ADVERTISEMENT

ಮೊಬೈಲ್‌ ಸಖ್ಯ, ಮನುಷ್ಯ ಸಹವಾಸದಿಂದ ದೂರ: ಜಯಂತ ಕಾಯ್ಕಿಣಿ

ಬೆಂಗಳೂರು ಉತ್ತರ ವಿ.ವಿಯಿಂದ ‘ಉತ್ತರೋತ್ತರ ಪ್ರಶಸ್ತಿ’ ಪ್ರದಾನ- ಜಯಂತ ಕಾಯ್ಕಿಣಿ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 7:37 IST
Last Updated 21 ಸೆಪ್ಟೆಂಬರ್ 2025, 7:37 IST
<div class="paragraphs"><p>ಕೋಲಾರ ತಾಲ್ಲೂಕಿನ ಮಂಗಸಂದ್ರದ ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಆದರ್ಶ ರೈತ ದಂಪತಿ ಕೃಷ್ಣೇಗೌಡ– ಮಂಜುಳಮ್ಮ, ಕವಿ ಬಿ.ಆರ್.ಲಕ್ಷ್ಮಣರಾವ್, ಹಿಂದೂಸ್ತಾನಿ ಗಾಯಕ ಉಸ್ತಾದ್‌ ಫಯಾಜ್‌ ಖಾನ್ ಹಾಗೂ ತೊಗಲು ಗೊಂಬೆ ಕಲಾವಿದೆ ಸುಮಲತಾ ಅವರಿಗೆ  ‘ಉತ್ತರೋತ್ತರ ಪ್ರಶಸ್ತಿ’ ಪ್ರದಾನ</p></div>

ಕೋಲಾರ ತಾಲ್ಲೂಕಿನ ಮಂಗಸಂದ್ರದ ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಆದರ್ಶ ರೈತ ದಂಪತಿ ಕೃಷ್ಣೇಗೌಡ– ಮಂಜುಳಮ್ಮ, ಕವಿ ಬಿ.ಆರ್.ಲಕ್ಷ್ಮಣರಾವ್, ಹಿಂದೂಸ್ತಾನಿ ಗಾಯಕ ಉಸ್ತಾದ್‌ ಫಯಾಜ್‌ ಖಾನ್ ಹಾಗೂ ತೊಗಲು ಗೊಂಬೆ ಕಲಾವಿದೆ ಸುಮಲತಾ ಅವರಿಗೆ ‘ಉತ್ತರೋತ್ತರ ಪ್ರಶಸ್ತಿ’ ಪ್ರದಾನ

   

ಕೋಲಾರ: ಮೊಬೈಲ್‌ ಸಖ್ಯ ವಿಪರೀತವಾಗಿ ಮನುಷ್ಯನ ಸಹಜ ಸಹವಾಸ ಸುಖ, ಒಡನಾಟ ವಂಚಿತರಾದ ಕೆಟ್ಟಕಾಲದಲ್ಲಿದ್ದೇವೆ. ಯುವಕರು ಮೊಬೈಲ್‌ ಸಖ್ಯದಿಂದ ಹೊರಬಂದು ಸಮತೆ–ಮಮತೆಯ ಶಿಕ್ಷಣವೆಂಬ ದೊಡ್ಡ ಏಣಿ ಹತ್ತಿ ಬದುಕು ರೂಪಿಸಿಕೊಳ್ಳಬೇಕು ಎಂದು ಸಾಹಿತಿ ಜಯಂತ ಕಾಯ್ಕಿಣಿ ಸಲಹೆ ನೀಡಿದರು.

ತಾಲ್ಲೂಕಿನ ಮಂಗಸಂದ್ರದ ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ನಡೆದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಹಾಗೂ ‘ಉತ್ತರೋತ್ತರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಸಮಾಜದ ವಿಕಾಸ ಹಾವು–ಏಣಿ ಆಟವಿದ್ದಂತೆ. ಸುಮಾರು ವರ್ಷಗಳಿಂದ ನಾವು ಇದರಲ್ಲಿ ಆಟವಾಡುತ್ತ ಗೆಲ್ಲುತ್ತಾ, ಸೋಲುತ್ತಾ ಬರುತ್ತಿದ್ದೇವೆ. ಅಸಮಾನತೆಯ ಹಾವು ನುಂಗಿದಾಗ ವಚನಕಾರರು ಏಣಿಯಂತೆ ಬಂದರು, ನಂತರ ಸೋಲುಗಳು ಎದುರಾದಾಗ ದಾಸ ಸಾಹಿತ್ಯ, ಶಿಕ್ಷಣವೆಂಬ ಏಣಿಗಳನ್ನು ಹತ್ತುತ್ತಾ ಸಾಗಿ ಬಂದಿದ್ದೇವೆ’ ಎಂದರು.

‘ಇದೀಗ ಮಮತೆ–ಸಮತೆ ಬಿಟ್ಟು ಏಣಿ ಹತ್ತಲು ಹೋದರೆ ಮೇಲಿರುವ ದೊಡ್ಡ ಹಾವು ನಮ್ಮನ್ನು ನುಂಗಿದರೆ ಮತ್ತೆ ಶಿಲಾಯುಗಕ್ಕೆ ಬಂದು ತಲುಪುತ್ತೇವೆ. ಆದ್ದರಿಂದ ಎಚ್ಚರಿಕೆಯಿಂದ ಸಮತೆ– ಮಮತೆಯೊಂದಿಗೆ ಮನುಷ್ಯ ಸಹವಾಸದೊಂದಿಗೆ ಬದುಕು ಸಾಗಿಸಬೇಕು’ ಎಂದು ಅವರು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.

