ADVERTISEMENT

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕೆ.ಸಿ.ವ್ಯಾಲಿ ರದ್ದು

ಕೋಲಾರ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರ ಜೆಡಿಎಸ್‌ಗೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:23 IST
Last Updated 24 ನವೆಂಬರ್ 2022, 4:23 IST
ಶ್ರೀನಿವಾಸಪುರ ತಾಲ್ಲೂಕಿನ ನಕ್ಕಲಗಡ್ಡ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು
ಶ್ರೀನಿವಾಸಪುರ ತಾಲ್ಲೂಕಿನ ನಕ್ಕಲಗಡ್ಡ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು   

ಶ್ರೀನಿವಾಸಪುರ: ‘ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕೋಲಾರ ಜಿಲ್ಲೆಗೆ ವಿಷ ಉಣಿಸುತ್ತಿರುವ ಕೆ.ಸಿ.ವ್ಯಾಲಿ ಯೋಜನೆ ರದ್ದುಪಡಿಸುವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ನಕ್ಕಲಗಡ್ಡ ಗ್ರಾಮದಲ್ಲಿ ಬುಧವಾರ ಪಂಚರತ್ನ ರಥಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆ.ಸಿ.ವ್ಯಾಲಿ ನೀರನ್ನು ಕೊಡಲೇಬೇಕು ಎಂದರೆ ಮೂರನೇ ಹಂತದ ಸಂಸ್ಕರಣ ಘಟಕ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಆದರೆ, ಈಗ ಎರಡನೇ ಹಂತದ ಘಟಕದಲ್ಲೇ ಮೋಟಾರ್‌ ಕೆಟ್ಟು ಹೋಗಿವೆ. ಶುದ್ಧೀಕರಿಸದೆನೇರವಾಗಿ ನೀರು ಹರಿಸಲಾಗುತ್ತಿದೆ. ಹೀಗಾಗಿ, ಮೂರನೇ ಹಂತದಲ್ಲಿ ಸಂಸ್ಕರಿಸದೆಬೆಂಗಳೂರಿನಿಂದ ಒಂದೂ ಹನಿ ನೀರು ಹರಿಯಲು ಬಿಡಲ್ಲ. ಯೋಜನೆ ಸಂಪೂರ್ಣ ರದ್ದು ಮಾಡುತ್ತೇನೆ’ ಎಂದರು.

‘ಕಾಂಗ್ರೆಸ್‌ನವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜೇಬು ತುಂಬಿಸಿಕೊಂಡಿದ್ದಾರೆ. ಪೈಪ್‌ ಎಳೆಯಲು ಎಷ್ಟು ಪರ್ಸೆಂಟ್‌ ತೆಗೆದುಕೊಂಡಿದ್ದಾರೆ ಎಂಬುದು ಜಗಜ್ಜಾಹೀರು. ಈಗ ಬಿಜೆಪಿ ಸರ್ಕಾರದ 40 ಪರ್ಸೆಂಟ್‌ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಕರ್ನಾಟಕ–ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ‘ನೆಲ ಜಲ ವಿಷಯದಲ್ಲಿ ಡಬಲ್‌ ಎಂಜಿನ್‌ ಬಿಜೆ‍ಪಿ ಸರ್ಕಾರ ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ನಾಡಿಗೆ ದ್ರೋಹ ಬಗೆಯುತ್ತಿದೆ’ ಎಂದುವಾಗ್ದಾಳಿ ನಡೆಸಿದರು.

ಕೋಲಾರ ಜಿಲ್ಲಾ ಪ್ರವಾಸ ಯಶಸ್ವಿಯಾಗಿದೆ. ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ. ಮುಂದಿನ ಚುನಾವಣೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಆರಿಸಿ ಬರುವುದು ಖಚಿತ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಂಚರತ್ನ ಯೋಜನೆ ಪ್ರಾಮಾಣಿಕ ಅನುಷ್ಠಾನದಿಂದ ಸಮಾಜದ ಎಲ್ಲ ವರ್ಗದ ಜನರ ಸಮಸ್ಯೆ ಪರಿಹಾರ ಸಾಧ್ಯವಾಗುತ್ತದೆ. ಮಕ್ಕಳಿಗೆ ಉಚಿತ ಹಾಗೂ ಗುಣಾತ್ಮಕ ಶಿಕ್ಷಣ ನೀಡಲು ಒತ್ತು ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ 1.62 ಲಕ್ಷ ಮಕ್ಕಳ ಕೊರತೆ ಉಂಟಾಗಿರುವುದು ಕಳವಳಕಾರಿ. ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿ.ಕೆ.ನಾಗರಾಜ್, ಬಿ.ವಿ.ಶಿವಾರೆಡಡಿ, ಸಿಎಂಆರ್ ಶ್ರೀನಾಥ್, ಕುಂದಿಟಿವಾರಿಪಲ್ಲಿ ಶಿವಾರೆಡ್ಡಿ, ಸಮೃದ್ಧ ಮಂಜುನಾಥ್, ಶಶಿಕುಮಾರ್, ಶೇಷಾದ್ರಿ, ಅಬ್ದುಲ್, ರಾಜಣ್ಣ, ಶ್ರೀನಿವಾಸ್, ಬಾಬು, ಪಾಷ, ರಾಜೇಶ್ವರಿ, ಗಾಯಿತ್ರಿ ಮುತ್ತಪ್ಪ ಇದ್ದರು.

ಕುಂದು ಕೊರತೆ ವಿಚಾರಣೆ: ಮಂಗಳವಾರ ನಿಗದಿತ ಮಾರ್ಗದಲ್ಲಿ ಪ್ರವಾಸ ಮುಗಿಸಿ ಜಡಿಮಳೆ ನಡುವೆ ತಡರಾತ್ರಿ ನಕ್ಕಲಗಡ್ಡ ಗ್ರಾಮಕ್ಕೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ, ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಾಗದೆ ವಿಶ್ರಾಂತಿ ಪಡೆದರು. ಬುಧವಾರ ಬೆಳಿಗ್ಗೆ ಚಿಂತಾಮಣಿ ತಾಲ್ಲೂಕು ಪ್ರವಾಸಕ್ಕೆ ಹೊರಡುವ ಮುನ್ನ ಗ್ರಾಮಸ್ಥರ ಕುಂದು ಕೊರತೆ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.