ADVERTISEMENT

ಅಭಿವೃದ್ಧಿ ವಿಚಾರದಲ್ಲಿ ಹಸ್ತಕ್ಷೇಪ: ಆರೋಪ

ಮಾಜಿ ಶಾಸಕ ಸಂಪಂಗಿ ವಿರುದ್ಧ ನಗರಸಭೆ ಅಧ್ಯಕ್ಷ ಆರೋಪ

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:13 IST
Last Updated 13 ಮೇ 2022, 2:13 IST

ಕೆಜಿಎಫ್: ನಗರಸಭೆಯಿಂದ ನಡೆಯುವ ಅಭಿವೃದ್ಧಿ ಕೆಲಸಗಳಲ್ಲಿ ಮಾಜಿ ಶಾಸಕ ವೈ. ಸಂಪಂಗಿ ಅನಾವಶ್ಯಕವಾಗಿ ತಲೆಹಾಕಿ ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ
ಆರೋಪಿಸಿದರು.

ನಗರದ 9ನೇ ವಾರ್ಡ್‌ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಶಾಸಕಿ ಎಂ. ರೂಪಕಲಾ ಅವರ ಕೋರಿಕೆ ಮೇರೆಗೆ ಸರ್ಕಾರ ₹ 1.85 ಕೋಟಿ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆಗೆ ಅನುದಾನ ನೀಡಿದೆ. ನಗರಸಭೆ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯಬೇಕಿತ್ತು. ಆದರೆ, ಮಾಜಿ ಶಾಸಕರು ಸಚಿವರ ಪ್ರಭಾವ ಬಳಸಿ ಕಾಮಗಾರಿ ಮಾಡಿಸಲು ಹೊರಟಿದ್ದರು ಎಂದು ಟೀಕಿಸಿದರು.

ADVERTISEMENT

ಕ್ಷೇತ್ರದಲ್ಲಿ ಸರ್ಕಾರದ ಯಾವುದೇ ಹಣ ಮಂಜೂರಾದರೂ ಶಾಸಕರ ಸೂಚನೆ ಮತ್ತು ಸಲಹೆಯಂತೆ ಕಾಮಗಾರಿ ನಡೆಸಬೇಕು ಎಂಬ ಷರತ್ತುಗಳನ್ನು ಸರ್ಕಾರ ವಿಧಿಸುತ್ತದೆ. ಮಾಜಿ ಶಾಸಕರು ತಮ್ಮ ಕಾರ್ಯಕರ್ತರನ್ನು ಬಳಸಿಕೊಂಡು ವಾರ್ಡ್‌ಗಳಲ್ಲಿ ತಿರುಗಾಟ ನಡೆಸಿ, ನಾನು ಕಾಮಗಾರಿ ಮಾಡಿಸಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು
ದೂರಿದರು.

ಜನರು ಸಂಪಂಗಿ ಅವರನ್ನು ತಿರಸ್ಕರಿಸಿದ್ದಾರೆ. ಕೆಲಸ ಮಾಡಲು ವಾರ್ಡ್‌ಗಳಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ. ಅವರು ಈ ಸತ್ಯ ಅರಿಯಬೇಕು ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ದೇವಿ, ನಗರಸಭೆ ಸದಸ್ಯರಾದ ಶಾಂತಿ, ಕರುಣಾಕರನ್, ರಮೇಶ್
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.