
ಕೋಲಾರ: ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಅಗಲಕೋಟೆ ಗ್ರಾಮದಲ್ಲಿ ಜಮೀನು ಖರೀದಿ ಹಾಗೂ ಮಾರಾಟ ವ್ಯವಹಾರ ಕಾನೂನುಬದ್ಧವಾಗಿ ನಡೆದಿದೆ. ಶಾಲೆಗೆ ಭೂದಾನ ಮಾಡಲಾಗಿದ್ದ 51 ಎಕರೆ ಜಮೀನು ಕಬ್ಜ ಮಾಡಲಾಗಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ, ಭೂದಾನ ಕಾನೂನುಬದ್ಧವಾಗಿ ನಡೆದಿಲ್ಲದ ಕಾರಣ ತಿರಸ್ಕೃತಗೊಂಡಿದೆ. ಈ ಸಂಬಂಧ ನಮ್ಮಲ್ಲಿ ಪೂರಕ ದಾಖಲೆ ಪತ್ರಗಳು ಇವೆ ಎಂದು ಜಮೀನಿನ ಮಾರಾಟಗಾರ ಬೆಂಗಳೂರಿನ ಅಮೃತಹಳ್ಳಿಯ ಜಿ.ಕೆ.ಕೃಷ್ಣಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಜಮೀನಿನ ಖರೀದಿದಾರ ಯುನೈಟೆಡ್ ಎಸ್ಟೇಟ್ಸ್‌ನ ಮಾಲೀಕ ಆರ್.ಗಂಗಾಧರ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘251 ಎಕರೆ ಜಮೀನನ್ನು ನಾನು 1996ರಲ್ಲಿ ಟಿ.ಜಿ.ಶ್ರೀನಿವಾಸುಲು ಹಾಗೂ ಅವರ ಮಕ್ಕಳಿಂದ ಖರೀದಿಸಿದ್ದೆ. ನಮ್ಮ ಕುಟುಂಬದ ಎಂಟು ಜನರ ಹೆಸರಲ್ಲಿ ಕ್ರಯಪತ್ರವಾಗಿತ್ತು. ಆಗ ದಿನಪತ್ರಿಕೆಗಳಲ್ಲಿ ಪ್ರಕಟಣೆ ಕೂಡ ಹೊರಡಿಸಿದ್ದೆ. ಯಾವುದೇ ತಂಟೆ ತಕರಾರು ಬಂದಿರಲಿಲ್ಲ. ನಂತರ ವ್ಯವಸಾಯ ಮಾಡಿಕೊಂಡು ಬಂದಿದ್ದೆವು. ಇಷ್ಟು ದಿನ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ನಾನು ಈ ಜಮೀನನ್ನು ಆರ್.ಗಂಗಾಧರ್ ಅವರಿಗೆ ಕಳೆದ ವರ್ಷ ಮಾರಾಟ ಮಾಡಿದ ಮೇಲೆ ಸಮಸ್ಯೆ ಸೃಷ್ಟಿಯಾಗಿದೆ. ಯುನೈಟೆಡ್ ಎಸ್ಟೇಟ್ಸ್, ಯುನೈಟೆಡ್ರ್ ಗ್ರಿನ್‌ವುಡ್ಸ್, ಯುನೈಟೆಡ್ ಸಿಗ್ನೇಚರ್ ಸಂಸ್ಥೆಗಳಿಗೆ ಕ್ರಯ ಪತ್ರ ಆಗಿದೆ. ವಾಸದ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಭೂಪರಿವರ್ತನೆ ಆಗಿದೆ. ಕೆಲವರು ಸುಖಾಸುಮ್ಮನೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆರೋಪಗಳೆಲ್ಲಾ ಅದೆಲ್ಲಾ ಶುದ್ಧ ಸುಳ್ಳು. ಎಲ್ಲಾ ವ್ಯವಹಾರವೂ ಕಾನೂನುಬದ್ಧವಾಗಿದೆ’ ಎಂದರು.
