ADVERTISEMENT

ಯಾತ್ರೆಗೆ ಪೂರ್ಣಕುಂಭ ಸ್ವಾಗತ, ಹೂಮಳೆ

ಬಂಗಾರಪೇಟೆ, ಮಾಲೂರು ತಾಲ್ಲೂಕಿನ ಗ್ರಾಮಗಳಲ್ಲಿ ಕುಮಾರಸ್ವಾಮಿ ರೋಡ್‌ ಶೋ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 7:30 IST
Last Updated 21 ನವೆಂಬರ್ 2022, 7:30 IST
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿ ಭಾನುವಾರ ರೋಡ್‌ ಶೋ ನಡೆಸಿದ ಎಚ್‌.ಡಿ.ಕುಮಾರಸ್ವಾಮಿ. ಮಾಲೂರು ಕ್ಷೇತ್ರದ ಜೆಡಿಎಸ್‌ ಸಂಭವನೀಯ ಅಭ್ಯರ್ಥಿ ಜಿ.ಇ.ರಾಮೇಗೌಡ ಇದ್ದಾರೆ (ಎಡಚಿತ್ರ) ಮಾಲೂರು ತಾಲ್ಲೂಕಿನ ಕೆಂಪಸಂದ್ರ ಗ್ರಾಮದಲ್ಲಿ ಸೇರಿದ್ದ ಜನಸ್ತೋಮ
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿ ಭಾನುವಾರ ರೋಡ್‌ ಶೋ ನಡೆಸಿದ ಎಚ್‌.ಡಿ.ಕುಮಾರಸ್ವಾಮಿ. ಮಾಲೂರು ಕ್ಷೇತ್ರದ ಜೆಡಿಎಸ್‌ ಸಂಭವನೀಯ ಅಭ್ಯರ್ಥಿ ಜಿ.ಇ.ರಾಮೇಗೌಡ ಇದ್ದಾರೆ (ಎಡಚಿತ್ರ) ಮಾಲೂರು ತಾಲ್ಲೂಕಿನ ಕೆಂಪಸಂದ್ರ ಗ್ರಾಮದಲ್ಲಿ ಸೇರಿದ್ದ ಜನಸ್ತೋಮ   

ಬಂಗಾರಪೇಟೆ/ಮಾಲೂರು (ಕೋಲಾರ ಜಿಲ್ಲೆ): ಹೋದಲೆಲ್ಲಾ ಹೂಮಳೆ, ಪೂರ್ಣಕುಂಭ ಸ್ವಾಗತ. ಕ್ರೇನ್‌ಗಳಲ್ಲಿ ಸೇಬು ಹಾಗೂ ಹೂವಿನ ಮಾಲಾರ್ಪಣೆ. ಜೊತೆಗೆ ರೋಡ್‌ ಶೋ ಹಾಗೂ ಜನರೊಂದಿಗೆ ಸಂವಾದ…

ಚುನಾವಣಾ ಪೂರ್ವಭಾಗಿಯಾಗಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಜೆಡಿಎಸ್‌ನ ಮಹತ್ವಾಕಾಂಕ್ಷಿ ಪಂಚರತ್ನ ರಥಯಾತ್ರೆಯ ಝಲಕ್‌ ಇದು.

ಬಂಗಾರಪೇಟೆ ಹಾಗೂ ಮಾಲೂರು ತಾಲ್ಲೂಕುಗಳ ಪಟ್ಟಣ ಹಾಗೂ ಗ್ರಾಮಗಳಲ್ಲಿ ಅವರು ಶನಿವಾರ ಹಾಗೂ ಭಾನುವಾರ ರೋಡ್‌ ಶೋ ನಡೆಸಿದರು. ಹೋದಲೆಲ್ಲಾ ಮಹಿಳೆಯರು ಪೂರ್ಣಕುಂಭ ಸ್ವಾಗತ ಮಾಡಿ ಪುಷ್ಪಾರ್ಚನೆ ಮಾಡಿದರು.

ADVERTISEMENT

ಶನಿವಾರ ರಾತ್ರಿ ಅವರು ಗ್ರಾಮ ವಾಸ್ತವ್ಯ ನಡೆಸಿದ ಮಾಗೇರಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ತಳಿರು ತೋರಣಗಳಿಂದ ಗ್ರಾಮವನ್ನು ಸಿಂಗರಿಸಿದ್ದರು. ಮನೆ ಮುಂದೆ ರಂಗೋಲಿ ಬಿಡಿಸಿ, ಬಾಳೆ ಕಂಬ ನೆಟ್ಟಿದ್ದರು. ಈ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯ ಬಳಿಯ ಅಶ್ವತ್ಥಕಟ್ಟೆಯಲ್ಲಿ ಮಧ್ಯರಾತ್ರಿ ವರೆಗೆ ಜನರೊಂದಿಗೆ ಕುಮಾರಸ್ವಾಮಿ ಸಂವಾದ ನಡೆಸಿದರು. ಪಂಚರತ್ನ ಯೋಜನೆ ಕುರಿತ ಕಿರು ನಾಟಕವನ್ನೂ ಪ್ರದರ್ಶಿಸಲಾಯಿತು.

