ಕೆಜಿಎಫ್: ತಾಲ್ಲೂಕಿನಲ್ಲಿ ವಿವಿಧೆಡೆ ಚರ್ಚ್, ಸಾರ್ವಜನಿಕ ಸ್ಥಳಗಳಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಗೆ ಭರದಿಂದ ಸಾಗುತ್ತಿದೆ.
ಕಳೆದ ಒಂದು ವಾರದಿಂದಲೇ ಯುವಕರು ಸಮೀಪದ ಗ್ರಾಮಗಳಿಗೆ ತೆರಳಿ ಉದ್ದನೆಯ ಹುಲ್ಲು ಕಡ್ಡಿಗಳನ್ನು ತಂದು ರಾಶಿ ಹಾಕುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಹ ಮಾರಾಟಕ್ಕೆ ಸಿಗುತ್ತದೆ. ಅದರ ಜೊತೆಗೆ ಗುಂಡು ಕಲ್ಲುಗಳು, ಕ್ರಿಸ್ಮಸ್ ಟ್ರೀ ರಂಬೆಗಳನ್ನು ತಂದು ಸಾರ್ವಜನಿಕ ಪ್ರದೇಶದಲ್ಲಿ ಕುಟೀರ ನಿರ್ಮಾಣ ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಾಣಸಿಗುತ್ತಿದೆ. ಇಂತಹ ಕುಟೀರಗಳಲ್ಲಿ ಶೆಪರ್ಡ್ ವಾಸಸ್ಥಳವನ್ನು ಆಕರ್ಷಕ ರೀತಿಯಲ್ಲಿ ಸಿದ್ದಗೊಳಿಸುತ್ತಿದ್ದಾರೆ. ಅದಕ್ಕೆ ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗುತ್ತಿದೆ.
ಚರ್ಚ್‌ಗಳು ಈಗಾಗಲೇ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಹಬ್ಬದ ದಿನದಂದು ಸಲ್ಲಿಸುವ ಪ್ರಾರ್ಥನೆಗಾಗಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ತಾಲೀಮು ಕೊನೆಯ ಹಂತ ತಲುಪಿದೆ. 25 ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೂಡ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಕೆಜಿಎಫ್ ನಗರದಲ್ಲಿ ಕಂಡು ಬರುವ ಚರ್ಚ್‌ಗಳು ಮತ್ತು ಪ್ರಾರ್ಥನಾ ಮಂದಿರಗಳು ಬೆರಗುಗೊಳಿಸುತ್ತವೆ. ಸುಮಾರು 120ಕ್ಕೂ ಚರ್ಚ್ ಮತ್ತು ಪ್ರಾರ್ಥನಾ ಮಂದಿರಗಳು ನಗರದಲ್ಲಿ ಇವೆ. ಸಂತ ಜೋಸೆಫ್ ಕಾನ್ವೆಂಟ್‌ಗೆ ನೂರು ವರ್ಷ ದಾಟಿದೆ. ಕ್ರಿಶ್ಚಿಯನ್ ಸಮುದಾಯದ ರೋಮನ್ ಕ್ಯಾಥಲಿಕ್, ಪ್ರೊಟೆಸ್ಟೆಂಟ್, ಪೆಂಟಾಕಾಸ್ಟ್, ಸಿಎಸ್ಐ, ಎನ್ಎಸ್ಐ, ಸಿಲೋನ್ ಪೆಂಟಾಕಾಸ್ಟ್ ಹೀಗೆ ಹಲವಾರು ಪಂಗಡಗಳು ತಮ್ಮದೇ ಆದ ಚರ್ಚ್‌ಗಳನ್ನು ಕಟ್ಟಿಕೊಂಡು ಅದರ ಸದಸ್ಯರ ಒಳಿತಿಗಾಗಿ ಶ್ರಮಿಸುತ್ತಿವೆ.
ಕ್ರಿಸ್ಮಸ್ ಸಂದರ್ಭದಲ್ಲಿ ತಮ್ಮ ಚರ್ಚ್ ಸದಸ್ಯರುಗಳಿಗೆ ಅಕ್ಕಿ, ಬೆಲ್ಲ, ಎಣ್ಣೆ, ಸಕ್ಕರೆ, ಬಟ್ಟೆ ಮೊದಲಾದ ದಿನೋಪಯೋಗಿ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಕ್ರಿಸ್ಮಸ್ ಎಂದ ಕ್ಷಣ ಕೇಕ್ ಜ್ಞಾಪಕಕ್ಕೆ ಬರುತ್ತದೆ. ನಗರವೊಂದರಲ್ಲೇ ಬಿಕರಿಯಾಗುವ ಲಕ್ಷಾಂತರ ಕೇಕ್‌ಗಳಿಗಾಗಿ ಕಳೆದ ಒಂದು ವಾರದಿಂದ ಬೇಕರಿ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಬೇಕರಿ ಮುಂದೆ ಗ್ರಾಹಕರ ಸರತಿ ಸಾಲು ತಡೆಯವುದೇ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಸಮಯದಲ್ಲಿ ಬ್ರೆಡ್ ಮತ್ತು ಬನ್ ತಯಾರು ಮಾಡಲು ಸಹ ಬೇಕರಿ ಮಾಲೀಕರಿಗೆ ಪುರುಸೊತ್ತು ಇರುವುದಿಲ್ಲ.
