ADVERTISEMENT

ಅಗತ್ಯ ವಸ್ತು ದರದ ಮೇಲೆ ನಿಗಾ

ಸಮಿತಿ ರಚನೆ: ಜಿಲ್ಲಾಧಿಕಾರಿ ಸೆಲ್ವಮಣಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 2 ಮೇ 2021, 17:34 IST
Last Updated 2 ಮೇ 2021, 17:34 IST

ಕೋಲಾರ: ಕೋವಿಡ್‌ ಆತಂಕ ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ದರ ಏರಿಳಿಕೆ ಬಗ್ಗೆ ನಿಗಾ ವಹಿಸಲು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯು ಸಮಿತಿ ರಚಿಸಿದೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದೆಲ್ಲೆಡೆ ಕೋವಿಡ್‌ 2ನೇ ಅಲೆ ಆರ್ಭಟ ಜೋರಾಗಿದೆ. ಹೀಗಾಗಿ ಸರ್ಕಾರ ಮೇ 12ರವರೆಗೆ ಲಾಕ್‌ಡೌನ್‌ ಘೋಷಿಸಿದ್ದು, ಅಗತ್ಯ ವಸ್ತುಗಳ ಪೂರೈಕೆ ಮತ್ತು ಲಭ್ಯತೆಗಾಗಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ದಿನಸಿ, ತರಕಾರಿ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಜನಸಾಮಾನ್ಯರಿಗೆ ಲಭ್ಯವಾಗುವಷ್ಟು ಅಗತ್ಯ ವಸ್ತುಗಳ ದಾಸ್ತಾನು ಇದೆ. ಯಾವುದೇ ಸಗಟು ಅಥವಾ ಚಿಲ್ಲರೆ ಮಾರಾಟಗಾರರು ಅಗತ್ಯ ವಸ್ತುಗಳ ದಾಸ್ತಾನು ಇಲ್ಲವೆಂದು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಆಹಾರ ನಾಗರಿಕ ಸರಬರಾಜು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಮುಕ್ತ ಮಾರುಕಟ್ಟೆ ಅಂಗಡಿಗಳಿಗೆ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ನಿರ್ದೇಶನ ನೀಡುತ್ತಾರೆ. ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಳಿಕೆಯಾಗದಂತೆ ಕ್ರಮ ವಹಿಸಲು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಕೃಷಿ ಪರಿಕರ, ಉತ್ಪನ್ನಗಳು ಹಾಗೂ ಸರಕು ಸಾಗಾಣಿಕೆಗೆ ತೊಂದರೆಯಾದರೆ ಸಹಾಯವಾಣಿ ಸಂಖ್ಯೆ 08152 222246 ಅಥವಾ ಜಿಲ್ಲಾ ನಿಯಂತ್ರಣ ಕೊಠಡಿ ಸಂಖ್ಯೆ 08152 243506ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಜನರಿಗೆ ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜನಸಾಮಾನ್ಯರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಆತಂಕ ಒಳಗಾಗದೆ ಅಗತ್ಯ ವಸ್ತುಗಳನ್ನು ನಿಯಮಿತವಾಗಿ ಖರೀದಿಸಬೇಕು. ಎಲ್ಲರಿಗೂ ಅಗತ್ಯ ವಸ್ತುಗಳು ದೊರಕುವಂತೆ ಸಹಕರಿಸಬೇಕು. ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರಬಂದು ರಸ್ತೆಯಲ್ಲಿ ಓಡಾಡಬಾರದು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.