ವಿಜ್ಞಾನ-ಸಾಹಿತ್ಯ ಒಂದಕ್ಕೊಂದು ಸಂಬಂಧವಿದೆ. ಕಲೆ, ಸಾಹಿತ್ಯ ಬೇರೆಯಲ್ಲ; ವಿಜ್ಞಾನ ಬೇರೆಯಲ್ಲ, ವೈದ್ಯಕೀಯ ವಿಜ್ಞಾನ, ಸಾಹಿತ್ಯ ಎರಡೂ ಬೇರೆಯಲ್ಲ. ಎರಡರ ಉದ್ದೇಶವೂ ಮನುಷ್ಯನ ಅಭಿವೃದ್ಧಿಯೇ ಆಗಿದೆ. ಕುವೆಂಪು, ಬೇಂದ್ರೆ ಸೇರಿದಂತೆ ಮಹಾನ್ ಕವಿಗಳು ವಿಜ್ಞಾನದ ಆಸಕ್ತಿ ಹೊಂದಿದ್ದವರೇ ಎಂದು ಉದಾಹರಿಸಿದರು.

ಏಕ ವಿಷಯದ ಅಧ್ಯಯನದಿಂದ ಮೂಲತತ್ವ ಮರೆತು ಬಿಟ್ಟಿದ್ದೇವೆ, ಪುಸ್ತಕಗಳನ್ನು ಓದಿ. ಅದರಿಂದ ದೊಡ್ಡ ಜೀವನಸತ್ವ ತಮ್ಮನ್ನು ಕಾಪಾಡುತ್ತದೆ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ‘ವಿಶ್ವವಿದ್ಯಾಲಯದಿಂದ 3 ವರ್ಷಗಳಿಂದ ಉತ್ತರೋತ್ತರ ಪ್ರಶಸ್ತಿ ನೀಡಲಾಗುತ್ತಿದೆ. ಈ ಭಾಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನ್ಯಾಯ ಒದಗಿಸಿದಂತಾಗಿದೆ’ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಬಿ.ಇಡಿ ಕಾಲೇಜಿನ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಅವರು ಆಚರಿಸಿದ ಸಂಸ್ಥಾಪನ ದಿನಾಚರಣೆಯಂತೆ ನಾವೂ ಆಚರಿಸಬೇಕೆಂದು ಯೋಚಿಸಿ ನಿರ್ಧಾರ ಕೈಗೊಳ್ಳಲಾಯಿತು ಎಂದರು.

ಕವಿ ಬಿ.ಆರ್.ಲಕ್ಷ್ಮಣರಾವ್, ಹಿಂದೂಸ್ತಾನಿ ಗಾಯಕ ಉಸ್ತಾದ್‍ ಫಯಾಜ್ ಖಾನ್, ತೊಗಲು ಗೊಂಬೆ ಕಲಾವಿದೆ ಸುಮಲತಾ, ಆದರ್ಶ ರೈತ ದಂಪತಿ ಕೃಷ್ಣೇಗೌಡ– ಮಂಜುಳಮ್ಮ ಅವರಿಗೆ ‘ಉತ್ತರೋತ್ತರ ಪ್ರಶಸ್ತಿ’ಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಪ್ರಶಸ್ತಿಯು ₹10 ಸಾವಿರ ನಗದು, ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕುಲಸಚಿವರಾದ ಸಿ.ಎನ್‌.ಶ್ರೀಧರ್ (ಆಡಳಿತ), ಪ್ರೊ.ಲೋಕನಾಥ್ (ಮೌಲ್ಯಮಾಪನ), ಹಣಕಾಸು ಅಧಿಕಾರಿ ವಸಂತಕುಮಾರ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಕುಮುದಾ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಭಾಸ್, ಬಸವರಾಜ್ ಹಳ್ಳೂರು, ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ನಮ್ಮಲ್ಲಿ ಆ ಮತ ಈ ಮತವೆಂಬ ಭೇದಭಾವ ಬೇಕಿಲ್ಲ. ಗಿಡ ಹುಟ್ಟಿ ಬೆಳಕಿನಡೆ ಎತ್ತರಕ್ಕೆ ಸಾಗುತ್ತದೆ. ಹಾಗೆಯೇ ಶಿಕ್ಷಣವೂ ಬೆಳಕಿದ್ದಂತೆ. ಅದು ತಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ
ಜಯಂತ ಕಾಯ್ಕಿಣಿ ಸಾಹಿತಿ
ಉತ್ತರ ವಿಶ್ವವಿದ್ಯಾಲಯದಿಂದ ನೀಡುತ್ತಿರುವ ‘ಉತ್ತರೋತ್ತರ ಪ್ರಶಸ್ತಿ’ ರಾಜ್ಯಮಟ್ಟದ ಘನತೆಯೊಂದಿಗೆ ಕರ್ನಾಟಕದ ಅತಿ ದೊಡ್ಡ ಪ್ರತಿಷ್ಠಿತ ಪ್ರಶಸ್ತಿಯಾಗಲಿ ಎಂಬುದು ನಮ್ಮ ಮಹದಾಸೆಯಾಗಿದೆ
ಪ್ರೊ.ನಿರಂಜನ ವಾನಳ್ಳಿ ಕುಲಪತಿ ಉತ್ತರ ವಿ.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.