
ನಂಜೇಗೌಡ
ಬೆಂಗಳೂರು: ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಅವರ ಆಯ್ಕೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
‘ಮತ ಎಣಿಕೆ ಪ್ರಕ್ರಿಯೆ ಕಾನೂನು ಬದ್ಧವಾಗಿ ನಡೆದಿಲ್ಲ. ಭಾರಿ ಅಕ್ರಮ ಎಸಗಲಾಗಿದೆ’ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ಬಿಜೆಪಿಯ ಕೆ.ಎಸ್.ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಲಾಗಿದ್ದ ತೀರ್ಪನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿದೆ.
‘ಈ ಕ್ಷೇತ್ರದ ಮತಗಳನ್ನು ನಾಲ್ಕು ವಾರಗಳಲ್ಲಿ ಪುನಃ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು. ಅದರಲ್ಲಿ ಯಾರು ಹೆಚ್ಚು ಮತಗಳಿಸಿದವರು ಎಂದು ಕಂಡುಬರುತ್ತದೆಯೋ ಅಂಥವರನ್ನು ಆಯ್ಕೆಯಾದ ಅಭ್ಯರ್ಥಿ ಎಂದು ಘೋಷಿಸಿ’ ಎಂದು ನ್ಯಾಯಪೀಠ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
ಇದೇ ವೇಳೆ ನಂಜೇಗೌಡ ಪರ ವಕೀಲರು ಮಾಡಿದ, ‘ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೂ ಆದೇಶಕ್ಕೆ ತಡೆ ನೀಡಬೇಕು’ ಎಂಬ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ತನ್ನ ಆದೇಶಕ್ಕೆ 30 ದಿನ ತಡೆ ನೀಡಿದೆ.
‘ಈ ತೀರ್ಪಿನ ಪ್ರತಿಯನ್ನು ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿಗೆ ತ್ವರಿತಗತಿ ಅಂಚೆ ಮೂಲಕ ರವಾನಿಸಬೇಕು. ಪ್ರಕರಣದ ವಿಚಾರಣೆ ವೇಳೆ ಮತ ಎಣಿಕೆ ಪ್ರಕ್ರಿಯೆ ಸಂದರ್ಭದಲ್ಲಿ ಬಳಸಲಾದ ವಿವಿ ಪ್ಯಾಟ್ ಪೇಪರ್ ಟ್ರಯಲ್ ಅನ್ನು ಇವಿಎಂ ಜೊತೆಗೆ ಹೊಂದಾಣಿಕೆ ಮಾಡುವ ಚಿತ್ರೀಕರಣದ ದೃಶ್ಯಾವಳಿಯನ್ನು ಕೋರ್ಟ್‌ಗೆ ಸಲ್ಲಿಸಿ ಎಂಬ ಆದೇಶವನ್ನು ಜಿಲ್ಲಾಧಿಕಾರಿ (ಜಿಲ್ಲಾ ಚುನಾವಣಾಧಿಕಾರಿ) ಪಾಲನೆ ಮಾಡಿಲ್ಲ. ಹಾಗಾಗಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.
‘ಎಣಿಕೆ ಪ್ರಕ್ರಿಯೆಯಲ್ಲಿ ಕಂಡು ಬಂದಿರುವ ವ್ಯತ್ಯಾಸಗಳ ಬಗ್ಗೆ ಅರ್ಜಿದಾರರು ಸಾಕಷ್ಟು ವಿವರಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ. ಅರ್ಜಿದಾರರ ಎಣಿಕೆ ಏಜೆಂಟರ ಸಹಿಗಳು ಕಂಡುಬರದ ಫಾರಂ-17ಸಿ ಭಾಗ-2ರ ದಾಖಲೆಗಳನ್ನು ಪ್ರಸ್ತುತಪಡಿಸಿದ್ದಾರೆ. ಕೆಲವು ದಾಖಲೆಗಳಲ್ಲಿ, ಅರ್ಜಿದಾರರ ಎಣಿಕೆ ಏಜೆಂಟ್ ಆಗಿ ಸಹಿ ಮಾಡಿರುವ ಕಾಲ್ಪನಿಕ ವ್ಯಕ್ತಿಯ ಎರಡು ಸಹಿಗಳಿವೆ’ ಎಂಬ ಅಂಶವನ್ನು ನ್ಯಾಯಪೀಠ ತೀರ್ಪಿನಲ್ಲಿ ಕಾಣಿಸಿದೆ.