ಆಂಗ್ಲೋ ಇಂಡಿಯನ್ ಸಮುದಾಯ ಹೆಚ್ಚಾಗಿದ್ದ ಸಂದರ್ಭದಲ್ಲಿ ಕ್ರಿಸ್ಮಸ್ ವಿಶೇಷ ಕಳೆಯನ್ನು ಹೊಂದಿತ್ತು. ಆಂಗ್ಲೋ ಇಂಡಿಯನ್ ಶೈಲಿಯಲ್ಲಿ ಬಟ್ಟೆ ಧರಿಸಿದ ಸಮುದಾಯದ ಮಹಿಳೆಯರು ಆಕರ್ಷಣೆಯ ಬಿಂದುವಾಗಿರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆಂಗ್ಲೋ ಇಂಡಿಯನ್ನರ ಸಂಖ್ಯೆ ಕಡಿಮೆಯಾದ ಕಾರಣ, ಸಮುದಾಯದ ಆಕರ್ಷಣೆ ಉಳಿದಿಲ್ಲ.
ಬಟ್ಟೆ ಅಂಗಡಿಗಳು ಮತ್ತು ಚಿನ್ನಾಭರಣದ ಶೋರೂಂಗಳು ಸಹ ಕ್ರಿಸ್ಮಸ್ ಸಡಗರಕ್ಕೆ ಸಜ್ಜಾಗಿವೆ. ಗ್ರಾಹಕರನ್ನು ಸೆಳೆಯಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಕ್ರಿಸ್ಮಸ್‌ನಿಂದ ಹೊಸ ವರ್ಷದವರೆಗೆ ಮಾಂಸದ ಮಾರುಕಟ್ಟೆ ಕೂಡ ಸಿಂಗಾರಗೊಂಡಿರುತ್ತದೆ. ರಾಬರ್ಟಸನ್ ಪೇಟೆ ಮತ್ತು ಆಂಡರಸನ್ ಪೇಟೆ, ಎಂ.ಜಿ. ರಸ್ತೆಯ ಮಾರುಕಟ್ಟೆಯ ಮಾಂಸದಂಗಡಿಗಳ ಮುಂದೆ ಜನ ಕಿಕ್ಕಿರಿದು ತುಂಬಿರುತ್ತಾರೆ.
ಡಿಸೆಂಬರ್ ಕೊನೆಯ ವಾರ ಸಾಮಾನ್ಯವಾಗಿ ನಗರವು ಕ್ರಿಸ್ಮಸ್ ಸಂಭ್ರಮವನ್ನು ತುಂಬಿಕೊಂಡಿರುತ್ತದೆ. ಮಕ್ಕಳು ಕಾಲೊನಿಗಳಲ್ಲಿ ಯುವಕರು ಶಪರ್ಡ್ ಶಿಬಿರದ ಬಳಿ ಸುಳಿದಾಡುತ್ತಾ ನಲಿಯುವ ದೃಶ್ಯಗಳು ಕಾಣಬಹುದು ಲೋನಿಗಳಲ್ಲಿ ಯುವಕರು ಏರ್ಪಡಿಸುವ ಶಪರ್ಡ್ ಶಿಬಿರದ ಬಳಿ ಸುಳಿದಾಡುತ್ತ ನಲಿಯುವ ದೃಶ್ಯ ಕಾಣಬಹುದು.
ಸಹೋದರತ್ವ ಬಿಂಬಿಸುವ ಹಬ್ಬ
ಜಾತ್ಯತೀತ ನೆಲೆಯಲ್ಲಿ ಕ್ರಿಸ್ಮಸ್ ಹಬ್ಬ ನೋಡಬೇಕೆಂದರೆ ಕೆಜಿಎಫ್ ನಗರಕ್ಕೆ ಬರಬೇಕು. ಬಹುತೇಕ ಎಲ್ಲಾ ಧರ್ಮಿಯರು ಈ ಹಬ್ಬವನ್ನು ಆಚರಿಸುವ ಪದ್ಧತಿ ನಗರದಲ್ಲಿದೆ. ಕ್ರಿಶ್ಚಿಯನ್ನರ ಜೊತೆಗೆ ಹಿಂದೂಗಳು ಕೂಡ ಸಕ್ರಿಯವಾಗಿ ಪಾಲ್ಗೊಂಡು ಸಹೋದರತ್ವ ಬಿಂಬಿಸುತ್ತಿರುವ ಹಬ್ಬ ಇದಾಗಿದೆ. ಬ್ರಿಟಿಷರು ಮತ್ತು ಯೂರೋಪಿಯನ್ನರು ಕೆಜಿಎಫ್‌ನಲ್ಲಿ ವಾಸ ಮಾಡಲು ಶುರು ಮಾಡಿದಾಗ ಕ್ರಿಸ್ಮಸ್ ಹಬ್ಬವನ್ನು ನಗರಕ್ಕೆ ಪರಿಚಯಿಸಿದರು. ನಂತರ ದಿನ ಕಳೆದಂತೆ ಕ್ರಿಶ್ಚಿಯನ್ ಧರ್ಮ ವ್ಯಾಪಕವಾಗಿ ಹಬ್ಬಿದಂತೆಲ್ಲಾ ಆಚರಣೆ ಕೂಡ ಸಾರ್ವತ್ರಿಕವಾಯಿತು. ಇದೊಂದು ಎಲ್ಲಾ ಸಮುದಾಯದ ಮತ್ತು ಸಾರ್ವಜನಿಕ ಹಬ್ಬದಂತೆ ನಗರದಲ್ಲಿ ಆಚರಿಸಲಾಗುತ್ತದೆ. ಯೇಸು ದೇವನನ್ನು ವಿವಿಧ ಬಗೆಯಲ್ಲಿ ವಿವಿಧ ಕೋಮುಗಳ ಜನತೆ ಕೂಡ ಆರಾಧಿಸುತ್ತಾರೆ. ಕ್ರಿಶ್ಚಿಯನ್ನರ ಜೊತೆಗೆ ಇತರರು ಸಹ ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್‌ಗೆ ಹೋಗುವ ಸನ್ನಿವೇಶ ಎಲ್ಲೆಡೆ ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.