ADVERTISEMENT

ಕೋಲಾರ | ತುರ್ತು ರಕ್ಷಣಾ ಕಾರ್ಯಕ್ಕೆ ಕೆ–ರ‍್ಯಾಟ್‌!

ಜಿಲ್ಲೆಯಲ್ಲಿ ವಿಪತ್ತು ಸಂಭವಿಸಿದಾಗ ತಕ್ಷಣ ಸ್ಪಂದಿಸಲು 300 ಸ್ವಯಂ ಸೇವಕರಿಗೆ ತರಬೇತಿ

ಕೆ.ಓಂಕಾರ ಮೂರ್ತಿ
Published 18 ಜೂನ್ 2025, 7:19 IST
Last Updated 18 ಜೂನ್ 2025, 7:19 IST
ಎಂ.ಆರ್.ರವಿ
ಎಂ.ಆರ್.ರವಿ   

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಎಲ್ಲಾದರೂ ಅಗ್ನಿ ಅವಘಡ ಸಂಭವಿಸಿದರೆ, ಮಳೆಯಿಂದ ಏನಾದರೂ ಅವಘಡ ಉಂಟಾದರೆ, ಬಸ್‌ ಅಥವಾ ಇನ್ಯಾವುದೇ ರೀತಿಯ ಸಾರಿಗೆ ಅಪಘಾತ ಸಂಭವಿಸಿದರೆ, ಕಾಲ್ತುಳಿತ, ಪ್ರವಾಹ ಸೇರಿದಂತೆ ಇನ್ನಿತರ ಯಾವುದೇ ಸಂದರ್ಭಗಳಲ್ಲಿ ಜನರು ಸಮಸ್ಯೆಗೆ ಸಿಲುಕಿದರೆ ತುರ್ತು ರಕ್ಷಣಾ ಕಾರ್ಯ ಕೈಗೊಳ್ಳಲು ಇನ್ನುಮುಂದೆ ಕೆ–ರ‍್ಯಾಟ್‌ ಆಸರೆಯಾಗಲಿದೆ.

ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ನೇತೃತ್ವದಲ್ಲಿ ಜಿಲ್ಲಾಡಳಿತವು ಕೆ–ರ‍್ಯಾಟ್‌ (ಕೋಲಾರ ರ‍್ಯಾಪಿಡ್ ಆ್ಯಕ್ಷನ್ ಟೀಮ್) ಎಂಬ ವಿನೂತನ ಯೋಜನೆ ರೂಪಿಸಿದ್ದು, ಬುಧವಾರ ಚಾಲನೆ ಸಿಗಲಿದೆ.

ವಿಪತ್ತು ನಡೆದ ತಕ್ಷಣ ಸ್ಪಂದಿಸಲು ಈ ಕಾರ್ಯಪಡೆಯಲ್ಲಿ ಎನ್‌ಎಸ್‌ಎಸ್‌, ಎನ್‌ಸಿಸಿ, ಗೃಹರಕ್ಷಕ ದಳದವರು, ಸ್ವಯಂಸೇವಾ ಸಂಸ್ಥೆಯವರು ಸೇರಿದಂತೆ ಎಲ್ಲಾ ತಾಲ್ಲೂಕುಗಳಿಂದ‌ ಸೇರಿ 300 ಸ್ವಯಂ ಸೇವಕರು ಇರುತ್ತಾರೆ.

ADVERTISEMENT

‘ಜಿಲ್ಲೆಯಲ್ಲಿ ಯಾವುದೇ ಅನಾಹುತ, ವಿಪತ್ತು ಸಂಭವಿಸಿದಾಗ ಈ ಕಾರ್ಯಪಡೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲಿದೆ. ವಿಪತ್ತು ತಡೆಯಲು, ತ್ವರಿತಗತಿಯಲ್ಲಿ ಸ್ಪಂದಿಸಲು ಹಾಗೂ ವಿಪತ್ತು ನಿರ್ವಹಣೆ, ಉಪಶಮನ ಮಾಡಲು ಸದಾ ಸನ್ನದ್ಧವಾಗಿರಲಿದೆ. ಈ ನಿಟ್ಟಿನಲ್ಲಿ ಅವರಿಗೆ ತರಬೇತಿ ಕೊಡಲಾಗುತ್ತದೆ’ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎಂ.ಆರ್‌.ರವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಥಮ ಚಿಕಿತ್ಸೆ ನೀಡುವ ರೀತಿ, ಅಗ್ನಿ ನಂದಿಸುವ ವಿಧಾನ, ಶೋಧ ಕಾರ್ಯದ ವೈಖರಿ ಸೇರಿದಂತೆ ಕಾರ್ಯಪಡೆಯಲ್ಲಿರುವ ಸ್ವಯಂಸೇವಕರಿಗೆ ವರ್ಷವಿಡೀ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ. ವಿಪತ್ತು ಪೂರ್ವ ತಯಾರಿ, ವಿಪತ್ತು ಸಂಭವಿಸಿದಾಗ ನಿಭಾಯಿಸುವ ರೀತಿ,‌ ವಿಪತ್ತು ಸಂಭವಿಸಿದ ನಂತರ ಏನು ಮಾಡಬೇಕು ಎಂಬುದನ್ನು ಕಲಿಸಲಾಗುತ್ತದೆ.