1943–44ರಲ್ಲಿ ಟಿ.ಎಚ್.ಗಂಗಪ್ಪ ಎಂಬುವರು ಅಗಲಕೋಟೆಯಲ್ಲಿ ಶಾನಭೋಗರಿಂದ ಇಡೀ ಆ ಊರಿನ ಜಮೀನು ಖರೀದಿಸಿದ್ದರು. ಎಂಟು ಕ್ರಯ ಪತ್ರ ವ್ಯವಹಾರ ನಡೆದಿರುತ್ತದೆ. ಗಂಗಪ್ಪ ಅವರ ಆರು ಜನ ಪುತ್ರರಲ್ಲಿ ಒಬ್ಬರಾದ ಶ್ರೀನಿವಾಸುಲು 1955ರಲ್ಲಿ 51 ಎಕರೆ ಜಮೀನನ್ನು ಶಿಕ್ಷಣ ಇಲಾಖೆಗೆ ದಾನ ಮಾಡಿದ್ದರು. ಅದು ರಾಜ್ಯಪಾಲರ ಸಮ್ಮುಖದಲ್ಲಿ ನೋಂದಣಿ ಕೂಡ ಆಗಿತ್ತು. ಆದರೆ, ತಂದೆಯಿಂದ ಶ್ರೀನಿವಾಸುಲು ಹೆಸರಿಗೆ ಜಮೀನು ಆ ಸಮಯದಲ್ಲಿ ಇನ್ನೂ ಬಂದಿರಲಿಲ್ಲ, ದಾನಪತ್ರದಲ್ಲಿ ತಂದೆಯ ಸಹಿಯೂ ಇರಲಿಲ್ಲ. ಹೀಗಾಗಿ, ಅವರಿಗೆ ಯಾವುದೇ ಹಕ್ಕು ಇರಲಿಲ್ಲ ಎಂದು ಹೇಳಿದರು.
1956ರಲ್ಲಿ ಗಂಗಪ್ಪ ನಿಧನರಾದರು. 1959ರಲ್ಲಿ ಇನಾಂ ಅಬಾಲಿಷನ್ ಕಾಯ್ದೆ ಪ್ರಕಾರ ಅವರ ಎಲ್ಲಾ ಜಮೀನು ಸರ್ಕಾರದ ವಶಕ್ಕೆ ಹೋಗುತ್ತದೆ. ಈ ಮೂಲಕ ಭೂದಾನ ಕೂಡ ರದ್ದಾಗುತ್ತದೆ. ನಂತರ ಅರ್ಜಿ ಹಾಕಿದ ಮೇಲೆ 209 ಎಕರೆ ಜಮೀನಿನ ಶ್ರೀನಿವಾಸುಲುಗೆ ಬರುತ್ತದೆ. ಆದರೆ, ಭೂದಾನ ಸಂಬಂಧ ಶಿಕ್ಷಣ ಇಲಾಖೆಯಿಂದ ಯಾವುದೇ ಅರ್ಜಿ ಸಲ್ಲಿಕೆ ಆಗಿರಲಿಲ್ಲ. 1960 ಹಾಗೂ 1963ರಲ್ಲಿ ಮರು ಸರ್ವೆ ನಡೆಯುತ್ತದೆ. ಆಗ 251 ಎಕರೆ ಜಮೀನು ಶ್ರೀನಿವಾಸುಲು ಪಾಲಾಗುತ್ತದೆ. 1971ರಲ್ಲಿ ಜಮೀನನ್ನು ಶ್ರೀನಿವಾಸುಲು ಹಾಗೂ ಅವರ ಮಕ್ಕಳು ವಿಬ್ಭಾಗ ಮಾಡಿಕೊಳ್ಳುತ್ತಾರೆ. ಆಗಲೂ 51 ಎಕರೆ ಭೂದಾನದ ವಿಚಾರ ನಮೂದಾಗಿಲ್ಲ ಎಂದು ವಿವರಿಸಿದರು.
