಅಭಿವೃದ್ಧಿಪಡಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.

ADVERTISEMENT

‘ಹಿರಿಯರು ಹಾಕಿರುವ ಪಾಯದ ಅಡಿಯಲ್ಲಿ, ಸರ್ಕಾರದ ಅನುದಾನ ಹೊರತುಪಡಿಸಿ ಎಲ್ಲರೂ ಸೇರಿ ದೇವಾಲಯವನ್ನು ಸ್ಯಾಂಡ್ ವಾಷ್ ಮಾಡಿ ಇತಿಹಾಸ ಉಳಿಸಲು ಪಣತೊಡಲಾಗಿದೆ’ ಎಂದು ಹೇಳಿದರು.

‘ಈಗಾಗಲೇ ಪ್ರಸಾದ ಯೋಜನೆಯಡಿ ₹ 1.32 ಕೋಟಿ ವೆಚ್ಚದಲ್ಲಿ ಕೋಲಾರಮ್ಮ, ಸೋಮೇಶ್ವರ, ಆವಣಿ ರಾಮಲಿಂಗೇಶ್ವರ ದೇವಾಲಯಗಳನ್ನು ಅಭಿವೃದ್ಧಿಪಡಿಸಿದ್ದು, ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಕಡೆಗಳಲ್ಲಿ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಡಿ. ದೇವರಾಜ್ ಮಾತನಾಡಿ, ‘ಬೇರೆ ಎಲ್ಲಾದರೂ ಹೋಗಿ ದೇವಾಲಯಗಳಿಗೆ ಸೇವೆ ಮಾಡುವುದಕ್ಕಿಂತ ನಾವು ಬಾಲ್ಯದಿಂದಲೂ ಬರುತ್ತಿದ್ದ ನಮ್ಮ ನೆರೆ ಹೊರೆಯ ದೇವಾಲಯಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಮುಂದಾಗಿದ್ದೇವೆ. ಇದಕ್ಕೆ ಸಂಸದರು ಸಹಕಾರ ನೀಡಿರುವುದು ಶ್ಲಾಘನೀಯ’ ಎಂದರು.

‘ಶ್ರಮದಾನದ ಮೂಲಕ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ದೇವರ ಕಾರ್ಯಕ್ಕೆ ಕೈ ಹಾಕಿದರೆ ಫಲ ಸಿಗುತ್ತದೆ’ ಎಂದರು.

‘ಶಿವರಾತ್ರಿ ಒಳಗೆ ಪೂರ್ಣ ಸಿಸಿ ರಸ್ತೆ‌ಯನ್ನು ಕನಿಷ್ಠ 40-50 ವರ್ಷವಾದರೂ ಹಾನಿಯಾಗದಂತೆ ನಿರ್ಮಿಸಲಾಗುವುದು. ಹೃದಯಕ್ಕೆ ಹತ್ತಿರವಾದ ಕೆಲಸ’ ಎಂದರು.

ವಕ್ಕಲೇರಿ ಮುಖಂಡ ಬಂಡಿ ವೆಂಕಟೇಶಪ್ಪ, ಪಾಲಾಕ್ಷ ಗೌಡ, ಕೋಲಾರ ಎಪಿಎಂಸಿ ಮಾಜಿ ಅಧ್ಯಕ್ಷ ಮಂಜು, ಟೇಕಲ್ ರಮೇಶ್ ಗೌಡ, ಅಗ್ರಿ ನಾರಾಯಣಸ್ವಾಮಿ, ವಕ್ಕಲೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುರಳಿ, ಮುಖಂಡರಾದ ಕೆ.ಆನಂದ್ ಕುಮಾರ್, ರಮೇಶ್, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.