ADVERTISEMENT

ಪೊಲೀಸ್‌ ಮೇಲೆ ಹಲ್ಲೆ: ದೂರು ದಾಖಲಿಸಿದ ಸಬ್‌ ಇನ್‌ಸ್ಪೆಕ್ಟರ್

ನಡುರಾತ್ರಿ ಆರೋಪಿ ಹಿಡಿಯಲು ಹೋದ ಪೊಲೀಸ್‌ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 22:08 IST
Last Updated 5 ಮಾರ್ಚ್ 2021, 22:08 IST

ಕೆಜಿಎಫ್‌: ಆರೋಪಿಯನ್ನು ಹಿಡಿಯಲು ನಡುರಾತ್ರಿ ಬಂದು ಹಲ್ಲೆಗೊಳಗಾದ ಬೆಂಗಳೂರಿನ ಮಹದೇವಪುರ ಠಾಣೆ ಸಬ್ ಇನ್‌ಸ್ಪೆಕ್ಟರ್ ಹರಿನಾಥ್ ಆರೋಪಿಗಳ ವಿರುದ್ಧ ಆಂಡರ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರುನೀಡಿದ್ದಾರೆ.

‘ಮಹದೇವಪುರ ಠಾಣೆಯಲ್ಲಿ ದಾಖಲಾದ ನಾಲ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಪ್ಪೆನ್‌ ತನ್ನ ವಾಸದ ಮನೆಯಲ್ಲಿ ಇದ್ದಾನೆ ಎಂಬ ಮಾಹಿತಿ ಪಡೆದು ರಾತ್ರಿ 12.40ಕ್ಕೆ ಆತನ ಮನೆಯ ಬಾಗಿಲನ್ನು ತಟ್ಟಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಯಾದ ಅರ್ಜುನ್‌, ಭಾಸ್ಕರ್ ಕಂಬಾರ, ಸಿದ್ದಪ್ಪ ಸಿಂಧಗಿ, ಕೆ.ಎಲ್‌. ರವಿ ಮತ್ತು ಮಮತೇಶ್ ಗೌಡ ಇದ್ದರು. ಆ ಸಮಯದಲ್ಲಿ ಮನೆ ಹಿಂಬಾಗಿಲಿನಿಂದ ಹುಡುಗನೊಬ್ಬ ಬಂದ. ಆತನನ್ನು ಹಿಡಿದು ವಿಚಾರಣೆ ನಡೆಸುತ್ತಿದ್ದಾಗ, ಅಪ್ಪೆನ್‌ ಮತ್ತು ಇನ್ನೊಬ್ಬ ವ್ಯಕ್ತಿ ಲಾಂಗ್ ಮತ್ತು ದೊಣ್ಣೆ ಹಿಡಿದು ಓಡಿಬಂದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ತಾವು ಮಹದೇವಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದಾಗ, ಆರೋಪಿಗಳು ಲಾಂ‌ಗ್‌ನಿಂದ ಕೊಲೆ ಮಾಡುವ ಉದ್ದೇಶದಿಂದ ಹೊಡೆಯಲು ಬಂದರು. ಆಗ ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದಾಗ,ಎರಡೂ ಕೈಗೆ ತೀವ್ರ ಸ್ವರೂಪದ ಗಾಯಗಳಾದವು. ನಂತರ ಸರ್ವೀಸ್‌ ರಿವಾಲ್ವಾರ್‌ನಿಂದ ಒಂದು ಸುತ್ತು ಗುಂಡು ಹಾರಿಸಲಾಯಿತು. ನಂತರ ಜೊತೆಗಿದ್ದ ಭಾಸ್ಕರ್ ಕುಂಬಾರ ಅವರಿಗೆ ದೊಣ್ಣೆಯಿಂದ ಹೊಡೆದು ಓಡಿ ಹೋದರು. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ನಡುರಾತ್ರಿ ದಾಳಿ

