ADVERTISEMENT

ನೌಕರರಿಗೆ ಕನ್ನಡ ಶಿಕ್ಷಣ ಯೋಜನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 14:19 IST
Last Updated 18 ಏಪ್ರಿಲ್ 2021, 14:19 IST

ಕೋಲಾರ: ರಾಜ್ಯದಲ್ಲಿರುವ ಕನ್ನಡ ಬಾರದ ಎಲ್ಲಾ ಸರ್ಕಾರಿ ನೌಕರರಿಗೆ 12 ತಿಂಗಳು ಕಾಲ ಅಂಚೆ ತೆರಪಿನ ಶಿಕ್ಷಣದ ಮೂಲಕ ಕನ್ನಡ ಶಿಕ್ಷಣ ಯೋಜನೆ ನಡೆಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎನ್.ರವಿಕುಮಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಎಲ್ಲಾ ನಗರಸಭೆ, ಕೆಎಸ್‌ಆರ್‌ಟಿಸಿ. ವಿಶ್ವವಿದ್ಯಾಲಯಗಳು, ಶಾಲಾ ಕಾಲೇಜು ಸೇರಿದಂತೆ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು, ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಯೋಜನೆಗೆ ಹೆಸರು ನೋಂದಾಯಿಸಬಹುದು. ಇದಕ್ಕೆ ಯಾವುದೇ ಶುಲ್ಕವಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾಗುವವರೆಗಿನ ಅವರ ಕಚೇರಿ ಗೈರು ಹಾಜರಿಯನ್ನು ಅನ್ಯ ಕಾರ್ಯನಿಮಿತ್ತ ಎಂದು ಪರಿಗಣಿಸಲಾಗುವುದು. ಅಂಚೆ ಮೂಲಕ ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಕರ್ನಾಟಕ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಿನಾಯಿತಿಯಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಕನ್ನಡ ಶಿಕ್ಷಣ ಯೋಜನೆಯನ್ನು ಈಗ ಸಾರ್ವಜನಿಕರಿಗೂ ವಿಸ್ತರಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ 18 ವರ್ಷದಿಂದ 60 ವರ್ಷ ವಯೋಮಿತಿಯೊಳಗಿನ ಸಾರ್ವಜನಿಕರು ಯೋಜನೆಗೆ ಹೆಸರು ನೋಂದಾಯಿಸಬಹುದು. ಆಸಕ್ತರು ಭರ್ತಿ ಮಾಡಿದ ಅರ್ಜಿಯ ಜತೆ ₹ 250 ಡಿಮಾಂಡ್‌ ಡ್ರಾಫ್ಟ್‌ ಕಳುಹಿಸಿಕೊಡಬೇಕು. ನೋಂದಾಯಿತರಿಗೆ 20 ಪಾಠವಳಿ ಕಳುಹಿಸಿಕೊಡಲಾಗುವುದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ವಿವರಿಸಿದ್ದಾರೆ.

35ನೇ ತಂಡದ ತರಬೇತಿಯು 2021ರ ನ.1 ಆರಂಭವಾಗುತ್ತದೆ. ಅರ್ಜಿ ನಮೂನೆ, ತರಬೇತಿ ವಿವರ ಸೇರಿದಂತೆ ಹೆಚ್ಚಿನ ಮಾಹಿತಿಗೆ ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು–570006 ವಿಳಾಸಕ್ಕೆ ಅಂಚೆ ಚೀಟಿ ಹಚ್ಚಿದ ಸ್ವವಿಳಾಸಿತ ಲಕೋಟೆಯನ್ನು ಏ.30ರೊಳಗೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.