1996ರಲ್ಲಿ ಖರೀದಿ ಮಾಡುವಾಗ ನಾನು ಪಡೆದ ಋಣಭಾರ ಪ್ರಮಾಣಪತ್ರದಲ್ಲಿ ಈ ಜಮೀನನ್ನು ದಾನ ಮಾಡಿದ ಯಾವುದೇ ಅಂಶ ನಮೂದಾಗಿಲ್ಲ. 1955ರಿಂದ 1992ರವರೆಗೆ ಶಿಕ್ಷಣ ಇಲಾಖೆಯೂ ಈ ಜಮೀನಿನ ಬಗ್ಗೆ ಏನನ್ನೂ ಕೇಳಿಲ್ಲ. ನ್ಯಾಯಾಲಯಕ್ಕೂ ಹೋಗಿಲ್ಲ, ಸ್ವಾಧೀನಕ್ಕೂ ತೆಗೆದುಕೊಂಡಿಲ್ಲ. 1992ರಲ್ಲಿ ಶಾಲಾ ಇಲಾಖೆಯು ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿ ದಾನದ ಪತ್ರದ ಆಧಾರದ ಮೇಲೆ ಖಾತಾ ವರ್ಗಾವಣೆಗೆ ಕೋರಿತ್ತು. ಆದರೆ, ಅದನ್ನು ತಿರಸ್ಕರಿಸಿರುವುದಾಗಿ ತಹಶೀಲ್ದಾರ್ ಹಿಂಬರಹ ಕೊಡುತ್ತಾರೆ ಎಂದರು.
ಆರ್.ಗಂಗಾಧರ್ ಅವರಿಗೆ 2025ರಲ್ಲಿ ಜಮೀನು ಮಾರಾಟ ಮಾಡುವಾಗ ಭೂದಾನ ವಿವಾದದ ವಿಚಾರವನ್ನು ನಾನು ತಿಳಿಸಿರಲಿಲ್ಲ. ಈ ವಿಚಾರ ತಿಳಿಸಬೇಕಿತ್ತು. ನನಗೆ 2012ರಲ್ಲಿ ಭೂದಾನದ ವಿಚಾರ ಗಮನಕ್ಕೆ ಬಂದಿತ್ತು. ಯಾವುದೇ ತೊಂದರೆ ಆಗಿಲ್ಲದ ಕಾರಣ ಸುಮ್ಮನಿದ್ದೆವು ಎಂದು ತಿಳಿಸಿದರು.
ಜಮೀನಿಗೆ ಸಂಸದ ಡಾ.ಕೆ.ಸುಧಾಕರ್ ಹಾಗೂ ಮುಖಂಡ ಹೂಡಿ ವಿಜಯಕುಮಾರ್ ಬಂದಿದ್ದರ ಉದ್ದೇಶವೇನು ಎಂಬ ಪ್ರಶ್ನೆಗೆ, ಅವರು ಜಮೀನು ಖರೀದಿಗೆಂದು ಬಂದಿರಬಹುದು. ಆ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ನಮ್ಮನ್ನು ಕೇಳಿಲ್ಲ ಎಂದು ನುಡಿದರು.
ಈ ಜಮೀನಿನ ಈಗಿನ ಮಾಲೀಕ ಆರ್.ಗಂಗಾಧರ್ ಮಾತನಾಡಿ, ‘ನಾನು ಮೂಲತಃ ಮುಳಬಾಗಿಲು ತಾಲ್ಲೂಕಿನ ಬೈರಾಕೂರಿನವನು. ಬೆಂಗಳೂರಿನಲ್ಲಿ ನೆಲೆಸಿದ್ದು, ಯುನೈಟೆಡ್ ಎಸ್ಟೇಟ್ಸ್ ಹಾಗೂ ಎಂ.ಪಂಚಾಕ್ಷರಯ್ಯ ಹಿರೇಮಠ್ ಎಂಬುವರ ಯುನೈಟೆಡ್ ಗ್ರೀನ್ ವುಡ್ಸ್ ಪಾಲುದಾರರಾಗಿ ಜಮೀನು ಖರೀದಿಸಿದ್ದೇವೆ’ ಎಂದರು.
