ADVERTISEMENT

ಮಾಲೂರು|ಪ್ರಕಾಶಕರಿಗೆ ಪುಸ್ತಕ ಕೊಳ್ಳುವ, ಓದುವವರು ಇಲ್ಲದ ಕೊರಗು: ಡಾ.ಮಾನಸ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 5:35 IST
Last Updated 26 ಜನವರಿ 2026, 5:35 IST
ಮಾಲೂರಿನ ಸಾಹಿತಿ ಸಿ.ಲಕ್ಷ್ಮಿನಾರಾಯಣ್ ಅವರ ನಿವಾಸದಲ್ಲಿ ಭಾನುವಾರ ನಡೆದ ಮನೆಗೊಂದು ಗ್ರಂಥಾಲಯ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು
ಮಾಲೂರಿನ ಸಾಹಿತಿ ಸಿ.ಲಕ್ಷ್ಮಿನಾರಾಯಣ್ ಅವರ ನಿವಾಸದಲ್ಲಿ ಭಾನುವಾರ ನಡೆದ ಮನೆಗೊಂದು ಗ್ರಂಥಾಲಯ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು   

ಮಾಲೂರು: ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಕನ್ನಡ ಪುಸ್ತಕಗಳನ್ನು ಕೊಳ್ಳುವವರಿಲ್ಲ ಹಾಗೂ ಓದುವವರಿಲ್ಲ ಎಂಬ ಕೊರುಗು ಸಾಹಿತಿ ಮತ್ತು ಪ್ರಕಾಶಕರನ್ನು ಕಾಡುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಸಮಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸಾಹಿತಿ ಸಿ.ಲಕ್ಷ್ಮಿನಾರಾಯಣ್ ಅವರ ನಿವಾಸದಲ್ಲಿ ಭಾನುವಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಸಾರಂಗ ರಂಗ ಮಾಲೂರು ಸಂಯುಕ್ತಾಶ್ರಯದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಆದರೆ, ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಪ್ರಕಾಶಕರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ ಪುಸ್ತಕ ಕೇವಲ ಸರಕಾಗದೆ, ಅದೊಂದು ಸಂಸ್ಕೃತಿಯಾಗಿ ಮನೆ ಮನೆಯ ಜ್ಞಾನ ಸಂಪತ್ತಾಗಿ, ತನ್ನ ಅಸ್ತಿತ್ವವನ್ನು ತಾನೆ ಕಾಪಾಡಿಕೊಳ್ಳಬೇಕೆಂಬ ವೈಜ್ಞಾನಿಕ ಆಶಯದ ತಳಹದಿಯ ಮೇಲೆ ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಅಸ್ತಿತ್ವಕ್ಕೆ ತಂದಿದೆ ಎಂದರು.

ADVERTISEMENT

ಈ ಯೋಜನೆ ಕನಿಷ್ಠ ಒಂದು ಲಕ್ಷ ಮನೆಗಳಲ್ಲಿ ಅಸ್ತಿತ್ವಕ್ಕೆ ತರುವ ಉದ್ದೇಶ ಈ ಯೋಜನೆಯದು. ಒಂದು ಗ್ರಂಥಾಲಯ ಕನಿಷ್ಠ 500 ಪುಸ್ತಕ ಖರೀದಿಸಿದರೂ, ಐದು ಕೋಟಿ ಪುಸ್ತಕಗಳಾಗುತ್ತವೆ. ಈ ಪುಸ್ತಕಗಳನ್ನು ಯಾವುದಾದರೂ ಪುಸ್ತಕ ಮಳಿಗೆಯಿಂದ ಖರೀದಿಸಬೇಕು. ಆಗ ಪುಸ್ತಕ ಅಂಗಡಿ ಹಾಗೂ ಪ್ರಕಾಶಕರಿಗೆ ಸಹಾಯವಾಗುತ್ತದೆ. ಇದರಿಂದ ಸಾಹಿತಿ, ಮುದ್ರಣಾಲಯಗಳ ಉದ್ಯಮ ವರ್ಷ ಪೂರ್ತಿ ಕ್ರಿಯಾಶೀಲವಾಗಿರುತ್ತದೆ. ಈ ಯೋಜನೆ ಕನ್ನಡ ಪುಸ್ತಕಗಳಿಗಷ್ಟೇ ಸೀಮಿತಗೊಳ್ಳದೆ, ಕನ್ನಡ ದಿನಪತ್ರಿಕೆ , ವಾರ ಪತ್ರಿಕೆ ಹಾಗೂ ಮಾಸ ಪತ್ರಿಕೆ ಪ್ರಸಾರಕ್ಕೂ ಪಣತೊಟ್ಟಿದೆ ಎಂದು ತಿಳಿಸಿದರು.