ಜೊತೆಗೆ ಅಗ್ನಿಶಾಮಕದಳ, ಆರೋಗ್ಯ ಇಲಾಖೆ, ಪೊಲೀಸ್‌, ಪ್ಯಾರಾ ಮಿಲಿಟರಿಯ ಪಡೆಯ ಸಹಕಾರವೂ ಇರುತ್ತದೆ. ಅಲ್ಲದೇ, ಪ್ರಾತ್ಯಕ್ಷಿಕೆ, ಅಣುಕು ಕಾರ್ಯಾಚರಣೆ ಮೂಲಕ ಜನರಲ್ಲಿ ಜಾಗೃತಿ ಕೂಡ ಮೂಡಿಸಲಾಗುತ್ತದೆ. ಅವರಿಗೂ ತರಬೇತಿ ನೀಡಲಾಗುತ್ತದೆ.

ಈ ನಿಟ್ಟಿನಲ್ಲಿ ವಿಪತ್ತು ಕುರಿತು ಸುಳಿವು ನೀಡುವ ವ್ಯವಸ್ಥೆ, ಉಪಕರಣಗಳು, ಕೌಶಲ್ಯಯುತ ಮಾನವ ಶಕ್ತಿಯ ಅಗತ್ಯವೂ ಇದೆ. ಅಲ್ಲದೇ ಉತ್ತಮ ಸಂವಹನ, ಸಂಪರ್ಕ ವ್ಯವಸ್ಥೆ, ಸ್ಥಳೀಯರ ಪಾಲ್ಗೊಳ್ಳುವಿಕೆ, ಸಮನ್ವಯ, ಮೂಲಸೌಲಭ್ಯ ಅಗತ್ಯವಿರುತ್ತದೆ. ಈ ಕಾರ್ಯಕ್ಕೆ ವಾರ್ಷಿಕ ಅಂದಾಜು ₹ 20 ಲಕ್ಷ ಖರ್ಚಾಗುವ ಸಾಧ್ಯತೆ ಇದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಎಂಎಫ್‌), ಜಿಲ್ಲಾ ಖನಿಜ ನಿಧಿ (ಡಿಎಂಎಫ್‌), ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯ (ಸಿಎಸ್‌ಆರ್‌) ಸಹಕಾರ ಇರಲಿದೆ.

ಕೋಲಾರ ಜಿಲ್ಲೆಯಲ್ಲಿ ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತು ಎದುರಾಗುವ ಸಾಧ್ಯತೆ ಇರುತ್ತದೆ. ಒಮೊಮ್ಮೆ ಬರಗಾಲ, ಮಳೆ ಹೆಚ್ಚಾಗಿ ಪ್ರವಾಹ, ಕೈಗಾರಿಕಾ ಅನಾಹುತ, ಅಗ್ನಿ ಅವಘಡ, ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ ಕಾರಿಡಾರ್‌ ಇರುವ ಕಾರಣ ವಾಹನ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಇವೆಲ್ಲದರ ನಿರ್ವಹಣೆಗೆ ಕೆ–ರ‍್ಯಾಟ್‌ ಸಹಕಾರಿಯಾಗುವ ನಿರೀಕ್ಷೆ ಇದೆ.

ಕೆ–ರ‍್ಯಾಟ್‌ಗೆ ಇಂದು ಜಿಲ್ಲಾಧಿಕಾರಿ ಚಾಲನೆ ವಾರ್ಷಿಕ ಅಂದಾಜು ವೆಚ್ಚ ₹20 ಲಕ್ಷ ತರಬೇತಿ, ಜಾಗೃತಿ, ಪ್ರಾತ್ಯಕ್ಷಿಕೆ

ಭೂಕಂಪನ ಅಗ್ನಿ ಅವಘಡ ಕೈಗಾರಿಕಾ ಅನಾಹುತ ಸಾರಿಗೆ ಅಪಘಾತ ಪ್ರವಾಹ ಬರಗಾಲ ಕಾಲ್ತುಳಿತ ಸೇರಿದಂತೆ ಹಲವಾರು ವಿಪತ್ತು ಸಂದರ್ಭದಲ್ಲಿ ಈ ಕಾರ್ಯಪಡೆ ರಕ್ಷಣೆಗೆ ನಿಲ್ಲಲಿದೆ
ಎಂ.ಆರ್‌.ರವಿ ಜಿಲ್ಲಾಧಿಕಾರಿ

ಕೋಲಾರ ರ‍್ಯಾಪಿಡ್ ಆ್ಯಕ್ಷನ್ ಟೀಮ್‌ನಲ್ಲಿರುವ ಸಂಸ್ಥೆಗಳು ಸದಸ್ಯರು

* ಭಾರತ್‌ ಸ್ಕೌಟ್ಸ್‌ ಅಂಡ್ ಗೈಡ್ಸ್‌;60

* ಎನ್‌ಸಿಸಿ;38 * ನೆಹರೂ ಯುವ ಕೇಂದ್ರ;40

* ಲಕ್ಷ್ಮಿ ಮೈನಿಂಗ್‌ ಸರ್ವಿಸ್‌;15

* ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ;19

* ಸಮೃದ್ಧಿ ಯುವಕರ ಕ್ಷೇಮಾಭಿವೃದ್ಧಿ ಸಂಘ;10

* ಗೃಹ ರಕ್ಷಕರು;30

* ಕೋಲಾರ ಫ್ಯೂಚರ್‌ ಸೋಲ್ಡರ್ಸ್‌;25

* ಇಂಡಿಯನ್‌ ರೆಡ್‌ ಕ್ರಾಸ್‌ (ಯೂತ್‌);30

* ಎನ್‌ಎಸ್‌ಎಸ್‌;30

* ಸತ್ಯಸಾಯಿ ಡಿ.ಎಂ ಸ್ವಯಂಸೇವಕರು;3

* ಒಟ್ಟು;300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.