
ಕೆಜಿಎಫ್: ನಕಲಿ ಮರಣ ಪ್ರಮಾಣಪತ್ರ ಮತ್ತು ಕಾನೂನು ವಿರೋಧವಾಗಿ ವಂಶ ವೃಕ್ಷ ವಿತರಣೆ ಮಾಡಿದ ಸಂಬಂಧ ಲೋಕಾಯುಕ್ತ ಪೊಲೀಸರು ಬುಧವಾರ ನಗರಸಭೆ ಮತ್ತು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರಸಭೆಯಲ್ಲಿ ಆರೋಗ್ಯ ನಿರೀಕ್ಷಕಿಯಾಗಿದ್ದ ಸರಸ್ವತಿ ಎಂಬುವರು ಬದುಕಿದ್ದ ವ್ಯಕ್ತಿಗೆ ಮರಣಪ್ರಮಾಣ ಪತ್ರವನ್ನು ನೀಡಿದ್ದರು. ಮರಣ ಪತ್ರದ ಆಧಾರದ ಮೇಲೆ ತಾಲ್ಲೂಕು ಕಚೇರಿಯಲ್ಲಿ ಉಪ ತಹಶೀಲ್ದಾರ್ ಜನಾರ್ಧನ ಸಿಂಗ್, ಆಗಿನ ಕಂದಾಯ ಇನ್‌ಸ್ಪೆಕ್ಟರ್ ರಘುರಾಮಸಿಂಗ್ ಮತ್ತು ಗ್ರಾಮ ಲೆಕ್ಕಿಗ ಚಂದ್ರು ಎಂಬುವರು ವಂಶ ವೃಕ್ಷ ವಿತರಣೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಎರಡೂ ಅಕ್ರಮ ದಾಖಲೆಗಳನ್ನು ಇಟ್ಟುಕೊಂಡು ಬೆಂಗಳೂರಿನಲ್ಲಿದ್ದ ಕೋಟಿಗಟ್ಟಲೆ ಮೌಲ್ಯದ ಜಮೀನನ್ನು ಮಾರಾಟ ಮಾಡಲಾಗಿತ್ತು. ಜಮೀನು ಕಳೆದುಕೊಂಡವರು ಬದುಕಿದ್ದಾಗಲೇ ಈ ಕೃತ್ಯ ನಡೆದಿದ್ದು, ಅವರು ಬೆಂಗಳೂರಿನ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಹಿನ್ನೆಲೆ ಮುಂಜಾನೆಯಿಂದ ಸಂಜೆವರೆವಿಗೂ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್ ರೇಣುಕಾ ಮತ್ತು ಸಿಬ್ಬಂದಿ ಎರಡೂ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು. ತಾಲ್ಲೂಕು ಕಚೇರಿಯಲ್ಲಿ ಉಪ ತಹಶೀಲ್ದಾರ್ ಜನಾರ್ಧನ ಸಿಂಗ್ ಅವರ ವಿಚಾರಣೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.