ADVERTISEMENT

ಜೈನ ಸಮುದಾಯದ ಮೌಲ್ಯ ದಾರಿದೀಪ

ಭಗವಾನ್‌ ಮಹಾವೀರ ಜಯಂತಿಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 14:08 IST
Last Updated 6 ಏಪ್ರಿಲ್ 2020, 14:08 IST
ಕೋಲಾರದಲ್ಲಿ ಸೋಮವಾರ ನಡೆದ ಭಗವಾನ್‌ ಮಹಾವೀರರ ಜಯಂತಿಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕೋಲಾರದಲ್ಲಿ ಸೋಮವಾರ ನಡೆದ ಭಗವಾನ್‌ ಮಹಾವೀರರ ಜಯಂತಿಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಕೋಲಾರ: ‘ಜೈನ ಸಮುದಾಯವು ಸಮಾಜದಲ್ಲಿ ಸಾಮರಸ್ಯದಿಂದ ಬದುಕುವುದನ್ನು ಕಲಿಸಿದೆ. ಅಹಿಂಸಾ ಮಾರ್ಗದಲ್ಲಿ ನಡೆಯಬೇಕೆನ್ನುವ ಸಮುದಾಯದ ಮೌಲ್ಯವು ಸಮಾಜಕ್ಕೆ ದಾರಿದೀಪ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.

ಇಲ್ಲಿ ಸೋಮವಾರ ನಡೆದ ಭಗವಾನ್‌ ಮಹಾವೀರ ಜಯಂತಿಯಲ್ಲಿ ಮಾತನಾಡಿ, ‘ಆದಿಕವಿ ಪಂಪನಿಂದ ಇಂದಿನವರೆಗೂ ಕನ್ನಡ ನಾಡು, ನುಡಿಗೆ ಜೈನ ಸಮುದಾಯ ಅಪಾರ ಕೊಡುಗೆ ನೀಡಿದೆ. ಜೈನ ಸಮುದಾಯದ ರಾಜರು ನಾಡಿನ ಕಲೆ, ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅನನ್ಯ’ ಎಂದು ಸ್ಮರಿಸಿದರು.

‘ಜೈನ ಧರ್ಮ ಎಂದಿಗೂ ಪರಕೀಯ ಧರ್ಮವಲ್ಲ. ಬದಲಿಗೆ ಈ ನಾಡಿಗೆ ಸೇರಿದ್ದು. ಜೈನ ಸಮುದಾಯವು ಕನ್ನಡ ನಾಡಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಜೈನ ತೀರ್ಥಂಕರರ ಮೂರ್ತಿಗಳು ಇರುವುದನ್ನು ಕಾಣಬಹುದು’ ಎಂದು ತಿಳಿಸಿದರು.

ADVERTISEMENT

‘ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರು ಸತ್ಯ, ಅಹಿಂಸೆಯ ಧರ್ಮ ಬೋಧಿಸಿದರು. ಅವರ ಅಹಿಂಸಾ ತತ್ವವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಅವರ ಆದರ್ಶಗಳನ್ನು ತಿಳಿಸುವುದರಿಂದ ಸಾಮಾಜಿಕ ಮೌಲ್ಯಗಳು ಗಟ್ಟಿಗೊಳ್ಳುತ್ತವೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ ಬೆಳೆಯುತ್ತದೆ’ ಎಂದು ಸಲಹೆ ನೀಡಿದರು.

‘ಗಂಗರು, ಕದಂಬರು, ರಾಷ್ಟ್ರಕೂಟರು ಹಾಗೂ ಶಾತವಾಹನರ ಕಾಲದಲ್ಲಿ ಜೈನ ಧರ್ಮವು ಕರ್ನಾಟಕದಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಹಿಂದೂ ಧರ್ಮದಲ್ಲಿದ್ದ ಕೆಲ ಕಠಿಣ ಹಾಗೂ ದುಂದು ವೆಚ್ಚದ ಆಚರಣೆಗಳು ಬಡವರಿಗೆ ಕಷ್ಟಕರವಾಗಿದ್ದವು. ಆಗ ಜೈನ ಧರ್ಮ ಉದಯವಾಯಿತು’ ಎಂದು ಮಾಹಿತಿ ನೀಡಿದರು

ಶಾಂತಿ ಪ್ರಿಯರು: ‘ಜೈನ ಸಮುದಾಯದವರು ಶಾಂತಿ ಪ್ರಿಯರಾಗಿದ್ದು, ಅಹಿಂಸಾ ಧರ್ಮ ಪಾಲಿಸಿಕೊಂಡು ಬಂದಿರುತ್ತಾರೆ. ಯಾವುದೇ ಹಿಂಸಾಕೃತ್ಯಗಳಲ್ಲಿ ಇವರು ಭಾಗಿಯಾಗುವುದಿಲ್ಲ. ಸಮಯದಾಯದವರು ಸಂಘಟಿತರಾದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

‘6ನೇ ಶತಮಾನದಲ್ಲಿ ಧಾರ್ಮಿಕ ವ್ಯವಸ್ಥೆ ದುಬಾರಿಯಾಗಿ ದೇವರು ಹಾಗೂ ಧರ್ಮವು ಕೆಲವೇ ವರ್ಗಗಳಿಗೆ ಸೀಮಿತವಾಗಿತ್ತು, ಆಗ ಶೋಷಣೆಯ ವಿರುದ್ಧವಾಗಿ ಜೈನ ಧರ್ಮ ಹುಟ್ಟಿಕೊಂಡಿತು. ದುರಾಸೆ, ಸ್ವಾರ್ಥ ಇಲ್ಲದವರು ಜಿನ ಆಗುತ್ತಾರೆ. ಮಹಾವೀರರು ಬಡವರ ಏಳಿಗೆಗಾಗಿ ಜಿನರಾಗಿ ಬದಲಾದರು’ ಎಂದು ವಿವರಿಸಿದರು.

ಭದ್ರ ಬುನಾದಿ: ‘ಆರ್ಥಿಕ ಚಟುವಟಿಕೆಗಳ ಮೂಲಕ ಜೈನ ಸಮುದಾಯವು ರಾಜ್ಯ ಮತ್ತು ರಾಷ್ಟ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ದೇಶದ ಭದ್ರ ಬುನಾದಿಗೆ ಅಡಿಪಾಯ ಹಾಕಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ. ಸಮುದಾಯದವರು ತುಳಿತಕ್ಕೆ ಒಳಗಾಗುತ್ತಿದ್ದು, ಇವರ ಅಭಿವೃದ್ಧಿಗೆ ಸಹಕಾರ ನೀಡುವ ಅಗತ್ಯವಿದೆ’ ಎಂದರು.

ಜಿಲ್ಲಾ ಜೈನ ಸಂಘದ ಪದಾಧಿಕಾರಿಗಳು ನಗರಸಭೆಯ ಪೌರ ಕಾರ್ಮಿಕರಿಗೆ ದಿನಸಿ ಪದಾರ್ಥ ವಿತರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ನಗರಸಭೆ ಆಯುಕ್ತ ಶ್ರೀಕಾಂತ್, ಜೈನ ಸಮುದಾಯದ ಮುಖಂಡರಾದ ಸಂದೀಪ್, ಧೀರಜ್ ರಾಜಕುಮಾರ್, ಜಯಂತಿಲಾಲ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.