ಹೂಡಿ ವಿಜಯಕುಮಾರ್ 30 ವರ್ಷಗಳಿಂದ ನನ್ನ ಆಪ್ತ ಸ್ನೇಹಿತ. ಖರೀದಿಸಿದ ಜಮೀನಿನಲ್ಲಿ ಯಾರೋ ಮರ ಕಡಿದು ಹಾಕಿದ್ದರು. ಹೀಗಾಗಿ, ನೋಡಿಕೊಂಡು ಬರಲು ನಾನು ಹೂಡಿ ವಿಜಯಕುಮಾರ್ ಅವರಿಗೆ ಹೇಳಿದ್ದೆ. ಖರೀದಿ ವ್ಯವಹಾರ ಕಾನೂನಿನ ಪ್ರಕಾರ ನಡೆದಿದೆ ಎಂದು ಹೇಳಿದರು.
ಡಾ.ಕೆ.ಸುಧಾಕರ್ ನನ್ನ ಜಮೀನಿಗೆ ಬಂದು ಹೋಗಿರುವ ವಿಚಾರ ನನಗೆ ಗೊತ್ತಿಲ್ಲ. ನಮ್ಮ ಎಲ್ಲಾ ಕಾನೂನು ವಿಚಾರಗಳನ್ನು ನಮ್ಮ ಸಂಸ್ಥೆಯ ಕಾನೂನು ತಂಡ ನೋಡಿಕೊಳ್ಳುತ್ತದೆ. ಅವರು ನೀಡಿದ ಕಾನೂನು ಅಭಿಪ್ರಾಯದಂತೆ ಖರೀದಿಸಿದ್ದೇನೆ. ಮುಂದೆ ಕಾನೂನಿನ ಪ್ರಕಾರವೇ ಮುನ್ನಡೆಯುತ್ತೇನೆ ಎಂದರು.
ವಕೀಲರಾದ ಬೆಂಗಳೂರಿನ ಮಂಜುನಾಥ್, ಭಾಗ್ಯಲಕ್ಷ್ಮಿ, ಜಿಲ್ಲಾಡಳಿದಿಂದ ವಿಳಂಬವಾದ ಕಾರಣ ನ್ಯಾಯಾಲಯದ ಮೊರೆ ಹೋಗಿ ಭೂ ಪರಿವರ್ತನೆ ಮಾಡಿಕೊಂಡು ಬಂದ ವಿಚಾರ ಹೇಳಿದರು.
ಕೃಷ್ಣಪ್ಪ ಪುತ್ರ ಕೆ.ಗಂಗಾಧರ್, ಗಾಯತ್ರಮ್ಮ, ಗಂಗೇಶ್ ಇದ್ದರು.
ಕಬಳಿಕೆ ಆರೋಪ ಮಾಡಿದ್ದ ಸಂಸದ
ಅಗಲಕೋಟೆ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ದಾನ ನೀಡಿದ್ದ ಸುಮಾರು 51 ಎಕರೆ ಜಮೀನನ್ನು ಎರಡು ಸಂಸ್ಥೆಗಳು ಕಬಳಿಸಿವೆ. ರಾಜ್ಯ ಸರ್ಕಾರ ಕ್ರಮ ಕೈಗೊಂಡು ಜಮೀನು ವಾಪಸ್ ಪಡೆಯಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದರು. ಗ್ರಾಮದ ಸರ್ವೆ ನಂಬರ್ 2 7 8 10 18 60 61 63 64 ರ 50 ಎಕರೆ 26 ಗುಂಟೆ ಖುಷ್ಕಿ ಜಮೀನನ್ನು ಶಿಕ್ಷಣ ಇಲಾಖೆಗೆ ದಾನ ಮಾಡಿದ್ದರು. ದಾನಪತ್ರದ ಮೂಲಕ ನೋಂದಣಿ ಮಾಡಿಸಿ ಶಾಲೆಗೆ ನೀಡಿದ್ದರು. ಆದರೆ ನಕಲಿ ದಾಖಲೆ ಸೃಷ್ಟಿಸಿ ಆ ಜಮೀನನ್ನು ಕಬಳಿಸಲಾಗಿದೆ. ಈ ಭಾಗದಲ್ಲಿ ಒಂದೊಂದು ಎಕರೆ ₹ 1 ಕೋಟಿ ಬೆಲೆ ಬಾಳುತ್ತಿದ್ದು ಈ ಜಮೀನಿನ ಒಟ್ಟು ಮೌಲ್ಯ ಅಂದಾಜು ₹ 50 ಕೋಟಿ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.