ADVERTISEMENT

ಬಡ್ಡಿಮಾಫಿಯಾದಿಂದ ಮುಕ್ತಿಗೆ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:38 IST
Last Updated 8 ಅಕ್ಟೋಬರ್ 2019, 13:38 IST
ಕೋಲಾರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಮಂಗಳವಾರ ಆಯುಧಪೂಜೆ ನಡೆಯಿತು.
ಕೋಲಾರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಮಂಗಳವಾರ ಆಯುಧಪೂಜೆ ನಡೆಯಿತು.   

ಕೋಲಾರ: ‘ಬಡವರು, ಮಹಿಳೆಯರು, ಬಡತನರೇಖೆಗಿಂತ ಕೆಳಗಿನ ಅಸಂಖ್ಯಾತ ಜನರನ್ನು ಬಡ್ಡಿಮಾಫಿಯಾದ ಶೋಷಣೆಯಿಂದ ಮುಕ್ತಿಗೊಳಿಸಲು ಸಂಕಲ್ಪ ಮಾಡಿದ್ದು, ಅಧಿಕಾರಿಗಳು ಇದಕ್ಕೆ ಸಹಕಾರ ನೀಡಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸೂಚಿಸಿದರು.

ನಗರದ ಡಿಸಿಸಿ ಬ್ಯಾಂಕಿನ ಆವರಣದಲ್ಲಿ ಮಂಗಳವಾರ ನಡೆದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜನರ ಮನಸ್ಸಿನಿಂದ ದೂರವಾಗಿದ್ದ ಡಿಸಿಸಿ ಬ್ಯಾಂಕ್ ಇಂದು ಎರಡೂ ಜಿಲ್ಲೆಗಳ ಲಕ್ಷಾಂತರ ತಾಯಂದಿರು, ರೈತರಿಗೆ ಆರ್ಥಿಕ ನೆರವು ನೀಡಿ ಸ್ವಾವಲಂಬಿ ಬದುಕಿಗೆ ದಾರಿ ತೋರಿಸಿದೆ, ಇಂತಹ ಬ್ಯಾಂಕಿನ ಕುರಿತು ವೈಯುಕ್ತಿಕ ದ್ವೇಷ, ರಾಜಕೀಯವಾಗಿ ಟೀಕಿಸಿದರೆ ಶೋಭೆ ತರುವುದಿಲ್ಲ’ ಎಂದು ತಿಳಿಸಿದರು.

‘ಬ್ಯಾಂಕ್ ದಿವಾಳಿಯಿಂದಾಗಿ ಬಡ್ಡಿಮನ್ನಾ, ಕಡಿಮೆ ಬಡ್ಡಿ ಸಾಲ, ಸಾಲಮನ್ನಾದಂತಹ ಸೌಕರ್ಯಗಳಿಂದ ಜಿಲ್ಲೆಯ ಜನತೆ ವಂಚಿತರಾಗಿದ್ದ ಸಂದರ್ಭದಲ್ಲಿ ಬಂದ ನಮ್ಮ ಆಡಳಿತ ಮಂಡಳಿ ಪರಿಶ್ರಮದಿಂದ ಸಾಲ ಮನ್ನಾದಿಂದಾಗಿ ₹ 332 ಕೋಟಿ ಪ್ರಯೋಜನ ಅವಿಭಜಿತ ಜಿಲ್ಲೆಯ ರೈತರಿಗೆ ಸಿಕ್ಕಿದೆ’ ಎಂದರು.

ADVERTISEMENT

‘₹ 44 ಕೋಟಿ ನಷ್ಟದಲ್ಲಿದ್ದ ಬ್ಯಾಂಕ್ ಕಥೆ ಮುಗಿಯಿತು, ಬೆಂಗಳೂರು ಜಿಲ್ಲಾ ಡಿಸಿಸಿ ಬ್ಯಾಂಕ್ ಜತೆ ವಿಲೀನವಂತೆ ಎಂಬ ಕೂಗು ಎಲ್ಲೆಡೆ ಮಾರ್ಧನಿಸುತ್ತಿದ್ದ ಸಂದರ್ಭದಲ್ಲಿ ನಮ್ಮ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡು ಮತ್ತೆ ಡಿಸಿಸಿ ಬ್ಯಾಂಕ್ ಎಂಬುದು ಬದುಕಿದೆ’ ಎಂದು ಹೇಳಿದರು.

‘ಬ್ಯಾಂಕ್ ವಿರುದ್ದ ರಾಜಕೀಯ ಕಾರಣಗಳಿಗಾಗಿ ಟೀಕೆ ಮಾಡುವವರಿಗೆ ಕೋಲಾರಮ್ಮನೇ ಒಳ್ಳೆಯ ಬುದ್ದಿ ನೀಡಲಿ, ಈ ನಡುವೆ ನಾವು ಬಡವರು, ತಾಯಂದಿರ ಸ್ವಾವಲಂಬಿ ಬದುಕಿಗೆ ನೆರವಾಗುವ ನಮ್ಮ ಕಾಯಕ ಮುಂದುವರೆಸಿಕೊಂಡು ಹೋಗುತ್ತೇವೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಕುಮಾರ್, ಸೋಮಣ್ಣ, ನಾರಾಯಣರೆಡ್ಡಿ, ಕೆ.ವಿ.ದಯಾನಂದ್, ಸೊಣ್ಣೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ, ಯೂನಿಯನ್ ನಿರ್ದೇಶಕ ರುದ್ರಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.