ADVERTISEMENT

ಕೆಜಿಎಫ್‌ | ಕೈಗಾರಿಕೆ ಟೌನ್‌ ಶಿಪ್‌ ನಿರ್ಮಾಣಕ್ಕೆ ಸಿಎಂ ಘೋಷಣೆ

ನಗರದಲ್ಲಿ ಸಂಭ್ರಮದ ವಾತಾವರಣ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 14:47 IST
Last Updated 11 ನವೆಂಬರ್ 2023, 14:47 IST
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ   

ಕೆಜಿಎಫ್‌: ಬೆಮಲ್‌ನಿಂದ ವಾಪಸ್ ಪಡೆದಿರುವ 976 ಎಕರೆ ಜಮೀನಿನಲ್ಲಿ ಕೈಗಾರಿಕೆ ಟೌನ್‌ಶಿಪ್‌ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಘೋಷಣೆ ಮಾಡಿದ್ದಾರೆ.

ಬೆಮಲ್‌ ಕಾರ್ಖಾನೆ ಸ್ಥಾಪನೆಯಾದಾಗ ರಾಜ್ಯ ಸರ್ಕಾರ ನೀಡಿದ್ದ ಜಾಗದಲ್ಲಿ 976 ಎಕರೆ ಜಮೀನನ್ನು ಬೆಮಲ್‌ ಬಳಸದೆ ಹಾಗೆಯೇ ಉಳಿಸಿಕೊಂಡಿತ್ತು. ಬಿಜಿಎಂಎಲ್ ಮುಚ್ಚಿದ ಮೇಲೆ ಉಂಟಾದ ನಿರುದ್ಯೋಗ ಸಮಸ್ಯೆಯಿಂದ ಬದಲಿ ಕೈಗಾರಿಕೆ ಸ್ಥಾಪನೆಗೆ ಯತ್ನಿಸುತ್ತಿದ್ದ ಶಾಸಕಿ ಎಂ.ರೂಪಕಲಾ ಬೆಮಲ್ ಅಧಿಕಾರಿಗಳೊಂದಿಗೆ ವ್ಯವಹರಿಸಿ ಬಾಕಿ ಇದ್ದ ಜಾಗವನ್ನು ರಾಜ್ಯ ಸರ್ಕಾರಕ್ಕೆ ಮರಳಿ ಪಡೆಯುವಲ್ಲಿ ಸಫಲರಾಗಿದ್ದರು. ಹಿಂದೆ ಕೈಗಾರಿಕೆ ಸಚಿವರಾಗಿದ್ದ ಜಗದೀಶ್ ಶೆಟ್ಟರ್‌ ಮತ್ತು ಮುರಗೇಶ್ ನಿರಾಣಿ ಸ್ಥಳ ಪರಿಶೀಲನೆ ಮಾಡಿ ಕೈಗಾರಿಕೆಗೆ ಸೂಕ್ತ ಸ್ಥಳ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಕಂದಾಯ ಇಲಾಖೆಯ ವಶದಲ್ಲಿರುವ ಭೂಮಿಯನ್ನು ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಹಸ್ತಾಂತರ ಮಾಡುವಷ್ಟರಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು, ಯೋಜನೆ ನೆನೆಗುದಿಗೆ ಬಿದ್ದಿತ್ತು.

ವಿಧಾನಸಭೆಯ ಕಲಾಪದಲ್ಲಿ ಈಗಾಗಲೇ ಕೈಗಾರಿಕೆ ಪ್ರದೇಶದ ಪ್ರಸ್ತಾವನೆಯ ಆಶ್ವಾಸನೆ ಸರ್ಕಾರದಿಂದ ಬಂದಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯರಗೋಳ್‌ ಜಲಾಶಯದ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ  ಕೈಗಾರಿಕೆ ಟೌನ್‌ಶಿಪ್‌ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿರುವುದು ನಗರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ADVERTISEMENT

ಯರಗೋಳ್‌ ನೀರಿನ ಯೋಜನೆಯನ್ನು ಕೆಜಿಎಫ್ ನಗರಕ್ಕೆ ಸಹ ವಿಸ್ತರಣೆ ಮಾಡಬೇಕು ಎನ್ನುವ ಬೇಡಿಕೆಗೆ ಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿರುವುದು ಕೂಡ ನಗರದ ದೃಷ್ಟಿಯಲ್ಲಿ ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಬೇತಮಂಗಲದಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಅದು ಸಾಕಾಗುತ್ತಿಲ್ಲ. ನಗರಕ್ಕೆ ಕೈಗಾರಿಕೆಗಳು ಬರಲಿದ್ದು, ನೀರಿನ ಅವಶ್ಯಕತೆ ಹೆಚ್ಚಾಗಿದೆ. ನೀರಿನ ಸಂಗ್ರಹಕ್ಕೆ ಬಿಜಿಎಂಎಲ್ ಪ್ರದೇಶದಲ್ಲಿ ದೊಡ್ಡ ಮಟ್ಟದ ಸಂಗ್ರಹಾಲಯಗಳು ಇರುವುದರಿಂದ ನೀರು ಸಂಗ್ರಹಕ್ಕೆ ತೊಂದರೆಯಾಗುವುದಿಲ್ಲ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಯರಗೋಳ್ ನೀರನ್ನು ನಗರಕ್ಕೆ ಸರಬರಾಜು ಮಾಡಲು ಸಾಧ್ಯವಿದ್ದು, ಅಂಗೀಕಾರ ನೀಡಬೇಕು ಎಂದು ಶಾಸಕಿ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.