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಪ್ಪೆನ್‌ ನನ್ನು ಹಿಡಿಯಲು ಬಂದ ಮಹದೇವಪುರ ಪೊಲೀಸರು ದಾಳಿಯ ಮಾಹಿತಿಯನ್ನು ಸ್ಥಳೀಯ ಪೊಲೀಸರ ಜೊತೆ ಹಂಚಿಕೊಳ್ಳದೆ ಇರುವುದುರಾದ್ಧಾಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಮಹದೇವಪುರ ಮತ್ತಿತರ ಪ್ರದೇಶದಲ್ಲಿ ಕಳ್ಳತನ ಪ್ರಕರಣಗಳಲ್ಲಿ ಅಪ್ಪೇನ್‌ ಆರೋಪಿಯಾಗಿದ್ದ. ಆತನ ವಿವರ ಹಿಡಿದು ಪೊಲೀಸರು ಮಫ್ತಿಯಲ್ಲಿ ನಡುರಾತ್ರಿ ಲೂರ್ದ ನಗರಕ್ಕೆ ಬಂದಿದ್ದರು. ಸ್ಥಳೀಯ ಪೊಲೀಸರೇ ಈ ಸುತ್ತಮುತ್ತಲಿನ ಪ್ರದೇಶಕ್ಕೆ ಸಾಕಷ್ಟು ಸಿಬ್ಬಂದಿ ಇಲ್ಲದೆ ಒಳ ನುಗ್ಗುವ ಧೈರ್ಯ ಮಾಡುವುದಿಲ್ಲ. ಅದರಲ್ಲಿಯೂ ರಾತ್ರಿ ಹೊತ್ತು ಮಫ್ತಿಯಲ್ಲಿ ಹೋದ ಮಹದೇವಪುರ ಠಾಣೆಯ ಪೊಲೀಸರ ಕಾರ್ಯಶೈಲಿ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಸಬ್‌ ಇನ್‌ಸ್ಪೆಕ್ಟರ್ ನೀಡಿದ ದೂರಿನನ್ವಯ ಆರೋಪಿ ಲಾಂಗ್‌ನಿಂದ ಎರಡೂ ಕೈಗೆ ತೀವ್ರ ಸ್ವರೂಪದ ಹಲ್ಲೆ ನಡೆಸಿದ ಎಂದು ತಿಳಿಸಲಾಗಿದೆ. ಎರಡೂ ಕೈಗೆ ತೀವ್ರ ಸ್ವರೂಪದ ಗಾಯಗಳಾದ ಮೇಲೆ ಸೊಂಟದಲ್ಲಿದ್ದ ಸರ್ವಿಸ್ ರಿವಾಲ್ವಾರ್ ತೆಗೆದು, ಅದನ್ನು ಲೋಡ್ ಮಾಡಿ ಫೈರ್ ಮಾಡಲು ಹೇಗೆ ಸಾಧ್ಯ ಎಂದು ಪೊಲೀಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಅದರಲ್ಲಿಯೂ ಲೂರ್ದ್ ನಗರ ಸಣ್ಣ ಸಣ್ಣ ಓಣಿ ಇರುವ ಪ್ರದೇಶ, ಕತ್ತಲಲ್ಲಿ ಓಡಿ ಹೋದ ಆತನನ್ನು ಬೆನ್ನಟ್ಟಿ ಹೋಗಿ ಫೈರ್ ಮಾಡುವುದು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾತ್ರಿ ಇಷ್ಟೆಲ್ಲಾ ಘಟನೆಗಳು ನಡೆದರೂ, ಸ್ಥಳೀಯ ಪೊಲೀಸರು ಸ್ಥಳಕ್ಕೆ ಒಂಬತ್ತು ಗಂಟೆ ನಂತರ ಆಗಮಿಸಿದರು. ನಂತರ ಹಿರಿಯ ಅಧಿಕಾರಿಗಳು ಸ್ಥಳ ತನಿಖೆ ನಡೆಸಿದರು. ಘಟನೆ ನಡೆದ ತಕ್ಷಣವಾದರೂ ಸ್ಥಳೀಯ ಪೊಲೀಸರಿಗೆ ಯಾಕೆ ಮಾಹಿತಿ ನೀಡಲಿಲ್ಲ ಎಂಬ ಪ್ರಶ್ನೆಯೂ ಉದ್ಘವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.