ADVERTISEMENT

ಕೆಜಿಎಫ್‌ | ನಲ್ಲಿಗೆ ಮೀಟರ್‌ ಶುಲ್ಕ ವಸೂಲಿ ಇಲ್ಲ: ಎಂ.ರೂಪಕಲಾ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 6:02 IST
Last Updated 20 ಸೆಪ್ಟೆಂಬರ್ 2025, 6:02 IST
ಕೆಜಿಎಫ್‌ ತಾಲ್ಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಜಲ ಜೀವನ ಮಿಷನ್‌ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕಿ ಎಂ.ರೂಪಕಲಾ ಮಾತನಾಡಿದರು. ಇಒ ವೆಂಕಟೇಶಪ್ಪ, ಎಇಇಗಳಾದ ಪ್ರವೀಣ್‌ ಮತ್ತು ಸೂರ್ಯಪ್ರಕಾಶ್‌ ಇದ್ದರು.
ಕೆಜಿಎಫ್‌ ತಾಲ್ಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಜಲ ಜೀವನ ಮಿಷನ್‌ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕಿ ಎಂ.ರೂಪಕಲಾ ಮಾತನಾಡಿದರು. ಇಒ ವೆಂಕಟೇಶಪ್ಪ, ಎಇಇಗಳಾದ ಪ್ರವೀಣ್‌ ಮತ್ತು ಸೂರ್ಯಪ್ರಕಾಶ್‌ ಇದ್ದರು.   

ಕೆಜಿಎಫ್‌: ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ಸರಬರಾಜು ಮಾಡಲಾಗುವ ನೀರಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ . ಈ ನಿಟ್ಟಿನಲ್ಲಿ ಗ್ರಾಮೀಣ ಜನತೆ ಆತಂಕ ಪಡುವುದು ಬೇಡ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ನಗರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಲಜೀವನ್‌ ಮಿಷನ್‌ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಯೋಜನೆಯಲ್ಲಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಕೊಡಬೇಕೆಂಬ ಉದ್ದೇಶವಿದೆ. ನಲ್ಲಿ ಅಳವಡಿಸಿರುವ ಎಲ್ಲರಿಗೂ ಸಮನಾದ ರೀತಿಯಲ್ಲಿ ನೀರು ಸರಬರಾಜು ಆಗಬೇಕಾಗಿದೆ. ಆದ್ದರಿಂದ ನಲ್ಲಿ ಅಳವಡಿಸಿದ ಮನೆಗಳಿಗೆ ಮೀಟರ್‌ ಅಳವಡಿಸಲಾಗುವುದು. ಇದರಿಂದಾಗಿ ಅವರು ಪಡೆದ ನೀರಿನ ಪ್ರಮಾಣದ ದಾಖಲೆ ಲಭ್ಯವಾಗುತ್ತದೆ. ಮೀಟರ್‌ ಅಳವಡಿಸಿದರೆ, ಪ್ರತಿ ತಿಂಗಳು ಹಣ ಪಾವತಿ ಮಾಡಬೇಕಾಗುತ್ತದೆ ಎಂಬ ಭೀತಿ ಕೆಲವು ಗ್ರಾಮಸ್ಥರಿಗೆ ಇದೆ. ಯಾವುದೇ ರೀತಿಯ ಶುಲ್ಕ ವಸೂಲಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ಇನ್ನೂ ಕೆಲವು ಕಾಮಗಾರಿಗಳು ಕೈಬಿಟ್ಟು ಹೋಗಿದ್ದರೆ, ಅವುಗಳನ್ನು ಸೇರಿಸಬಹುದು. ಇನ್ನೂ ಇಪ್ಪತ್ತು ದಿನಗಳ ಕಾಲಾವಕಾಶ ಇದೆ. ಕೊಳವೆಬಾವಿ ಕೊರೆಯುವುದು, ಪೈಪ್‌ಲೈನ್‌ ಅಳವಡಿಸುವುದು, ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ಮಾಡಲು ಅವಕಾಶ ಇದೆ. ಕೂಡಲೇ ಗ್ರಾಮಗಳ ಮುಖಂಡರು ಮತ್ತು ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗಬೇಕೆಂದು ಶಾಸಕಿ ತಿಳಿಸಿದರು.

ADVERTISEMENT

ತಾಲ್ಲೂಕಿನ 196 ಹಳ್ಳಿಗಳಲ್ಲಿ ಮನೆ ಮನೆಗೆ ನೀರು ನೀಡಲಾಗುವುದು. ಈಗಾಗಲೇ 87 ಗ್ರಾಮಗಳಲ್ಲಿ ಯೋಜನೆ ಪೂರ್ಣಗೊಂಡಿದೆ. ಯೋಜನೆ ಪೂರ್ಣಗೊಂಡ ನಂತರ ಉಸ್ತುವಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲಾಗುವುದು. ನಾಲ್ಕನೇ ಹಂತದಲ್ಲಿ ಮತ್ತಷ್ಟು ಹಳ್ಳಿಗಳನ್ನು ಯೋಜನೆ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಿದರು.

ಯೋಜನೆಯನ್ನು ಸುಸೂತ್ರವಾಗಿ ನಡೆಯಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರವೀಣ್‌ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸೂರ್ಯಪ್ರಕಾಶ್‌, ಕಿರಿಯ ಎಂಜಿನಿಯರ್‌ ಶೈಲಜಾ ಮತ್ತು ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.