ಫಸಲ್ ಬಿಮಾ ಯೋಜನೆಯಡಿ ವಿಮೆ ಬಂದಿಲ್ಲ, ಕೋಲಾರದಲ್ಲಿ ಹೂವಿನ ಮಾರುಕಟ್ಟೆ ಮಾಡಬೇಕು. ಅಕ್ರಮ ಸಕ್ರಮ, ಪಿ ನಂಬರ್ ಸರಿಪಡಿಸಬೇಕು, ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ಉದ್ಯೋಗ ಸಮಸ್ಯೆ ಬಗೆಹರಿಸಬೇಕು. ಮೀಟರ್ ಬಡ್ಡಿ ಹಾವಳಿಯಿದ್ದು, ರೈತರು-ಮಹಿಳೆಯರನ್ನು ರಕ್ಷಿಸಬೇಕು ಎಂದು ಅನೇಕರು ಮನವಿ ಮಾಡಿಕೊಂಡರು. ಪಿಂಚಣಿಯೂ ಸಿಗುತ್ತಿಲ್ಲ, ವಾಹನವನ್ನೂ ನೀಡಿಲ್ಲಎಂದ ಅಂಗವಿಕಲರೊಬ್ಬರಿಗೆ ಕೋಲಾರದಲ್ಲಿ ಭೇಟಿಯಾಗುವಂತೆ ಎಂಎಲ್ಸಿ ಇಂಚರ ಗೋವಿಂದರಾಜು ಹೇಳಿದರು.

ಕುಮಾರಸ್ವಾಮಿ ಮಾತನಾಡಿ, ‘ಸ್ಥಳೀಯವಾಗಿ ಉದ್ಯೋಗದ ಸಮಸ್ಯೆಹೆಚ್ಚಾಗಿದೆ. ಕೋಚಿಮುಲ್, ಡಿಸಿಸಿ ಬ್ಯಾಂಕ್‍ನಲ್ಲಿ ಹುದ್ದೆಗಳಿಗೆ ಆಹ್ವಾನಿಸಿ,ವ್ಯವಹಾರ ಮಾಡಿಕೊಂಡು ಬೇರೆಯವರಿಗೆ ಕೆಲಸ ನೀಡುತ್ತಾರೆ’ ಎಂದು ಆರೋಪಿಸಿದರು.

ಬೆಳಿಗ್ಗೆ ವೆಂಕಟರಮಣ ಸ್ವಾಮಿಗೆ ಪೂಜೆ ಸಲ್ಲಿಸಿ ಮಾಲೂರಿನತ್ತ ತೆರಳಿದರು. ಕೆಂಪಸಂದ್ರ, ಕೆ.ಜಿ.ಹಳ್ಳಿ, ತೊರಲಕ್ಕಿ, ಕುಡಿಯನೂರು, ಮಾಸ್ತಿ, ಸಂಪಿಗೆರೆ, ಚಿಕ್ಕ ತಿರುಪತಿ, ಲಕ್ಕೂರು, ಮಾಲೂರು ಪಟ್ಟಣ ಮೂಲಕ ಶಿವಾರಪಟ್ಟಣಕ್ಕೆ ಬಂದರು. ಕೆಂಪಸಂದ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ಭಾಗಿಯಾಗಿ ಧ್ವಜಾರೋಹಣ ಮಾಡಿದರು. ಟೇಕಲ್‌ ವೃತ್ತದಲ್ಲಿ ಮಾತನಾಡಿದರು. ಹುಣಸಿಕೋಟೆಯಲ್ಲಿ ರೋಡ್‌ ಶೋ ನಡೆಸಿದರು.

ಮಾಸ್ತಿಯಲ್ಲಿ ಜನಸ್ತೋಮ ಉದ್ದೇಶಿಸಿ ಮಾತನಾಡಿ, ‘ಬಿಜೆಪಿಯವರು ರಾಮ ಮಂದಿರ ಕಟ್ಟುವುದು ಅಯೋಧ್ಯೆಯಲ್ಲಿ ಅಲ್ಲ; ಬದಲಾಗಿ; ಜನರ ಮನದಲ್ಲಿ ರಾಮನ ದೇಗುಲ ಕಟ್ಟುವ ಕೆಲಸ ಆಗಬೇಕು’ ಎಂದರು.

‘ಮಹಿಳೆಯರಿಗೆ ಸರ್ಕಾರದಿಂದಲೇ ತರಬೇತಿ ಶಿಬಿರ ನಡೆಸಿ, ಹಳ್ಳಿಗಾಡಿನಲ್ಲೇ ಎಂಟತ್ತು ಮಂದಿಗೆ ಉದ್ಯೋಗ ಕೊಡುವ ಶಕ್ತಿ ತುಂಬುತ್ತೇನೆ’ ಎಂದು ನುಡಿದರು.

‘ಡಿ.28ರವರೆಗೆ ಮೊದಲ ಹಂತದಲ್ಲಿ ಆರು ಜಿಲ್ಲೆಗಳಲ್ಲಿ ರಥಯಾತ್ರೆ ನಡೆಯಲಿದೆ. ಬಳಿಕ ಬಿಡುವು ಪಡೆದು ಜ.3ರಂದು ಯಾತ್ರೆ ಪುನರಾರಂಭವಾಗಿ ಮಾರ್ಚ್‌ 15ರವರೆಗೆ ಮುಂದುವರಿಯುತ್ತದೆ’ ಎಂದರು.

ಮಾಲೂರು ಸಂಭವನೀಯ ಅಭ್ಯರ್ಥಿ ಜಿ.ಇ.ರಾಮೇಗೌಡ, ಬಂಗಾರಪೇಟೆ ಸಂಭವನೀಯ ಅಭ್ಯರ್ಥಿ ಮಲ್ಲೇಶ್ ಬಾಬು, ವಿಧಾನ ಪರಿಷತ್‌ ಸದಸ್ಯರಾದ ಇಂಚರ ಗೋವಿಂದರಾಜು, ಬೋಜೇಗೌಡ, ಮುಖಂಡರಾದ ತೂಪಲ್ಲಿ ಚೌಡರೆಡ್ಡಿ, ರಮೇಶ್‌ ಗೌಡ, ಕುರ್ಕಿ ರಾಜರಾಜೇಶ್ವರಿ ಸೇರಿದಂತೆ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.