ADVERTISEMENT

ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದ ಸಚಿವ ಕೆ.ಎಸ್. ಈಶ್ವರಪ್ಪ

ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಧಾನಿಗೆ ದೂರು ನೀಡಿದ್ದವರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 11:47 IST
Last Updated 27 ಏಪ್ರಿಲ್ 2020, 11:47 IST
ಸಚಿವ ಕೆ.ಎಸ್. ಈಶ್ವರಪ್ಪ
ಸಚಿವ ಕೆ.ಎಸ್. ಈಶ್ವರಪ್ಪ   

ಕೋಲಾರ: ‘ರಾಜ್ಯವನ್ನು ಪ್ರತಿನಿಧಿಸುವ ಕೆಲ ಕೇಂದ್ರ ಸಚಿವರು ಕೋವಿಡ್‌–19 ಪರಿಸ್ಥಿತಿ ನಿಭಾಯಿಸುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿಗೆ ದೂರು ಕೊಟ್ಟಿದ್ದಾರೆ. ಇದು ತಪ್ಪು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಾಮಾನ್ಯ ಜ್ಞಾನವಿಲ್ಲದ ಕೆಲವರು ರಾಜ್ಯ ಸರ್ಕಾರದ ವಿರುದ್ಧ ಹಾಗೂ ನರೇಗಾ ಕಾಮಗಾರಿ ಸಂಬಂಧ ಅನಗತ್ಯ ಟೀಕೆ ಮಾಡಿ ದೂರು ಕೊಟ್ಟಿದ್ದಾರೆ. ಅವರಿಗೆ ಧೈರ್ಯವಿದ್ದರೆ ನೇರವಾಗಿ ಪ್ರಧಾನಿಯನ್ನು ಭೇಟಿಯಾಗಿ ಮಾತನಾಡಲಿ’ ಎಂದು ಗುಡುಗಿದರು.

‘ರಾಜ್ಯ ಸರ್ಕಾರ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ಸೂಚನೆಯಂತೆ ನರೇಗಾ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನರೇಗಾ ಅಡಿ ₹ 1 ಸಾವಿರ ಕೋಟಿ ಬಿಡುಗಡೆಯಾಗಿದ್ದು, ಜನ ಉತ್ಸಾಹದಿಂದ ಕೆಲಸಕ್ಕೆ ಬರುತ್ತಿದ್ದಾರೆ. ಮೈ ಮೇಲೆ ಪ್ರಜ್ಞೆ ಇಲ್ಲದ ಯಾರೋ ಕೆಲವರು ಟೀಕೆ ಮಾಡಿದರೆಂದು ನರೇಗಾ ಕಾಮಗಾರಿಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ADVERTISEMENT

ಕಪಟ ನಾಟಕಧಾರಿ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮುಸ್ಲಿಮರನ್ನು ಬಿಟ್ಟರೆ ರಾಜಕೀಯ ಜೀವನವಿಲ್ಲ. ಮುಸ್ಲಿಮರನ್ನು ಸಂತೃಪ್ತಗೊಳಿಸಿದರೆ ಒಳ್ಳೆಯದಾಗುತ್ತದೆ ಎಂದು ಅವರು ಭಾವಿಸಿದ್ದಾರೆ. ಅವರೊಬ್ಬ ಕಪಟ ನಾಟಕಧಾರಿ. ತಾನು ಕೆಪಿಸಿಸಿ ಅಧ್ಯಕ್ಷ ಎಂಬುದನ್ನು ತೋರಿಸಿಕೊಳ್ಳಲು ನಾಟಕೀಯವಾಗಿ ಮಾತನಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿರುವ ಶಿವಕುಮಾರ್‌ ತಾನು ಸರ್ಕಾರದ ವಿರುದ್ಧ ಏನೋ ಮಾಡುತ್ತಿದ್ದೇನೆ ಎಂದು ತೋರಿಸಿಕೊಳ್ಳಲು ದೊಡ್ಡ ನಾಟಕ ಮಾಡುತ್ತಿದ್ದಾರೆ. ಹಿಂದಿನ ಎಲ್ಲಾ ನಾಟಕಗಳಲ್ಲೂ ಫೇಲ್‌ ಆಗಿರುವ ಅವರು ಈ ನಾಟಕದಲ್ಲೂ ಫೇಲ್ ಆಗುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಈಶ್ವರಪ್ಪ ಇಷ್ಟು ದಿನ ಎಲ್ಲಿ ಮಲಗಿದ್ದರು ಎಂದು ಕೇಳುವ ಶಿವಕುಮಾರ್‌ ಅವರು ಇಷ್ಟು ದಿನ ಎಲ್ಲಿ ಮಲಗಿದ್ದರು ಎಂಬುದು ಜನರಿಗೆ ಗೊತ್ತಿದೆ. ತಾನು ಅಲ್ಪಸಂಖ್ಯಾತರ ಪರವಾಗಿದ್ದೇನೆ ಎಂದು ಶಿವಕುಮಾರ್‌ ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರು ಕೋಮುವಾದಿ ಹೇಳಿಕೆ ನೀಡುತ್ತಿದ್ದಾರೆ ಎಂಬ ಅವರ ಆರೋಪದಲ್ಲಿ ಹುರುಳಿಲ್ಲ. ಬಿಜೆಪಿ ಎಂದಿಗೂ ಕೋಮು ಭಾವನೆ ಪ್ರಚೋದನೆಗೆ ಅವಕಾಶ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.