ADVERTISEMENT

ಬಂಗಾರಪೇಟೆ: ಗಡಿ ಗ್ರಾಮಗಳಲ್ಲಿ ಕಾವಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 6:07 IST
Last Updated 18 ಆಗಸ್ಟ್ 2025, 6:07 IST
ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿವಂಕದಲ್ಲಿನ ಸುಬ್ರಹ್ಮಣ್ಯ ದೇವಾಲಯದಲ್ಲಿ ಹರಿಕೆ ತೀರಿಸಲು ಸಾಗುತ್ತಿರುವ ಭಕ್ತರು
ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿವಂಕದಲ್ಲಿನ ಸುಬ್ರಹ್ಮಣ್ಯ ದೇವಾಲಯದಲ್ಲಿ ಹರಿಕೆ ತೀರಿಸಲು ಸಾಗುತ್ತಿರುವ ಭಕ್ತರು   

ಬಂಗಾರಪೇಟೆ: ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಭಾಗದ ಗ್ರಾಮಗಳಲ್ಲಿ ಶನಿವಾರ ಕಾವಡಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 

ಭಕ್ತರು ಕಾವಡಿಗಳನ್ನು ಹೊತ್ತು ಭಜನೆ ಮಾಡುತ್ತಾ ಮೆರವಣಿಗೆಯೊಂದಿಗೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದರು. ಕಾವಡಿ ಉತ್ಸವದಲ್ಲಿ ಭಕ್ತರು ಭಕ್ತಿ ಮತ್ತು ಶ್ರದ್ಧೆಯಿಂದ ಪಾಲ್ಗೊಂಡರು. 

ಕಾವಡಿ ಉತ್ಸವವು ಸುಬ್ರಹ್ಮಣ್ಯ ದೇವರಿಗೆ ಭಕ್ತರು ಅರ್ಪಿಸುವ ಭಕ್ತಿ ಮತ್ತು ತ್ಯಾಗದ ಸಂಕೇತವಾಗಿದೆ. ಆಷಾಢ ಮಾಸದಲ್ಲಿ ನಡೆಯುವ ಕಾವಡಿ ಉತ್ಸವವು ಈ ಬಾರಿ ಶ್ರಾವಣ ಮಾಸದಲ್ಲಿ ಆಚರಿಸುತ್ತಿರುವುದು ವಿಶೇಷ. ತಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿವಂಕದಲ್ಲಿರುವ ಬೆಟ್ಟದ ಮೇಲಿನ ಸುಬ್ರಮಣಿ ದೇವರಿಗೆ ವಿವಿಧ ರೀತಿಯಲ್ಲಿ ನೂರಾರು ಭಕ್ತರು ಹರಿಕೆ ತೀರಿಸಿದರು. 

ADVERTISEMENT

ಕಾವಡಿ ಹಬ್ಬಕ್ಕೆ ಮುಂಚಿತವಾಗಿ ಭಕ್ತರು ಉಪವಾಸ ಮತ್ತು ವ್ರತಗಳನ್ನು ಆಚರಿಸುತ್ತಾರೆ. ಭಕ್ತರು ಕಾವಡಿಯನ್ನು ಹೊತ್ತು  ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತಾರೆ. ದೇಹವನ್ನು ಚುಚ್ಚಿಕೊಳ್ಳುವುದು, ಒಬ್ಬರು ಬೆನ್ನಿಗೆ ನಿಂಬೆ ಹಣ್ಣುಗಳನ್ನು ಪೋಣಿಸಿಕೊಂಡು ಬಂದರೆ, ಮತ್ತೊಬ್ಬರು ಮೈ ಜುಮ್ ಅನ್ನಿಸುವ ರೀತಿ ಕೊಕ್ಕೆಗಳನ್ನು ಚುಚ್ಚಿಕೊಂಡು ಟ್ರ್ಯಾಕ್ಟರ್ ಎಳೆಯುವುದು, ಕಬ್ಬಿಣದ ರಾಡ್‌ನಿಂದ ನಾಲಗೆ ಚುಚ್ಚಿಕೊಂಡು ಹರಿಕೆ ತೀರಿಸಲಾಗುತ್ತದೆ. ಈ ರೀತಿಯ ಮೂಢನಂಬಿಕೆ ಆಚರಣೆಯನ್ನು ನಿಷೇಧಿಸಲಾಗಿದೆ. 

ಎರಡು ವರ್ಷಗಳ ಹಿಂದೆ ಇಂಥ ಆಚರಣೆಗೆ ಪೊಲೀಸರು ನಿಷೇಧ ಹೇರಿದ್ದರು. ಈ ವರ್ಷವೂ ಇಂಥ ಆಚರಣೆಯಲ್ಲಿ ಭಕ್ತರು ಪಾಲ್ಗೊಳ್ಳಬಾರದು ಎಂದು ಪೊಲೀಸರು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದರು. ಆದರೆ, ಪೊಲೀಸರ ಆದೇಶ ಧಿಕ್ಕರಿಸಿರುವ ನೂರಾರು ಮಂದಿ, ಬೆನ್ನಿಗೆ ಕೊಕ್ಕೆಗಳನ್ನು ಚುಚ್ಚಿಕೊಂಡು ಕ್ರೇನ್‌ನಡಿ ನೇತಾಡುವ ಮೂಲಕ ದೇವರಿಗೆ ಹರಕೆ ತೀರಿಸಿದರು. ಈ ನಡುವೆ, ಪೊಲೀಸರು ಮೂಕ ಪ್ರೇಕ್ಷಕರಾದರು.  

ಕಾವಡಿ ಉತ್ಸವಕ್ಕೆ ಕರ್ನಾಟಕದ ವಿವಿಧ ಭಾಗಗಳಿಂದ ಅಷ್ಟೇ ಅಲ್ಲದೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದಲೂ ಭಕ್ತರು ಬಂದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.