ಕೆಜಿಎಫ್: ನಗರದ ಹೊರವಲಯದ ಕಾವೇರಹಳ್ಳಿಯಲ್ಲಿ ಶನಿವಾರ ಗಡಿನಾಡು ಉತ್ಸವ ಕಾರ್ಯಕ್ರಮವನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಎಚ್. ರಾಮಚಂದ್ರಪ್ಪ ಮಾತನಾಡಿ, ‘ನಾಡು, ನುಡಿಯ ಅಭಿವೃದ್ಧಿ ಮತ್ತು ಪರಿಸರ ಕಾಪಾಡುವ ಬಗ್ಗೆ ಗಡಿ ಭಾಗದಲ್ಲಿ ಜಾಗೃತಿ ಮೂಡಿಸಲು ಸಿರಿಗನ್ನಡ ವೇದಿಕೆಯು ಗಡಿ ಪ್ರದೇಶದಲ್ಲಿ ಅಭಿಯಾನ ನಡೆಸುತ್ತಿದೆ’ ಎಂದು ಹೇಳಿದರು.
ರಾಜ್ಯದ ಶ್ರೀಮಂತ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎಲ್ಲ ಜನರಿಗೆ ಪರಿಚಯಿಸಬೇಕು. ಸರ್ಕಾರದ ಈ ಕೆಲಸದ ಜೊತೆಗೆ ಕನ್ನಡಪರ ಸಂಘಟನೆಗಳು ಕೆಲಸ ಮಾಡಿದರೆ ನಾಡು, ನುಡಿ ಅಭಿವೃದ್ಧಿಯಾಗುತ್ತದೆ. ಈ ದಿಸೆಯಲ್ಲಿ ಮುಂದಿನ ಗಡಿನಾಡ ಉತ್ಸವವನ್ನು ಶ್ರೀನಿವಾಸಪುರ ಸೋಮಯಾಜಲಪಲ್ಲಿ ಗ್ರಾಮದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಅಸಂಘಟಿತ ಕಾರ್ಮಿಕರು ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದರೆ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಶ್ರಮಿಕ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸನ್ಮಾನ ಮಾಡಿದರೆ ಅವರಿಗೆ ನಿಜವಾದ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಂತಾಗುವುದು. ಧರ್ಮಗ್ರಂಥಗಳ ಪ್ರಕಾರ ಪ್ರಾಣಿಗಳಿಗೆ ಆಹಾರ ನೀಡುವುದು ಪುಣ್ಯದ ಕಾರ್ಯ. ಅದೇ ರೀತಿ ಗೋದಾನ ದಾನಗಳಲ್ಲೇ ಶ್ರೇಷ್ಠವಾದುದು. ನಗರದ ಧಾತ್ರಿ ಗೋಶಾಲೆಯಲ್ಲಿ ಅನಾಥ ಹಸುಗಳನ್ನು ಸಾಕಲಾಗುತ್ತಿದೆ. ಇಂತಹ ಕೆಲಸಕ್ಕೆ ಪ್ರೋತ್ಸಾಹ ಸಿಗಬೇಕು ಎಂದು ನಿವೃತ್ತ ಶಿಕ್ಷಣಾಧಿಕಾರಿ ಅಶೋಕ್ ಹೇಳಿದರು.
ಪರಿಸರ ಅಭಿವೃದ್ಧಿಗೆ ರೋಟರಿ ಕ್ಲಬ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇತರ ಸಂಘಟನೆಗಳು ಕೈಜೋಡಿಸಬೇಕು ಎಂದು ಕೋಲಾರ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.
ಇದೇ ವೇಳೆ ಅಸಂಘಟಿತ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲ್ಲೂಕಿನ ಕವಿಗಳಿಂದ ಕವಿಗೋಷ್ಠಿ ನಡೆಯಿತು. ಸಾಧಕರಿಗೆ ಸನ್ಮಾನ ಮಾಡಲಾಯಿತು.
ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ಶಿವಕುಮಾರ್, ಪ್ರಭಾಕರ್, ಮುರಳಿಧರ್, ಜನಾರ್ಧನ್, ಮೋಹನ್‌ಸಿಂಗ್, ವೀರವೆಂಕಟಪ್ಪ, ಇಂಚರ ನಾರಾಯಣಸ್ವಾಮಿ, ಪ್ರಕಾಶ್, ಸುಪ್ರಿಂ, ಧನಂಜಯ, ಕೃಷ್ಣಪ್ಪ, ಸುಲೋಚನಾ, ಶೈಲಜಾ, ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.