ADVERTISEMENT

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿ

ಕಾರ್ಯಕ್ರಮದಲ್ಲಿ ಖಾಸಗಿ ಕಂಪನಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಮನವಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:58 IST
Last Updated 1 ಆಗಸ್ಟ್ 2019, 14:58 IST
ಸ್ಯಾಮ್‌ಸಂಗ್‌ ಕಂಪನಿಯು ಕೋಲಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಿಸಿದರು.
ಸ್ಯಾಮ್‌ಸಂಗ್‌ ಕಂಪನಿಯು ಕೋಲಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಿಸಿದರು.   

ಕೋಲಾರ: ‘ದೇಶದ ಕಟ್ಟಕಡೆಯ ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಮೂಲಸೌಕರ್ಯ ಕಲ್ಪಿಸಲು ಖಾಸಗಿ ಕಂಪನಿಗಳ ನೆರವು ಅಗತ್ಯ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.

ಸ್ಯಾಮ್‌ಸಂಗ್‌ ಕಂಪನಿಯು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಲಭ್ಯವಿರುವ ಸೀಮಿತ ಸಂಪನ್ಮೂಲದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರಕ್ಕೆ ನಿಜಕ್ಕೂ ಕಷ್ಟ’ ಎಂದು ತಿಳಿಸಿದರು.

‘ಖಾಸಗಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರದ ಜತೆ ಕೈಜೋಡಿಸಬೇಕು. ಖಾಸಗಿ ಸಂಸ್ಥೆಗಳು ನೀಡುವ ಸೌಲಭ್ಯವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸುಶಿಕ್ಷಿತರಾಗಿ ಭವಿಷ್ಯದಲ್ಲಿ ಉದ್ಯೋಗದಾತರಾಗುವ ದಿಕ್ಕಿನಲ್ಲಿ ಸಾಗಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಸ್ಯಾಮ್‌ಸಂಗ್‌ ಕಂಪನಿಯು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡುತ್ತಿದೆ. ಹಿಂದಿನ ವರ್ಷ ಕೆಂಬೋಡಿ ಶಾಲೆಗೆ ಸುಸಜ್ಜಿತ ಕೊಠಡಿ ನಿರ್ಮಿಸಿಕೊಟ್ಟಿತ್ತು. ಕಂಪನಿಯ ಈ ಕಾರ್ಯ ಇತರೆ ಖಾಸಗಿ ಕಂಪನಿಗಳಿಗೂ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಂಪನಿಯು ಜಿಲ್ಲೆಯಲ್ಲಿ 5 ವರ್ಷಗಳಿಂದ ಸರ್ಕಾರಿ ಶಾಲೆಗಳಿಗೆ ಅನೇಕ ಸೌಕರ್ಯ ಕಲ್ಪಿಸಿದೆ. ಈ ವರ್ಷ 85 ಸಾವಿರ ಮಕ್ಕಳಿಗೆ ನೋಟ್‌ ಪುಸ್ತಕ ವಿತರಿಸಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ. ವಿದ್ಯೆ ಕದಿಯಲಾಗದ ಸಂಪತ್ತು. ಹೀಗಾಗಿ ಉತ್ತಮ ಶಿಕ್ಷಣ ಪಡೆದು ಮೌಲ್ಯಾಧಾರಿತ ಜೀವನ ನಡೆಸಬೇಕು’ ಎಂದು ಸ್ಯಾಮ್‌ಸಂಗ್‌ ಕಂಪನಿ ನಿರ್ದೇಶಕ ಹೀ ಜುನ್‌ ಕಾಂಗ್‌ ಸಲಹೆ ನೀಡಿದರು.

ಕಲಿಕೆಯಲ್ಲಿ ಮುಂದಿರಿ: ‘ಈ ಹಿಂದೆ ಓದಲು ಸೌಲಭ್ಯಗಳಿರಲಿಲ್ಲ. ಈಗ ಸರ್ಕಾರವೇ ಪಠ್ಯಪುಸ್ತಕ, ಶೂ, ಸಮವಸ್ತ್ರ, ಸೈಕಲ್ ಸೇರಿದಂತೆ ಎಲ್ಲಾ ಸೌಕರ್ಯ ಒದಗಿಸುತ್ತಿದೆ. ಶಾಲೆಗಳಲ್ಲಿ ಅಗತ್ಯ ಶಿಕ್ಷಕರಿದ್ದಾರೆ. ಆದರೆ, ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಸೌಲಭ್ಯಗಳಲ್ಲಿ ಹಿಂದುಳಿದರೂ ಪರವಾಗಿಲ್ಲ, ಕಲಿಕೆಯಲ್ಲಿ ಮುಂದಿರಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಹೇಳಿದರು.

‘ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಿ ಕಟ್ಟಡ ನಿರ್ಮಿಸಿ ಕೊಟ್ಟಿದ್ದರೂ ಮಕ್ಕಳ ದಾಖಲಾತಿಯೇ ಇಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡದಿದ್ದರೆ ಭವಿಷ್ಯದಲ್ಲಿ ನಿರುದ್ಯೋಗಿಗಳಾಗುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಲಭ್ಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈ ವರ್ಷ ಸರ್ಕಾರಿ ಶಾಲೆಗಳಲ್ಲಿನ ಎಲ್‌ಕೆಜಿ ಹಾಗೂ ಯುಕೆಜಿಗೆ 2 ಸಾವಿರ ಮಕ್ಕಳು ದಾಖಲಾಗಿದ್ದಾರೆ. ಆದರೆ, ಖಾಸಗಿ ಶಾಲೆಗಳಲ್ಲಿ 5.72 ಲಕ್ಷ ಮಕ್ಕಳು ಪ್ರವೇಶ ಪಡೆದಿದ್ದಾರೆ. ಈ ಮಕ್ಕಳು ಮತ್ತೆ ಸರ್ಕಾರಿ ಶಾಲೆಗೆ ಬರುವ ಸಾಧ್ಯತೆಯಿಲ್ಲ. ಸರ್ಕಾರಿ ಶಾಲಾ ಶಿಕ್ಷಕರು ಭ್ರಮೆಯಿಂದ ಹೊರಬಂದು ಸಾರ್ವಜನಿಕರಲ್ಲಿ ಸರ್ಕಾರಿ ಶಾಲೆಗಳ ಮೇಲೆ ನಂಬಿಕೆ ಮೂಡಿಸಬೇಕು’ ಎಂದು ಸೂಚಿಸಿದರು.

ಮನವಿ ಸಲ್ಲಿಕೆ: ‘ಕಾಲೇಜಿನಲ್ಲಿ 900ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಕಾಲೇಜಿಗೆ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ನೀರಿನ ಸೌಲಭ್ಯ ಕಲ್ಪಿಸಬೇಕು. ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕು. ಸಭಾಂಗಣದ ವ್ಯವಸ್ಥೆ ಮಾಡಬೇಕು’ ಎಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಪ್ಪ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕಾಲೇಜು ಉಪಪ್ರಾಂಶುಪಾಲ ಶ್ರೀರಾಮರೆಡ್ಡಿ, ಶಿಕ್ಷಕರ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ವೀರಣ್ಣಗೌಡ, ಖಜಾಂಚಿ ಚಂದ್ರಪ್ಪ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಜಿ.ಶ್ರೀನಿವಾಸ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.