ADVERTISEMENT

ಕೆಜಿಎಫ್ ಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನ: ಸಚಿವ ರಹೀಂ ಖಾನ್

ನಗರದಲ್ಲಿರುವ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಡಲು ಆದ್ಯತೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:07 IST
Last Updated 10 ಫೆಬ್ರುವರಿ 2026, 5:07 IST
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯಲ್ಲಿರುವ ಇಂದಿರಾ ಕ್ಯಾಂಟಿನ್‌ನಲ್ಲಿ ಸಚಿವ ರಹೀಂಖಾನ್‌ ಸೋಮವಾರ ತಿಂಡಿ ಸವಿದರು. ಶಾಸಕಿ ಎಂ.ರೂಪಕಲಾ ಇದ್ದರು
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯಲ್ಲಿರುವ ಇಂದಿರಾ ಕ್ಯಾಂಟಿನ್‌ನಲ್ಲಿ ಸಚಿವ ರಹೀಂಖಾನ್‌ ಸೋಮವಾರ ತಿಂಡಿ ಸವಿದರು. ಶಾಸಕಿ ಎಂ.ರೂಪಕಲಾ ಇದ್ದರು   

ಕೆಜಿಎಫ್‌: ನಗರಸಭೆ ವ್ಯಾಪ್ತಿಯಲ್ಲಿ ಶೌಚಾಲಯ ಇಲ್ಲದ ಮನೆಗಳಿಗೆ ಶೌಚಾಲಯ ನಿರ್ಮಿಸಲು ₹25 ಕೋಟಿ ಮೀಸಲಿಡಲಾಗಿದೆ. ಅಗತ್ಯವಿರುವ ನಗರಸಭೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಸೋಮವಾರ ತಿಳಿಸಿದರು. 

ರಾಬರ್ಟ್‌ಸನ್‌ಪೇಟೆ ನಗರಸಭೆಯಲ್ಲಿ ನಡೆದ ಕೋಲಾರ ಜಿಲ್ಲೆಯ ಎಲ್ಲ ನಗರಸಭೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. 

ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಗಣಿ ಪ್ರದೇಶವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ. ಈ ಬಗ್ಗೆ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದರು. 

ADVERTISEMENT

ಕೆಜಿಎಫ್ ಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಈ ಪೈಕಿ ₹10 ಕೋಟಿ ನಗರ ಭಾಗಕ್ಕೆ ಉಳಿದ ₹40 ಕೋಟಿಯನ್ನು ಗ್ರಾಮೀಣ ಭಾಗದ ಅಭಿವೃದ್ಧಿಗೆ ಉಪಯೋಗಿಸಲಾಗುತ್ತದೆ ಎಂದು ಕ್ಷೇತ್ರದ ಶಾಸಕರು ತಿಳಿಸಿದ್ದಾರೆ. ನಗರಸಭೆ ವ್ಯಾಪ್ತಿ ಬಗ್ಗೆ ಗೊಂದಲ ನಿವಾರಿಸಲು ಹೊಸ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಇದರಿಂದ ಸರ್ವೆ ಗಡಿ ಗುರುತಿಸಲು ಸಾಧ್ಯವಾಗುತ್ತದೆ. ಇದರಿಂದ ನಗರಸಭೆ ಜಾಗವನ್ನು ಪಂಚಾಯಿತಿಗಳು ಖಾತೆ ಮಾಡುವುದನ್ನು ತಡೆಗಟ್ಟಬಹುದು ಎಂದರು. 

ಕೆಜಿಎಫ್ ನಗರಸಭೆಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದಿರಬಹುದು. ಇದೇ ಕಾರಣಕ್ಕೆ ಲೋಕಾಯುಕ್ತ ಅಧಿಕಾರಿಗಳು ನಗರಸಭೆ ಮೇಲೆ ಪದೇಪದೇ ದಾಳಿ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ವರದಿ ಸಲ್ಲಿಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ನಗರದಲ್ಲಿ ಉದ್ಯಾನಗಳ ಅಭಿವೃದ್ಧಿ ಮತ್ತು ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಅಧಿಕಾರಿಗಳು ಎಲ್ಲ ಉದ್ಯಾನಗಳ ಚಿತ್ರಗಳನ್ನು ಮತ್ತು ಅಭಿವೃದ್ಧಿಪಡಿಸಿದ ವರದಿಯನ್ನು ಇಲಾಖೆಗೆ ನೀಡಬೇಕು ಎಂದರು. 

ನಗರದಲ್ಲಿ ನಡೆದ ಬೀದಿದೀಪಗಳ ಹಗರಣದ ಕುರಿತು ಸಚಿವರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಸೋಡಿಯಂ ದೀಪಗಳಿಗೆ ಹೆಚ್ಚಿನ ವಿದ್ಯುತ್ ಬೇಕಿದೆ. ಹೀಗಾಗಿ, ಈ ದೀಪಗಳನ್ನು ಎಲ್ಲೂ ಹಾಕುತ್ತಿಲ್ಲ ಎಂದು ಹೇಳಿದರು. ಆದರೆ, ದಾಖಲೆಗಳಲ್ಲಿ ಸೋಡಿಯಂ ದೀಪಗಳ ನಿರ್ವಹಣೆಗೆ ಪ್ರತಿ ತಿಂಗಳು ₹2.80 ಲಕ್ಷ ಗುತ್ತಿಗೆ ನೀಡುತ್ತಿರುವ ಬಗ್ಗೆ ಬಂದ ದೂರುಗಳ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು. 

