ADVERTISEMENT

ಜೆಒಸಿ ವಿಲೀನ ನೌಕರರ ಸೇವೆ ಪರಿಗಣನೆ

ಸರ್ಕಾರದ ಮೇಲೆ ಒತ್ತಡ ಹೇರಲು ವಿಧಾನ ಪರಿಷತ್ ಸದಸ್ಯರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 14:29 IST
Last Updated 22 ಮಾರ್ಚ್ 2022, 14:29 IST
ಜೆಒಸಿ ಕೋರ್ಸ್‌ಗಳಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಸಮಸ್ಯೆ ಸಂಬಂಧ ವಿಧಾನ ಪರಿಷತ್ ಸದಸ್ಯರು ಬೆಂಗಳೂರಿನಲ್ಲಿ ಮಂಗಳವಾರ ಸಭೆ ನಡೆಸಿದರು
ಜೆಒಸಿ ಕೋರ್ಸ್‌ಗಳಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಸಮಸ್ಯೆ ಸಂಬಂಧ ವಿಧಾನ ಪರಿಷತ್ ಸದಸ್ಯರು ಬೆಂಗಳೂರಿನಲ್ಲಿ ಮಂಗಳವಾರ ಸಭೆ ನಡೆಸಿದರು   

ಕೋಲಾರ: ‘ಜೆಒಸಿ ಕೋರ್ಸ್‌ಗಳಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಕಾಯಂ ಪೂರ್ವ ಸೇವೆ ಪರಿಗಣನೆ ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕಲು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಕ, ಪದವೀಧರ ಕ್ಷೇತ್ರಗಳ ಪರಿಷತ್‌ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡರು.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಭೆಗೆ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ನೌಕರರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಪರಿಷತ್ ಸದಸ್ಯರು, ‘ಸಂಕಷ್ಟದಲ್ಲಿರುವ ಈ ನೌಕರರ ಸಮಸ್ಯೆಗಳಿಗೆ ಅಂತ್ಯವಾಡೋಣ’ ಎಂದು ನಿರ್ಧರಿಸಿದರು.

ಸಭೆಯಲ್ಲಿ ಮಾತನಾಡಿದ ಜೆಒಸಿಯಿಂದ ವಿಲೀನಗೊಂಡ ನೌಕರರ ಸಂಘದ ರಾಜ್ಯ ಅಧ್ಯಕ್ಷ ಗಂಗಾಧರಾಚಾರಿ, ‘ಜೆಒಸಿಗಳಲ್ಲಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಕೆಲ ನೌಕರರು ವಿವಿಧ ಇಲಾಖೆಗಳಲ್ಲಿ ಕಾಯಂಗೊಂಡ ನಂತರ ಕೇವಲ ನಾಲ್ಕೈದು ವರ್ಷಗಳಲ್ಲಿ ನಿವೃತ್ತರಾಗುತ್ತಿದ್ದಾರೆ. ನೂತನ ಪಿಂಚಣಿ ವ್ಯವಸ್ಥೆಯಿಂದ ತಿಂಗಳಿಗೆ ಕೇವಲ ₹ 600 ಪಿಂಚಣಿ ಪಡೆಯುವ ಮೂಲಕ ಹೀನಾಯ ಸ್ಥಿತಿಗೆ ತಲುಪಿ ನೋವು ಅನುಭವಿಸುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ತುಮಕೂರಿನ ಸಿದ್ದಲಿಂಗಪ್ಪ ಅವರು ಬಿ.ಇ ಮುಗಿಸಿ 30 ವರ್ಷಗಳ ಅರೆಕಾಲಿಕ ಸೇವೆಯ ನಂತರ ವಿಲೀನದ ಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದು, ಕೇವಲ 4 ವರ್ಷಗಳಲ್ಲಿ ನಿವೃತ್ತರಾಗಿದ್ದಾರೆ. ಅವರಿಗೆ ಎನ್‍ಪಿಎಸ್ ಅಡಿ ಕೇವಲ ₹ 600 ಪಿಂಚಣಿ ಸಿಗುತ್ತಿದೆ. ಪಾರ್ಶ್ವವಾಯು ಪೀಡಿತರಾಗಿರುವ ಅವರನ್ನು ಕಾವಲುಗಾರನ ಕೆಲಸದಿಂದಲೂ ತೆಗೆಯಲಾಗಿದೆ. ಅವರ ಗೋಳು ಕೇಳುವವರಿಲ್ಲ’ ಎಂದು ಹೇಳಿದರು.

‘20 ವರ್ಷಕ್ಕೂ ಹೆಚ್ಚು ಕಾಲ ಜೆಒಸಿ ಕೋರ್ಸ್‌ಗಳಲ್ಲಿ ಕೆಲಸ ಮಾಡಿರುವ ನಾವು ಕಾಯಂ ಆದ ನಂತರ ಅತ್ಯಲ್ಪ ಸೇವೆಯಿಂದಾಗಿ ಹಳೆ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಕೆಲವರಿಗೆ ಒಂದೆರಡು ವರ್ಷಗಳ ಸೇವೆಯೂ ಸಿಕ್ಕಿಲ್ಲ. ಇದರಿಂದ ನಿವೃತ್ತಿ ಬದುಕು ನರಕವಾಗಿದೆ’ ಎಂದು ಅಳಲು ತೋಡಿಕೊಂಡರು.

ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಸುಶೀಲ್ ನಮೋಶಿ, ಮರಿತಿಬ್ಬೇಗೌಡ, ಅರುಣ್ ಷಹಪುರ, ಸಂಕನೂರು, ಹನುಮಂತ ನಿರಾಣಿ, ಚಿದಾನಂದಗೌಡ ಎಂ.ಗೌಡ ಮಾತನಾಡಿ, ‘ಜೆಒಸಿ ಕೋರ್ಸ್‌ಗಳಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಸಮಸ್ಯೆ ಸಂಬಂಧ ಮೊದಲು ಶಿಕ್ಷಣ ಸಚಿವರೊಂದಿಗೆ ಮಾತನಾಡೋಣ. ಈಗಾಗಲೇ ಶಿಕ್ಷಣ ಸಚಿವರು ಸದನದಲ್ಲಿ ಸಮಸ್ಯೆ ಪರಿಶೀಲಿಸುವ ಭರವಸೆ ನೀಡಿದ್ದಾರೆ’ ಎಂದರು.

‘ಸಚಿವರೊಂದಿಗೆ ಮಾತನಾಡಿದ ನಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇವೆ. ಸಂಕಷ್ಟದ ಬದುಕು ನಡೆಸುತ್ತಿರುವ ಜೆಒಸಿ ವಿಲೀನ ನೌಕರರ ಸಮಸ್ಯೆಗೆ ಪರಿಷತ್ತಿನ ಎಲ್ಲಾ ಶಿಕ್ಷಕ, ಪದವೀಧರ ಕ್ಷೇತ್ರದ ಪ್ರತಿನಿಧಿಗಳು ಸ್ಪಂದಿಸುತ್ತೇವೆ’ ಎಂದು ಭರವಸೆ ನೀಡಿದರು.

ಸಂಘದ ಗೌರವಾಧ್ಯಕ್ಷರಾದ ಶರಣಪ್ಪ ಗುಡ್ಡ, ಡಿ.ಕೆ.ಪುಟ್ಟಸ್ವಾಮಿ, ಉಪಾಧ್ಯಕ್ಷೆ ವಿಮಲಾ, ಸಹ ಕಾರ್ಯದರ್ಶಿ ಮಂಜೇಗೌಡ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.