ಕೋಲಾರ: ಬಹಳ ಕುತೂಹಲ ಮೂಡಿಸಿದ್ದ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಗೆ ಭಾನುವಾರ ಬಹುತೇಕ ಶಾಂತಿಯುತ ಚುನಾವಣೆ ನಡೆದಿದ್ದು, ಜಡಿ ಮಳೆ ನಡುವೆಯೇ ಶೇ 92.56ರಷ್ಟು ಮತದಾನ ನಡೆದಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್, ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಸೇರಿದಂತೆ ಅಗ್ನಿಪರೀಕ್ಷೆ ಎದುರಿಸಿರುವ ಒಟ್ಟು 51 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಕೋಲಾರ ನಗರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಮತ ಯಂತ್ರಗಳನ್ನು ಇಡಲಾಗಿದೆ.
17 ವಾರ್ಡ್‌ಗಳಲ್ಲೂ ಬೆಳಿಗ್ಗೆ ಏಳು ಗಂಟೆಯಿಂದಲೇ ಮತದಾರರು ಮತಗಟ್ಟೆಗಳಿಗೆ ಬಂದು ಉತ್ಸಾಹದಿಂದಲೇ ಮತದಾನ ಮಾಡಿದರು. ಸಂಜೆ 5 ಗಂಟೆವರೆಗೆ ಆಗಾಗ್ಗೆ ಮಳೆ ಬರುತ್ತಲೇ ಇತ್ತು. ಮಳೆ ಲೆಕ್ಕಿಸದೆ ಬಂದು ಮತದಾನ ಮಾಡಿದರು. ಅದಕ್ಕೆ ಸಾಕ್ಷಿ ಮತದಾನದ ಶೇಕಡವಾರು ಪ್ರಮಾಣ. ಮಧ್ಯಾಹ್ನ ವೇಳೆ ಶೇ 60ರಷ್ಟು ಮತದಾನ ಆಗಿತ್ತು.
22 ಮತಗಟ್ಟೆ ಸ್ಥಾಪಿಸಲಾಗಿತ್ತು. ಒಟ್ಟು 100 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತಿ ಮತಗಟ್ಟೆಯಲ್ಲಿ ನಾಲ್ವರು ಸಿಬ್ಬಂದಿ ಇದ್ದರು. ಜೊತೆಗೆ ಮೂರರಿಂದ ನಾಲ್ವರು ಪೊಲೀಸ್ ಸಿಬ್ಬಂದಿ ಕಾವಲಿಗಿದ್ದರು. ಎಲ್ಲೂ ಯಾವುದೇ ರೀತಿ ಸಮಸ್ಯೆ ಆಗಿಲ್ಲ. ವಯಸ್ಕರು, ಯುವ ಜನತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ಕಂಡುಬಂತು. ವಯಸ್ಕರಿಗೆ ವ್ಹೀಲ್ ಚೇರ್‌ನ ವ್ಯವಸ್ಥೆಯೂ ಇತ್ತು.
ಮತಗಟ್ಟೆಗಳಿಗೆ ಅನತಿ ದೂರದಲ್ಲಿ ನಿಂತಿದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮತದಾರರಿಗೆ ಕೈ ಮುಗಿಯುತ್ತಾ ಚಿಹ್ನೆಯ ನೆನಪು ಮಾಡಿಕೊಡುತ್ತಾ ಮತಯಾಚಿಸುತ್ತಿದ್ದರು. ಕೆಲವು ಕಡೆ ಮತದಾರರಿಗೆ ಊಟೋಪಚಾರದ ವ್ಯವಸ್ಥೆಯೂ ಇತ್ತು. ವಯಸ್ಸಾದವರನ್ನು ಕರೆದೊಯ್ಯಲು ಆಟೊ, ಕಾರುಗಳ ವ್ಯವಸ್ಥೆಯನ್ನೂ ಅಭ್ಯರ್ಥಿಗಳು ಮಾಡಿದ್ದರು.
ಅತಿ ಸೂಕ್ಷ್ಮ ಮತಗಟ್ಟೆ ಎನಿಸಿದ್ದ ಸುಳದೇನಹಳ್ಳಿ-ವಿಶ್ವನಗರ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಕುರುಬರಹಳ್ಳಿ ಕುಮಾರ್ ಮತ್ತು ಮೈತ್ರಿ ಅಭ್ಯರ್ಥಿ ಸಿ.ಎಸ್.ವೆಂಕಟೇಶ್ ನಡುವೆ ಪೈಪೋಟಿ ನಡೆದಿದ್ದು, ಬೆಳಿಗ್ಗೆ 9 ಗಂಟೆಯೊಳಗೆ ಶೇ 64 ರಷ್ಟು ಮತದಾನ ನಡೆದಿದ್ದು ಬಹಳ ಕುತೂಹಲ ಮೂಡಿಸಿದೆ. ಕೊನೆಗೆ ಶೇ 98.52 ಮತದಾನ ದಾಖಲಾಯಿತು. ಇದು 17 ವಾರ್ಡ್‌ಗಳ ಪೈಕಿ ಅಧಿಕ ಮತದಾನವಾಗಿರುವ ವಾರ್ಡ್ ಕೂಡ. ಪ್ರತಿ ವಾರ್ಡ್‌ನಲ್ಲಿಯೂ ಶೇ 86 ರಿಂದ ಶೇ 98.52 ಮತದಾನ ನಡೆದಿರುವುದು ವಿಶೇಷ.
