
ಟೇಕಲ್ (ಮಾಲೂರು): ಹೋಬಳಿಯ ಓಬಟ್ಟಿ/ಜಂಗಾಲಹಳ್ಳಿ ಗ್ರಾಮದ ಸರ್ವೆ ನಂಬರ್ 35 ಹಾಗೂ 11/7ರಲ್ಲಿ ಕ್ರಷರ್ ಘಟಕ ಸ್ಥಾಪನೆಗೆ ನೀಡಿದ್ದ ಅನುಮತಿ ಪತ್ರವನ್ನು ಹಿಂಪಡೆಯುತ್ತಿರುವುದಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು ಹೇಳಿದ್ದಾರೆ. ಈ ಸಂಬಂಧ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಈ ಮೊದಲು ಮಾಲೂರು ತಹಶೀಲ್ದಾರ್ ವರದಿಯಂತೆ ಕ್ರಷರ್ ಘಟಕ ಸ್ಥಾಪನೆಗೆ ಸುರಕ್ಷಿತ ವಲಯ ಪಾಲನಾ ಪ್ರಮಾಣಪತ್ರ ನೀಡಿ ಕಲ್ಲುಗುಟ್ಟೆ ತೆರವುಗೊಳಿಸಿ ಸಮತಟ್ಟು ಮಾಡಿಕೊಳ್ಳಲು ಗಣಿ ಇಲಾಖೆಯಿಂದ ಅನುಮತಿ ನೀಡಲಾಗಿತ್ತು.
ಈ ಗ್ರಾಮಗಳಿಗೆ ತಾಕಿಕೊಂಡಿರುವ ಗುಡ್ಡದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುವ ಗಣಿ ಇಲಾಖೆ ವಿರುದ್ಧ ಶುಕ್ರವಾರವಷ್ಟೇ ಕರಡುಗುರ್ಕಿ, ಹುಲಿಗುಟ್ಟೆ, ಓಬಟ್ಟಿ, ಮಾದಾಪುರ, ಊರುಗುರ್ಕಿ ಹಾಗೂ ಜಂಗಾಲಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಪರವಾನಗಿಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದ್ದರು. ರಾಜ್ಯ ವಾಲ್ಮೀಕಿ ಅಂಬೇಡ್ಕರ್ ಪ್ರಜಾ ಹೋರಾಟ ಸಮಿತಿ ಮನವಿ ಪತ್ರ ಸಲ್ಲಿಸಿತ್ತು. ಅದರಂತೆ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅನುಮತಿ ವಾಪಸ್ ಪಡೆಯಲು ಶಿಫಾರಸು ಮಾಡಿದ್ದರು.
ನೂರು ಮೀಟರ್ ಅಂತರದಲ್ಲಿ ಗ್ರಾಮಗಳು, ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರಾಥಮಿಕ ಶಾಲೆ ಇವೆ. ಗೋಮಾಳ ಜಾಗವಿದ್ದು ನೂರಾರು ಜಾನುವಾರುಗಳಿಗೆ ಮೇವಿನ ತಾಣವಾಗಿದೆ. ಕಲ್ಲು ಗಣಿಗಾರಿಕೆ ನಡೆಸಿದರೆ ಪರಿಸರ ನಾಶವಾಗವುದರ ಜೊತೆ ಗ್ರಾಮಸ್ಥರ ನೆಮ್ಮದಿ ಹಾಳಾಗುತ್ತದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಗ್ರಾಮಸ್ಥರು ಹೇಳಿದ್ದರು.
ನೂರಾರು ಎಕರೆಯಲ್ಲಿ ಬೆಟ್ಟ ಗುಡ್ಡಗಳು ಇದ್ದು ನವಿಲು, ಚಿರತೆ, ಪಕ್ಷಿ, ಕರಡಿಗಳು ಆಶ್ರಯ ಪಡೆದಿವೆ. ಕಲ್ಲುಗಣಿಗಾರಿಕೆ ನಡೆಸಿದರೆ ಅವುಗಳ ಪ್ರಾಣಕ್ಕೂ ಕುತ್ತು ಬರುತ್ತದೆ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.