ADVERTISEMENT

ಕೆ.ಸಿ.ರೆಡ್ಡಿ ಆಡಳಿತ ವೈಖರಿ ಮಾದರಿ

​ಪ್ರಜಾವಾಣಿ ವಾರ್ತೆ
Published 5 ಮೇ 2020, 15:53 IST
Last Updated 5 ಮೇ 2020, 15:53 IST
ಕೋಲಾರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಕೆ.ಸಿ.ರೆಡ್ಡಿ ಜನ್ಮ ದಿನೋತ್ಸವ ಆಚರಿಸಲಾಯಿತು.
ಕೋಲಾರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಕೆ.ಸಿ.ರೆಡ್ಡಿ ಜನ್ಮ ದಿನೋತ್ಸವ ಆಚರಿಸಲಾಯಿತು.   

ಕೋಲಾರ: ‘ಮೈಸೂರು ಸಂಸ್ಥಾನದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಮಾದರಿಯಲ್ಲಿ ಅಭಿವೃದ್ಧಿ ಕೆಲಸ ಮಾಡುವ ಜತೆಗೆ ಮತ್ತೊಮ್ಮೆ ಕೋಲಾರ ಜಿಲ್ಲೆಯವರು ಮುಖ್ಯಮಂತ್ರಿಯಾಗಬೇಕು’ ಎಂದು ಕೆ.ಸಿ.ರೆಡ್ಡಿ ಅವರು ಮೊಮ್ಮಗಳು ವಸಂತ ಕವಿತಾ ರೆಡ್ಡಿ ಆಶಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಕೆ.ಸಿ.ರೆಡ್ಡಿ ಜನ್ಮ ದಿನೋತ್ಸವದಲ್ಲಿ ಮಾತನಾಡಿ,  ‘ಕೆ.ಸಿ.ರೆಡ್ಡಿಯವರು ಜಾತಿ, ಧರ್ಮಕ್ಕೆ ಸೀಮಿತವಾಗದೆ ಎಲ್ಲರೂ ಸಮಾನರು ಎಂಬ ಭಾವನೆಯೊಂದಿಗೆ ಜನಪರ ಆಡಳಿತ ನಡೆಸಿದರು. ಅವರ ಆಡಳಿತ ವೈಖರಿಯು ಈಗಿನ ಸರ್ಕಾರಗಳಿಗೆ ಮಾದರಿಯಾಗಬೇಕು’ ಎಂದರು.

‘ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಕೆ.ಸಿ.ರೆಡ್ಡಿಯವರ ಸ್ಮಾರಕ ನಿರ್ಮಾಣ ಮಾಡಲಾಯಿತು. ಮೈಸೂರು ಸಂಸ್ಥಾನದಲ್ಲಿದ್ದ ನಮ್ಮ ಆಡಳಿತ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಹಿಸಿದ ಕೀರ್ತಿ ಕೆ.ಸಿ.ರೆಡ್ಡಿ ಅವರಿಗೆ ಸಲ್ಲುತ್ತದೆ. ಅಲ್ಲದೇ, ಅವರು ದೇಶದಲ್ಲಿ ಕೈಗಾರಿಕೆಗಳು ಬೆಳೆಯಲು ಸಾಕಷ್ಟು ಉತ್ತೇಜನ ನೀಡಿದರು’ ಎಂದು ಸ್ಮರಿಸಿದರು.

ADVERTISEMENT

‘ರಾಜ್ಯದಲ್ಲಿ ಜನರು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಕ್ಷವನ್ನು ಪರಿಣಾಮಕಾರಿಯಾಗಿ ಮುನ್ನಡೆಸುತ್ತಿದ್ದಾರೆ. ಜತೆಗೆ ಆಡಳಿತ ಪಕ್ಷ ಬಿಜೆಪಿಯನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಯುವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ ಕೆ.ಸಿ.ರೆಡ್ಡಿ ಸರೋಜಮ್ಮ ಪ್ರತಿಷ್ಠಾನದ ವತಿಯಿಂದ ಬಡವರಿಗೆ ಸಹಾಯ ಮಾಡಲಾಗುತ್ತಿದೆ. ಕೆ.ಸಿ.ರೆಡ್ಡಿಯವರ ಹೆಸರಿನಲ್ಲಿ ಗ್ರಂಥಾಲಯ ಆರಂಭಿಸಿದ್ದು, ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆಯಬೇಕು. ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಸುಣ್ಣ ಬಣ್ಣ ಬಳಿಸಿ ನವೀಕರಣಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ಹೆಮ್ಮೆಯ ವಿಚಾರ

‘ಜಿಲ್ಲೆಯ ಕೆ.ಸಿ.ರೆಡ್ಡಿಯವರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದು, ನಾವೆಲ್ಲಾ ಹೆಮ್ಮೆಪಡುವ ವಿಚಾರ. ಪಕ್ಷದ ವತಿಯಿಂದ ಪ್ರತಿ ವರ್ಷ ಕೆ.ಸಿ.ರೆಡ್ಡಿ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಮುರಳಿ ತಿಳಿಸಿದರು.

ನಗರಸಭೆ ಮಾಜಿ ಸದಸ್ಯ ಲಾಲ್‌ ಬಹದ್ದೂರ್‌ ಶಾಸ್ತ್ರಿ, ರಾಜ್ಯ ರೆಡ್ಡಿ ಜನ ಸಂಘದ ನಿರ್ದೇಶಕ ಸತೀಶ್‌ರೆಡ್ಡಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.