ವೇಮಗಲ್ ಪಟ್ಟಣದ ಜೂನಿಯರ್ ಕಾಲೇಜಿನಲ್ಲಿದ್ದ ಮತಗಟ್ಟೆಯಲ್ಲಿ ಮಾಜಿ ಸಭಾಪತಿ ವಿ.ಆರ್.ರ್ಸುದರ್ಶನ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ತಮ್ಮ ಹಕ್ಕು ಚಲಾಯಿಸಿದರು.
ಒಟ್ಟು 13,499 ಮತದಾರರ ಪೈಕಿ 12,494 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 6,312 ಮಹಿಳೆಯರು ಮತದಾನ ಮಾಡಿದ್ದರೆ, 6,182 ಪುರುಷರು ಮತ ಚಲಾಯಿಸಿದ್ದಾರೆ.
ಆಡಳಿತರೂಢ ಕಾಂಗ್ರೆಸ್ ಸರ್ಕಾರ ಹಾಗೂ ಪ್ರಮುಖ ಪ್ರತಿಪಕ್ಷಗಳಾಗಿರುವ ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಒಟ್ಟು 17 ವಾರ್ಡ್‌ಗಳಿದ್ದು ಎಲ್ಲಾ ಸ್ಥಾನಗಳಿಗೆ ಕಾಂಗ್ರೆಸ್ ಸ್ಪರ್ಧೆ ಮಾಡಿದೆ. ಸ್ಥಾನ ಹಂಚಿಕೊಂಡಿರುವ ಮೈತ್ರಿ ಪಕ್ಷಗಳಾದ ಬಿಜೆಪಿ 9 ಸ್ಥಾನಗಳಲ್ಲಿ ಹಾಗೂ ಜೆಡಿಎಸ್‌ಗೆ ಕೇವಲ 8 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಆಮ್ ಆದ್ಮಿ ಪಕ್ಷದ ನಾಲ್ವರು ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಎಲ್ಲಾ ಪಕ್ಷದವರು ತಮ್ಮ ಅಭ್ಯರ್ಥಿಗಳ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಭಪಾತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ವರ್ತೂರು ಪ್ರಕಾಶ್, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಸೇರಿದಂತೆ ಹಲವು ಮುಖಂಡರು ಇದ್ದರು.
ಮತದಾನಕ್ಕಾಗಿ ರಾಜ್ಯ ಚುನಾವಣಾ ಆಯೋಗದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಲಾಯಿತು. ಈ ಚುನಾವಣೆಯಲ್ಲೀ ‘ನೋಟಾ’ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಚುನಾವಣಾ ಶಾಂತಿಯುತವಾಗಿ ನಡೆದಿದೆ. ಎಲ್ಲೂ ಗಲಾಟೆ ಗೊಂದಲ ಅಹಿತಕರ ಘಟನೆ ವರದಿಯಾಗಿಲ್ಲ. ಹೀಗಾಗಿ ವೇಮಗಲ್–ಕುರುಗಲ್ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ
ಡಾ.ನಯನಾ ಕೋಲಾರ ತಹಶೀಲ್ದಾರ್
ಆ.20ರಂದು ಭವಿಷ್ಯ ನಿರ್ಧಾರ
ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿನ ಮತದಾರರ ಭವಿಷ್ಯ ಆ.20ರಂದು ಗೊತ್ತಾಗಲಿದೆ. ಮತ ಎಣಿಕೆಯು ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಕೋಲಾರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.
ಜಿಲ್ಲಾಧಿಕಾರಿ ಎಸ್‌ಪಿ ವೀಕ್ಷಣೆ
ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಸಂಬಂಧ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲಾಧಿಕಾರಿ ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಮಂಗಳಾ ತಹಶೀಲ್ದಾರ್ ಡಾ.ನಯನಾ ಸ್ಥಳದಲ್ಲಿದ್ದು ಚುನಾವಣಾ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದರು.
ವೇಮಗಲ್ ಚುನಾವಣೆ: ಆಮಿಷದ ಸದ್ದು
ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತದಾರರಿಗೆ ಆಮಿಷ ನೀಡಿರುವ ಬಗ್ಗೆ ದೂರುಗಳು ಬಂದಿವೆ. ಹಾಟ್ ಬಾಕ್ಸ್ ಕುಕ್ಕರ್ ಸೀರೆ ಕಾಲುಚೈನ್ ಮೂಗುತಿ ನೆತ್ತು ಹಸು ಸೇರಿದಂತೆ ಹಲವಾರು ರೀತಿಯಲ್ಲಿ ಆಮಿಷವೊಡ್ಡಿರುವುದು ಗೊತ್ತಾಗಿದೆ. ವಿವಿಧ ವಸ್ತುಗಳನ್ನು ಪೊಲೀಸರು ಚುನಾವಣಾ ಸಿಬ್ಬಂದಿ ವಶಕ್ಕೆ ಕೂಡ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಡಾ.ನಯನಾ ‘ಮತದಾನದ ಹಿಂದಿನ ದಿನ ಹಾಟ್ ಬಾಕ್ಸ್ ವಶಕ್ಕೆ ಪಡೆದಿದ್ದೇವೆ. ಸೀರೆ ಕುಕ್ಕರ್ ಹಂಚುತ್ತಿದ್ದ ಸಂಬಂಧ ಪ್ರಕರಣ ದಾಖಲಾಗಿದೆ. ಹಣ ವಶಕ್ಕೆ ಪಡೆದ ಪ್ರಕರಣ ನಡೆದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.