ಕೆಜಿಎಫ್: ಊರಿಗಾಂನಲ್ಲಿರುವ ಬಿಜಿಎಂಎಲ್‌ಗೆ ಸೇರಿದ ಜಮಖಾನ ಮೈದಾನವನ್ನು ₹20 ಲಕ್ಷ ವೆಚ್ಚದಲ್ಲಿ ಆಧುನೀಕರಿಸಿ ಸಾರ್ವಜನಿಕ ಸೇವೆಗೆ ಬಿಡಲಾಗುವುದು ಎಂದು ಸಂಸದ ಎಂ.ಮಲ್ಲೇಶಬಾಬು ಹೇಳಿದರು.
ಜಮಖಾನ ಮೈದಾನಕ್ಕೆ ಬುಧವಾರ ಬಿಜಿಎಂಎಲ್ ಅಧಿಕಾರಿಗಳ ಜತೆ ಭೇಟಿ ನೀಡಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಜಮಖಾನ ಮೈದಾನ ಬಳಕೆ ಮಾಡದೆ ಇರುವುದರಿಂದ ಮುಳ್ಳುಗಿಡಗಳು ಬೆಳೆದುನಿಂತಿವೆ. ಹಲವಾರು ರಾಷ್ಟ್ರೀಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಗಳು ಈ ಮೈದಾನದಲ್ಲಿ ನಡೆದಿದ್ದು, ಮಳೆ ಬಿದ್ದರೂ ನೀರು ನಿಲ್ಲದ ರೀತಿಯಲ್ಲಿ ಮೈದಾನ ನಿರ್ಮಿಸಲಾಗಿದೆ. ಬೆಮಲ್ ಸಂಸ್ಥೆಗೆ ತಾತ್ಕಾಲಿಕವಾಗಿ ಜಮಖಾನ ಮೈದಾನ ನೀಡಲಾಗಿತ್ತು. ಇದರಿಂದಾಗಿ ಈ ಮೈದಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಮತ್ತೆ ಸಾರ್ವಜನಿಕರ ಬೇಡಿಕೆಯಂತೆ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ, ಅಂದಾಜು ವೆಚ್ಚದ ಪಟ್ಟಿ ತಯಾರಿಸಿದ್ದಾರೆ ಎಂದು ಹೇಳಿದರು.
ಮೈದಾನದ ಅಭಿವೃದ್ಧಿಗಾಗಿ ಬಿಜಿಎಂಎಲ್ ಅಧಿಕಾರಿಗಳು ಯೋಜನೆ ಸಿದ್ಧಪಡಿಸಿದ್ದು, ಒಂದೆರಡು ದಿನಗಳಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. ಮೈದಾನ ಅಭಿವೃದ್ಧಿಗೆ ಅಗತ್ಯವಿರುವ ವೆಚ್ಚವನ್ನು ಕೇಂದ್ರ ಗಣಿ ಇಲಾಖೆ ಭರಿಸಲಿದೆ. ಅಗತ್ಯಬಿದ್ದಲ್ಲಿ, ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗುವುದು. ಎರಡು ತಿಂಗಳಿನಲ್ಲಿ ಕಾಮಗಾರಿ ಮುಗಿಯಲಿದೆ. ಮುಳ್ಳು ಮತ್ತು ಪೊದೆಗಳನ್ನು ತೆರವುಗೊಳಿಸುವಂತೆ ಬೆಮಲ್ ಸಂಸ್ಥೆಗೆ ಕೋರಲಾಗಿದೆ ಎಂದು ಸಂಸದ ಮಲ್ಲೇಶಬಾಬು ತಿಳಿಸಿದರು.
ನ್ಯಾಯಾಲಯದ ಆದೇಶದ ಮೇರೆಗೆ ಬಿಜಿಎಂಎಲ್ ಕಾರ್ಮಿಕರಿಗೆ ಮನೆಗಳ ಹಕ್ಕುಪತ್ರವನ್ನು ಕೇಂದ್ರ ಗಣಿ ಖಾತೆ ಸಚಿವರು ವಿತರಣೆ ಮಾಡುವ ನಿರೀಕ್ಷೆ ಇದೆ. ಬಿಹಾರ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಅವರು ಇಲ್ಲಿಗೆ ಬಂದು ಹಕ್ಕುಪತ್ರ ವಿತರಿಸಲಿದ್ದಾರೆ ಎಂದರು.
ಕಾರ್ಮಿಕರಿಗೆ ವಿತರಣೆ ಮಾಡಲಾದ ಮನೆಗಳಿಗೆ ಇ–ಖಾತೆ ಮಾಡಲು ಏಳು ದಾಖಲೆಗಳನ್ನು ಸಲ್ಲಿಸುವಂತೆ ನಗರಸಭೆ ಬೇಡಿಕೆ ಇಟ್ಟಿದ್ದು, ಅವುಗಳನ್ನು ಬಿಜಿಎಂಎಲ್ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ. ಎರಡು ತಿಂಗಳೊಳಗೆ ಎಲ್ಲ ಪ್ರಕ್ರಿಯೆ ಮುಗಿಯುವ ಸಂಭವ ಇದೆ ಎಂದು ಹೇಳಿದ್ದಾರೆ.
ಬಿಜಿಎಂಎಲ್ ಪ್ರಭಾವಿ ವ್ಯವಸ್ಥಾಪಕ ಜೊ ಜೋಸೆಫ್, ಮುಖ್ಯ ಭದ್ರತಾ ಅಧಿಕಾರಿ ಅಮಿತ್ ಮಿಶ್ರಾ, ಜೆಡಿಎಸ್‌ನ ಕೆ. ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ತಹಶೀಲ್ದಾರ್ ಭರತ್, ನಗರಸಭೆ ಆಯುಕ್ತ ಆಂಜನೇಯಲು ಹಾಜರಿದ್ದರು.
ಸೈನೈಡ್ ಗುಡ್ಡದಲ್ಲಿ ಸಿಗುವ ಚಿನ್ನದ ನಿಕ್ಷೇಪಗಳ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸುಳ್ಳು. ಬಿಜಿಎಂಎಲ್ ಸಂಸ್ಥೆಯಿಂದ ಈಗ ಸೈನೈಡ್ ಗುಡ್ಡದ ಮರು ಸರ್ವೆ ನಡೆಸಲಾಗುತ್ತದೆ. ಯಾವ ಯಾವ ನಿಕ್ಷೇಪಗಳು ಸಿಗುತ್ತವೆ ಎಂಬ ಬಗ್ಗೆ ಕೂಡ ತಿಳಿಯಬೇಕಿದೆ. ಚಿನ್ನದ ಲಭ್ಯತೆ ಕುರಿತು ವರದಿ ಬಂದ ಮೇಲೆ ಟೆಂಡರ್ ಕರೆಯಲಾಗುವುದು. ಹಾಲಿ ಇರುವ ಚಿನ್ನದ ಗಣಿಗಳಲ್ಲಿ ಚಿನ್ನದ ನಿಕ್ಷೇಪಗಳು ಕಂಡು ಬಂದಿಲ್ಲ. ಆದ್ದರಿಂದ ಪುನಃ ಚಿನ್ನದ ಗಣಿಗಾರಿಕೆ ಮತ್ತೆ ಆರಂಭಿಸುವ ಸಾಧ್ಯತೆ ಕಡಿಮೆ ಎಂದು ಸಂಸದರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.