ನಗರದಲ್ಲಿರುವ ಇಂದಿರಾ ಕ್ಯಾಂಟಿನ್‌ ರಾಜ್ಯದಲ್ಲಿಯೇ ಉತ್ತಮ ಕ್ಯಾಂಟಿನ್‌ ಎನ್ನಬಹುದು. ಹೆಚ್ಚುವರಿ ಟೋಕನ್‌ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ನಗರದಲ್ಲಿ ಮತ್ತೊಂದು ಇಂದಿರಾ ಕ್ಯಾಂಟಿನ್‌ ಮಂಜೂರಾತಿಗೆ ಬೇಡಿಕೆ ಸಲ್ಲಿಕೆಯಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. 

ಮೈನಿಂಗ್‌ ಪ್ರದೇಶದಲ್ಲಿ ಕಾರ್ಮಿಕರು ಕಟ್ಟಿಕೊಂಡಿರುವ ಜಾಗವು ಕಾರ್ಮಿಕರ ಸ್ವಂತ ಜಾಗವಲ್ಲ. ಅಲ್ಲಿ ಶೌಚಾಲಯ ನಿರ್ಮಿಸಲು ಕಷ್ಟವಾಗುತ್ತಿದೆ. ‍ಶೌಚಾಲಯವನ್ನು ನಗರಸಭೆ ಸಿಬ್ಬಂದಿ ಸ್ವಚ್ಛ ಮಾಡಲು ಸಾಧ್ಯವಿಲ್ಲ. ಶೌಚಾಲಯವನ್ನು ಯಂತ್ರಗಳ ಮೂಲಕವೇ ಸ್ವಚ್ಛಗೊಳಿಸಬೇಕು. ಈ ನಿಟ್ಟಿನಲ್ಲಿ ಯತ್ನಿಸಲಾಗುತ್ತಿದೆ ಎಂದು ಶಾಸಕಿ ರೂಪಕಲಾ ತಿಳಿಸಿದರು. 

ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ನಸೀರ್‌ ಅಹ್ಮದ್‌, ಜಿಲ್ಲಾಧಿಕಾರಿ ಎಂ.ಆರ್.ರವಿ, ಪೌರಾಯುಕ್ತ ಶ್ರೀಧರ್‌ ಇದ್ದರು.

ಮಾರುಕಟ್ಟೆ ನಿರ್ಮಾಣಕ್ಕೆ ಸಹಕಾರ

ನಗರದಲ್ಲಿರುವ ಎಂ.ಜಿ.ಮಾರುಕಟ್ಟೆಗೆ ನೂರು ವರ್ಷದಾಗಿದ್ದು ಉಪಯೋಗವಿಲ್ಲದಾಗಿತ್ತು. ಅದಕ್ಕೆ ಹೊಸ ರೂಪ ನೀಡಲಾಗುವುದು. ಈಗಾಗಲೇ ಡಿಪಿಆರ್‌ ಸಿದ್ಧವಾಗಿದ್ದು ಅನುಮೋದನೆಗಾ ಸಚಿವಾಲಯಕ್ಕೆ ಕಳುಬಿಸಬೇಕು. ಸರ್ಕಾರದ ಏಜೆನ್ಸಿಗಳಿಂದ ಮಾರುಕಟ್ಟೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗುವುದು. ಎಲ್ಲರಿಗೂ ಅನುಕೂಲವಾಗುವ ಮಾರುಕಟ್ಟೆ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು. ಮಾರುಕಟ್ಟೆಯನ್ನು ನಂಬಿ ಹಲವಾರು ಕುಟುಂಬಗಳು ಇವೆ. ಅವರಿಗೆಲ್ಲಾ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ. ಒಂದು ವರ್ಷದಲ್ಲಿ ಮಾರುಕಟ್ಟೆ ಪೂರ್ಣಗೊಳಿಸಲಾಗುವುದು ಎಂದು ಸಚಿವ ರಹೀಂ ಖಾನ್ ತಿಳಿಸಿದರು. ರಾಜ್ಯದೆಲ್ಲೆಡೆ ಕಸ ವಿಲೇವಾರಿ ಸಮಸ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೂಡ ಕಸ ವಿಲೇವಾರಿ ಸಮರ್ಪಕ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಕಸ ವಿಲೇವಾರಿಗೆ ನಗರಸಭೆ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಎಲ್ಲೆಂದರಲ್ಲಿ ಕಸ ಹಾಕಬಾರದು. ಶೇ. 80ರಷ್ಟು ಕಸದ ಸಮಸ್ಯೆ ನಿವಾರಣೆಯಾಗಿದೆ. ಕೆಲವೇ ದಿನಗಳಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.