ಬಂಗಾರಪೇಟೆ: ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗೆ ಸದಸ್ಯರು ಗೈರಾಗಿ, ಪಾರ್ಟಿ ಮಾಡಿಕೊಂಡು ಕಾಲಹರಣ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಕೇತಗಾನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೆ.ಜಿ ಶ್ರೀನಿವಾಸ್ ಅವರು ಸದಸ್ಯರೊಂದಿಗೆ ನಿಕಟ ಸಂಪರ್ಕ ಹೊಂದದೆ ಏಕಪಕ್ಷೀಯ ನಿರ್ಧಾರ ಕೈಗೊಂಡು ಸದಸ್ಯರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಅಧ್ಯಕ್ಷರ ವಿರುದ್ಧ ವಿಶ್ವಾಸ ಮೂಲಕ ಪದಚ್ಯುತಿಗೊಳಿಸಲು ಯತ್ನ ನಡೆಸಿ ವಿಫಲರಾಗಿದ್ದರು. ಹಾಗಾಗಿ ಈಗ ಕರೆದಿರುವ ಸಾಮಾನ್ಯ ಸಭೆಗೆ 19 ಸದಸ್ಯರ ಪೈಕಿ 8 ಮಂದಿ ಹಾಜರಿದ್ದು, ಉಳಿದವರು ಪಾರ್ಟಿ ನಡೆಸಿದ್ದಾರೆ ಎಂಬುದು ತಿಳಿದಿ ಬಂದಿದೆ.
ಸಭೆಗೆ ಸದ್ಯಸರು ಉದ್ದೇಶಪೂರ್ವಕವಾಗಿ ಗೈರಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯದ ನಿರ್ಣಯ ಕೈಗೊಳ್ಳದಂತೆ ಮಾಡಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ಕಿಡಿಕಾರಿದ್ದಾರೆ.
11 ಗಂಟೆಗೆ ಸಭೆ ನಿಗಧಿಮಾಡಿದ್ದು, 12ರವರೆಗೆ ಸದಸ್ಯರು ಬಾರದ ಕಾರಣ ಸಭೆಯನ್ನು ಪಿಡಿಒ ಯಶ್ವಂತದ ಮುಂದೂಡಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಗ್ರಾಮ ಪಂಚಾಯಿತಿ ಸದಸ್ಯರು ಸತತವಾಗಿ ನಾಲ್ಕು ಸಾಮಾನ್ಯ ಸಭೆಗಳಿಗೆ ಪೂರ್ವಾನುಮತಿ ಇಲ್ಲದೆ ಗೈರಾದರೆ ಸದಸ್ಯರು ತಮ್ಮ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆಯಿದೆ.–ಯಶ್ವಂತ್, ಪಿಡಿಓ ಕೇತಗಾನಹಳ್ಳಿ
ಆಡಳಿತ ಮಂಡಳಿಯ ಅವಧಿ ಕೇವಲ ಮೂರು ತಿಂಗಳಿದ್ದು ರಾಜಕೀಯ ವೈಷಮ್ಯ ತೊರೆದು ಸದಸ್ಯರು ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿ ನಿರ್ಣಯ ತೆಗೆದುಕೊಂಡು ಅಭಿವೃದ್ಧಿಗೆ ಸಹಕರಿಸಿ.–ಮಂಜುಳಾ ಕೆ.ಜಿ ಶ್ರೀನಿವಾಸ್, ಅಧ್ಯಕ್ಷೆ ಕೇತಗಾನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.