‘ಮರು ಎಣಿಕೆ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿ ಹೊರಡಿಸಿದ ಆದೇಶದ ಪ್ರತಿಯನ್ನು ಪುನಃ ಟೈಪ್ ಮಾಡಿ, 2024ರ ಮೇ 15ರಂದು ವೇಣುಗೋಪಾಲ್ (ಮಂಜುನಾಥ್ ಗೌಡ ಅವರ ಪರ ಚುನಾವಣಾ ಏಜೆಂಟ್) ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಚುನಾವಣಾಧಿಕಾರಿ ಮತ್ತು ಇತರ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ, ಆ ಮೂಲ ಆದೇಶವು ಚುನಾವಣಾಧಿಕಾರಿಯ ಬಳಿ ಲಭ್ಯವಿಲ್ಲ. ಕೋರ್ಟ್‌ಗೆ ಹಾಜರುಪಡಿಸಿದ ಸ್ಟ್ರಾಂಗ್ ರೂಮಿನ ದಾಖಲೆಗಳೊಂದಿಗೂ ಅದು ಕಂಡುಬಂದಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ವಿವೇಕ್ ರೆಡ್ಡಿ, ಜಯಕುಮಾರ್ ಎಸ್.ಪಾಟೀಲ್ ಹಾಗೂ ಹೈಕೋರ್ಟ್ ವಕೀಲರಾದ ಎ.ವಿ.ಶ್ರೀಹರಿ ವಾದ ಮಂಡಿಸಿದ್ದರು.
ಅರ್ಜಿಯಲ್ಲಿ ಏನಿತ್ತು?
‘ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 15 ಸ್ಪರ್ಧಿಗಳ ಏಜೆಂಟರುಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಮತಗಳ ಎಣಿಕೆ ಒಂದೇ ಕೊಠಡಿಯಲ್ಲಿ ನಡೆಯಬೇಕಿತ್ತು. ಆದರೆ, ಎರಡು ಪ್ರತ್ಯೇಕ ಕೊಠಡಿಗಳಲ್ಲಿ ನಡೆದಿದೆ. ಈ ಮೂಲಕ ಜನಪ್ರತಿನಿಧಿಗಳ ಕಾಯ್ದೆ-1951 ಮತ್ತು ಚುನಾವಣಾ ಆಯೋಗ ಪ್ರಕಟಿಸಿದ್ದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ, ನಂಜೇಗೌಡ ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಚುನಾವಣಾ ಆಯೋಗದ ಕ್ರಮವನ್ನು ರದ್ದುಪಡಿಸಬೇಕು. ಮತಗಳ ಮರು ಎಣಿಕೆಗೆ ನಿರ್ದೇಶಿಸಬೇಕು‘ ಎಂದು ಅರ್ಜಿದಾರರು ಕೋರಿದ್ದರು.
ಮನವಿ ಏನಿತ್ತು?
‘ಚುನಾವಣೆಗೆ ಸಂಬಂಧಿಸಿದ ಎಲ್ಲಾ ಹೆಚ್ಚಿನ ಸಾಮಗ್ರಿಗಳು, ಎಲೆಕ್ಟ್ರಾನಿಕ್ ಡೇಟಾ ಮತ್ತು ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು (ಇವಿಎಂ) ಮತ್ತು ಅಂಚೆ ಮತಪತ್ರಗಳನ್ನು ನ್ಯಾಯಾಲಯದ ಕಸ್ಟಡಿಗೆ ಒಪ್ಪಿಸಲು ನಿರ್ದೇಶಿಸಬೇಕು. ಅರ್ಜಿದಾರನಾದ ನನ್ನನ್ನು (ಕೆ.ಎಸ್.ಮಂಜುನಾಥ್ ಗೌಡ) ಕರ್ನಾಟಕ ಶಾಸಕಾಂಗ ಸಭೆಯ 149ರ ಸಂಖ್ಯೆಯ ಮಾಲೂರು ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾದ ಅಭ್ಯರ್ಥಿ ಎಂದು ಘೋಷಿಸಲು ಆದೇಶಿಬೇಕು’ ಎಂದು ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.