ADVERTISEMENT

ಜೆಡಿಎಸ್‌ ಸ್ಥಿತಿ ದಯನೀಯ: ಕೋಲಾರ ಸಂಸದ ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 13:49 IST
Last Updated 6 ಡಿಸೆಂಬರ್ 2020, 13:49 IST
   

ಕೋಲಾರ: ‘ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಾದಿ ಆಸೆಗೆ ಆತುರವಾಗಿ ಕಾಂಗ್ರೆಸ್‌ ಜತೆ ಕೈ ಜೋಡಿಸಿದ್ದರಿಂದ ಇಂದು ಕಣ್ಣೀರು ಹಾಕುತ್ತಿದ್ದಾರೆ. ಜೆಡಿಎಸ್‌ ಪಕ್ಷದ ಸ್ಥಿತಿ ದಯನೀಯವಾಗಿದೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಲೇವಡಿ ಮಾಡಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಪಕ್ಷ ದೇಶದಲ್ಲಿ ಎಲ್ಲವನ್ನೂ ಸರ್ವನಾಶ ಮಾಡಿದೆಯೇ ಹೊರತು ಉದ್ಧಾರ ಮಾಡಿರುವುದು ಏನೂ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಕುಮಾರಸ್ವಾಮಿ ಅವರು ಅಧಿಕಾರದಾಸೆಗೆ ಕಾಂಗ್ರೆಸ್ ಜತೆ ಕೈಜೋಡಿಸದೆ ಇದ್ದಿದ್ದರೆ ಜೆಡಿಎಸ್‌ ಪಕ್ಷ ರಾಜ್ಯದಲ್ಲಿ ಕನಿಷ್ಠ 3 ಸಂಸದರ ಸ್ಥಾನ ಪಡೆಯುತ್ತಿತ್ತು. ಅವರು ಇನ್ನಾದರೂ ಎಚ್ಚೆತ್ತು ದೇಶ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಜತೆ ಕೈಜೋಡಿಸಬೇಕು. ಬಿಜೆಪಿ ಬೆಂಬಲಕ್ಕೆ ನಿಂತರೆ ಅವರು ಈಗಲೂ ಮುಖ್ಯಮಂತ್ರಿ ಆಗುತ್ತಾರೋ ಏನೋ’ ಎಂದರು.

ADVERTISEMENT

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿಂದಲೂ ಕುಮಾರಸ್ವಾಮಿ ಅವರಿಗೆ ಮೋಸ ಮಾಡುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಸಂಗತಿ ಕುಮಾರಸ್ವಾಮಿ ಅವರಿಗೆ ತಡವಾಗಿ ಗೊತ್ತಾಗಿದೆ. ಈ ಹಿಂದೆ ಕುಮಾರಸ್ವಾಮಿ ಬಿಜೆಪಿಗೆ ಮೋಸ ಮಾಡಿದ್ದರು. ಬಿಜೆಪಿ ಜತೆ ಗುರುತಿಸಿಕೊಂಡಿದ್ದರೆ ಅವರ ಸ್ಥಿತಿಯೇ ಬೇರೆ ಇರುತ್ತಿತ್ತು’ ಎಂದು ಹೇಳಿದರು.

ರೈಲ್ವೆ ವರ್ಕ್‌ಶಾಪ್‌: ‘ಗ್ರಾ.ಪಂ ಚುನಾವಣೆ ಬಳಿಕ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೆ ವರ್ಕ್‌ಶಾಪ್‌ ಕಾಮಗಾರಿ ಆರಂಭಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ರೈಲ್ವೆ ಸಚಿವರ ಜತೆ ಚರ್ಚಿಸಲಾಗಿದೆ. ಕೋಲಾರ ಎಪಿಎಂಸಿಯಿಂದ ಬಿಹಾರಕ್ಕೆ ಟೊಮೆಟೊ ಕಳುಹಿಸಲು ಪ್ರತ್ಯೇಕ ರೈಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ ಕಾರಣಕ್ಕೆ ಸ್ಥಗಿತಗೊಂಡಿರುವ ಸ್ಥಳೀಯ ರೈಲುಗಳ ಸಂಚಾರ ಪುನರಾರಂಭವಾಗಲಿದೆ’ ಎಂದು ವಿವರಿಸಿದರು.

‘ಸೋಮವಾರ (ಡಿ.7) ಬೆಳಿಗ್ಗೆ 6.30ಕ್ಕೆ ಮಾರಿಕುಪ್ಪಂ– ಬೆಂಗಳೂರು ರೈಲು ಸಂಚಾರ ಆರಂಭವಾಗುತ್ತದೆ. ಸಂಜೆ 5 ಗಂಟೆಗೆ ಬಂಗಾರಪೇಟೆಯಿಂದ ಮೈಸೂರಿಗೆ ರೈಲು ಸೇವೆ ಆರಂಭವಾಗಲಿದೆ. 2 ದಿನದ ಬಳಿಕ ಕೋಲಾರದಿಂದ ಶ್ರೀನಿವಾಸಪುರ, ಚಿಂತಾಮಣಿ ಮಾರ್ಗವಾಗಿ ಬೆಂಗಳೂರಿಗೆ ರೈಲು ಸೇವೆ ಆರಂಭಗೊಳ್ಳಲಿದೆ. ಆ ನಂತರ ಹಂತ ಹಂತವಾಗಿ ಎಲ್ಲಾ ರೈಲುಗಳ ಸಂಚಾರ ಆರಂಭವಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.