ಯೋಜನೆ ಅನುಷ್ಟಾನ:‌ ಈಗಾಗಲೇ ರಾಜ್ಯದ ಮುಖ್ಯ ಮಂತ್ರಿಗಳ ಮನೆಯಲ್ಲಿ ಮೊದಲ ಗ್ರಂಥಾಲಯ ಅನುಷ್ಠಾನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರ ಮನೆಯಲ್ಲಿ ಅಸ್ತಿತ್ವಕ್ಕೆ ಬರುತ್ತದೆ. ಇದರ ಮೂಲಕ ಅವರ ಅನುಯಾಯಿಗಳ ಮನೆಗಳಿಗೂ ವಿಸ್ತರಣೆಯಾಗುತ್ತದೆ. ಚಲನಚಿತ್ರ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರ ಮನೆಗಳಲ್ಲೂ ಅನುಷ್ಠಾನಕ್ಕೆ ತರಲಾಗುವುದು.

ನಿರ್ವಹಣೆ: ಗ್ರಂಥಾಲಯಗಳ ನಿರ್ವಹಣೆಗೆ ಪುಸ್ತಕ ಪ್ರಾಧಿಕಾರವು ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರನ್ನು ನೇಮಿಸಲಾಗಿದೆ. ಈ ಸದಸ್ಯರು ಪುಸ್ತಕ ಪ್ರೇಮಿಗಳಾಗಿದ್ದು, ಮನೆಗೊಂದು ಗ್ರಂಥಾಲಯದವರೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ ಎಂದರು. 

ಸಾಹಿತಿ ಲಕ್ಷ್ಮಿನಾರಾಯಣ್ ಮಾತನಾಡಿ, ಮನೆಗೆ ದೇವಾಲಯ ಕೊಠಡಿ ಹೇಗೆ ಮುಖ್ಯವೋ, ಅದೇ ರಿತಿ ಗ್ರಂಥಾಲಯವೂ ಇರಬೇಕು. ದೇವರ ಮನೆ ಭಕ್ತಿಯ ಮೂಲ, ಗ್ರಂಥಾಲಯ ಜ್ಞಾನದ ಮೂಲ. ಅದರಿಂದ ಜ್ಞಾನದ ಅರಿವು ಪಡೆಯುವ ಮೂಲಕ ಭಕ್ತಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ. ಇಂದಿನ ದಿನಗಳಲ್ಲಿ ಯುವ ಪಡೆ ದಾರಿ ತಪ್ಪುತ್ತಿದೆ. ಪೋಷಕರು ಪುಸ್ತಕ ಓದುವ ಹವ್ಯಾಸ ಬೆಳಸಿಕೊಂಡರೆ ಮಕ್ಕಳು ಓದುವ ಕಡೆ ಗಮನ ಹರಿಸುತ್ತಾರೆ ಎಂದರು.

ಸಾಹಿತಿ ಮಾ.ವೆಂ.ತಮ್ಮಯ್ಯ, ಪಿಚ್ಚಳ್ಳಿ ಶ್ರೀನಿವಾಸ್, ವೇಣುಗೋಪಾಲ ವಹ್ನಿ, ಸರ್ವೇಶ್ ಬಂಟಳ್ಳಿ, ಡಾ.ನಾ.ಮುನಿರಾಜು, ಕೆ.ಚೇತನ್ ಅಜೀವಿಕ, ವಿ.ಗೀತಾ, ಸುಮತಿ, ಆಗ್ರಹಾರ ರಮೇಶ್, ಕಾಳಪ್ಪ, ದಾ.ಮು.ವೆಂಕಟೇಶ್, ರೋಣುರೂ ವೆಂಕಟೇಶ್, ಶ್ರೀನಿವಾಸ್ ಇದ್ದರು.

ಅಂಗಳದಲ್ಲಿ ತಿಂಗಳ ಪುಸ್ತಕ ಈಗಾಗಲೇ ಪ್ರಾಧಿಕಾರದಿಂದ ಅಂಗಳದಲ್ಲಿ ತಿಂಗಳ ಪುಸ್ತಕ ಎಂಬ ಕಾರ್ಯಕ್ರಮ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅದು ಮನೆ ಮನೆ ಗ್ರಂಥಾಲಯಗಳಿಗೂ ವಿಸ್ತಾರಗೊಳ್ಳುತ್ತದೆ. ಇದರ ಫಲವಾಗಿ ಪ್ರತಿ ತಿಂಗಳು ಕನಿಷ್ಠ ನೂರು ಮನೆಗಳಲ್ಲಿ ನೂರು ಪುಸ್ತಕಗಳ ಪರಿಚಯ ಸಂವಾದ ನಡೆಸಲಾಗುವುದು. ಡಾ.ಮಾನಸ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.